ADVERTISEMENT

ಅಮೆರಿಕ– ಇರಾನ್‌: ಪ್ರತೀಕಾರದ ಬೆದರಿಕೆ, ಕದನದ ಭೀತಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 20:12 IST
Last Updated 3 ಜನವರಿ 2020, 20:12 IST
ಇಸ್ರೇಲ್‌–ಸಿರಿಯಾ ಗಡಿಯಲ್ಲಿ ಇಸ್ರೇಲ್ ಸೇನೆಯ ಟ್ಯಾಂಕ್‌ ಅನ್ನು ಯುದ್ಧಸನ್ನದ್ಧವಾಗಿ ನಿಲ್ಲಿಸಲಾಗಿದೆ. –ಎಎಫ್‌ಪಿ ಚಿತ್ರಗಳು
ಇಸ್ರೇಲ್‌–ಸಿರಿಯಾ ಗಡಿಯಲ್ಲಿ ಇಸ್ರೇಲ್ ಸೇನೆಯ ಟ್ಯಾಂಕ್‌ ಅನ್ನು ಯುದ್ಧಸನ್ನದ್ಧವಾಗಿ ನಿಲ್ಲಿಸಲಾಗಿದೆ. –ಎಎಫ್‌ಪಿ ಚಿತ್ರಗಳು   

ಟೆಹ್ರಾನ್/ಬಾಗ್ದಾದ್ (ಎಪಿ/ಎಫ್‌ಪಿ/ರಾಯಿಟರ್ಸ್): ಇರಾನ್‌ನ ಸೇನೆಯ ‘ರೆವಲ್ಯೂಷನ್ ಗಾರ್ಡ್‌’ ಪಡೆಯ ಮುಖ್ಯಸ್ಥ ಮೇಜರ್ ಜನರಲ್ ಖಾಸಿಂ ಸುಲೇಮಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳುವುದಾಗಿ ಇರಾನ್‌ ಬೆದರಿಕೆ ಹಾಕಿದೆ. ಇರಾನ್‌ನ ಮಿತ್ರ ರಾಷ್ಟ್ರಗಳೂ ಪ್ರತೀಕಾರದ ಬೆದರಿಕೆ ಒಡ್ಡಿವೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಭೀತಿ ಆವರಿಸಿದೆ.

‘ನಮ್ಮ ಜನರಲ್ ಅವರ ರಕ್ತದ ಕಲೆ ಹತ್ತಿರುವ ಶತ್ರುಗಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ’ ಎಂದುಇರಾನ್ ಸರ್ವೋಚ್ಚ ನಾಯಕ ಅಯಾತ್‌ಉಲ್ಲಾ ಅಲಿ ಖೊಮೇನಿ ಹೇಳಿದ್ದಾರೆ.

‘ನಮ್ಮ ಜನರಲ್ ಹುತಾತ್ಮರಾಗಿದ್ದಾರೆ. ಇಷ್ಟು ವರ್ಷಗಳ ಕಾಲ ಅವರು ಪಟ್ಟ ಶ್ರಮಕ್ಕೆ ದೊರೆತ ಪ್ರತಿಫಲವಿದು. ಅವರ ಹತ್ಯೆಯು ಭೂಮಿಯ ಮೇಲಿನ ಅತ್ಯಂತ ಕ್ರೂರ ಕೃತ್ಯವಾಗಿದೆ. ಅವರ ಅನುಪಸ್ಥಿತಿ ಕ್ರೂರವಾದುದು. ಆದರೆ, ಅವರ ಕೆಲಸ ಮತ್ತು ಅವರು ತೋರಿದ್ದ ಹಾದಿ ನಿಲ್ಲುವುದಿಲ್ಲ. ಹೋರಾಟವನ್ನು ಮುಂದುವರಿಸಿ, ಗೆಲುವು ಮುಟ್ಟುವುದರಿಂದ ನಮ್ಮ ವೈರಿ ಮತ್ತಷ್ಟು ದುರ್ಬಲವಾಗುತ್ತಾನೆ’ ಎಂದುಅವರು ಹೇಳಿದ್ದಾರೆ.

ADVERTISEMENT

ಉಗ್ರರ ಬೆದರಿಕೆ:‘ಕೊಲೆಗಡುಕರಿಗೆ ತಕ್ಕ ಶಿಕ್ಷೆ ನೀಡುವುದು ಎಲ್ಲಾ ಬಂಡುಕೋರರ ಜವಾಬ್ದಾರಿ. ರಣರಂಗದಲ್ಲಿ ನಮ್ಮ ಪತಾಕೆಗಳನ್ನು ಹಾರಿಸುತ್ತೇವೆ. ಜನರಲ್ ಸುಲೇಮಾನಿಯ ರಕ್ತತರ್ಪಣದ ಆಶೀರ್ವಾದದಿಂದ ನಾವು ಗೆಲುವು ಸಾಧಿಸುತ್ತೇವೆ’ ಎಂದು ಲೆಬನಾನ್‌ನ ಹಿಜ್ಬುಲ್ ಉಗ್ರರ ಸಂಘಟನೆ ಮುಖ್ಯಸ್ಥ ಹಸನ್ ನಸ್ರುಲ್ಲಾ ಹೇಳಿದ್ದಾರೆ.

ಇಸ್ರೇಲ್‌ ವಿರುದ್ಧ ಹೋರಾಟ ನಡೆಸುತ್ತಿರುವ ಹಿಜ್ಬುಲ್ ಉಗ್ರ ಸಂಘಟನೆಗೆ ಇರಾನ್ ಮೊದಲಿನಿಂದಲೂ ಬೆಂಬಲ ನೀಡಿದೆ. ಸುಲೇಮಾನಿ ಸಹ ಈ ಉಗ್ರರಿಗೆ ನೆರವು ನೀಡುತ್ತಿದ್ದರು. ಹೀಗಾಗಿ ಈ ಉಗ್ರರು ಪ್ರತೀಕಾರ ತೆಗೆದುಕೊಳ್ಳುವ ಬೆದರಿಕೆ ಹಾಕಿದ್ದಾರೆ.

ಈ ಬೆದರಿಕೆ ಬಂದ ಬೆನ್ನಲ್ಲೇ, ಲೆಬನಾನ್ ಗಡಿಯಲ್ಲಿ ಇಸ್ರೇಲ್ ತನ್ನ ಸೇನೆಯನ್ನು ಸಜ್ಜುಗೊಳಿಸಿದೆ. ನೂರಾರು ಯುದ್ಧ ಟ್ಯಾಂಕ್‌ಗಳನ್ನು ಯುದ್ಧಸನ್ನದ್ಧವಾಗಿ ನಿಲ್ಲಿಸಲಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗ್ರೀಸ್‌ನ ಪ್ರವಾಸವನ್ನು ಮೊಟಕುಗೊಳಿಸಿ, ಸ್ವದೇಶಕ್ಕೆ ಹಿಂತಿರುಗಿದ್ದಾರೆ.

ಇರಾಕ್ ಬಿಡುತ್ತಿರುವ ಅಮೆರಿಕನ್ನರು:‘ಅಮೆರಿಕದ ದಾಳಿಯಲ್ಲಿ ಇರಾಕ್‌ನ ಸೇನೆಯ ಕಮಾಂಡರ್ ಸಹ ಹತ್ಯೆಯಾಗಿದ್ದಾರೆ. ಇರಾಕ್‌ನ ಅಧಿಕೃತ ಹುದ್ದೆಯಲ್ಲಿ ಇದ್ದ ವ್ಯಕ್ತಿಯನ್ನು ಕೊಲ್ಲಲಾಗಿದೆ. ಇದು ಇರಾಕ್‌ನ ಸರ್ಕಾರ ಮತ್ತು ಜನರ ಮೇಲೆ ನಡೆಸಿದ ದಾಳಿಯೇ ಆಗಿದೆ. ಇದು ವಿನಾಶಕಾರಿ ಯುದ್ಧಕ್ಕೆ ನಾಂದಿಯಾಗಲಿದೆ’ ಎಂದು ಇರಾಕ್‌ ಸರ್ಕಾರ ಬೆದರಿಕೆ ಹಾಕಿದೆ.

ಇರಾಕ್‌ನಲ್ಲಿ ನೆಲೆಸಿರುವ ಅಮೆರಿಕನ್ನರು ತಕ್ಷಣವೇ ಸ್ವದೇಶಕ್ಕೆ ಹಿಂತಿರುಗಬೇಕು ಎಂದು ಅಮೆರಿಕವು ಸೂಚಿಸಿದೆ.ಇರಾಕ್ ಸರ್ಕಾರದ ಬೆದರಿಕೆಯ ಬೆನ್ನಲ್ಲೇ, ಅಮೆರಿಕವು ಈ ಆದೇಶ ಹೊರಡಿಸಿದೆ. ಇರಾಕ್‌ನ ತೈಲಾಗಾರ ಮತ್ತು ತೈಲ ಸಂಸ್ಕರಣ ಘಟಕಗಳಲ್ಲಿ ದುಡಿಯುತ್ತಿರುವ ಅಮೆರಿಕನ್ನರು ಶುಕ್ರವಾರ ಸಂಜೆಯೇ ತಮ್ಮ ದೇಶದತ್ತ ಹೊರಟಿದ್ದಾರೆ. ಇದಕ್ಕಾಗಿ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಲಾಗಿದೆ.

ಸ್ನೇಹ– ದ್ವೇಷದ ಸಂಬಂಧ

ಎಂಟು ದಶಕಗಳಲ್ಲಿ ಅಮೆರಿಕ– ಇರಾನ್‌ ಸಂಬಂಧ ವಿಚಿತ್ರ ತಿರುವುಗಳನ್ನು ಕಂಡಿದೆ. ಹಿಂದೆ ಆಪ್ತ ಸ್ನೇಹಿತರಾಗಿದ್ದ ರಾಷ್ಟ್ರಗಳು ಬದ್ಧ ವೈರಿಗಳಾಗಿವೆ. ಈ ರಾಷ್ಟ್ರಗಳ ಸಂಬಂಧದ ಏರುಪೇರುಗಳು...

* 1941: ನಾಜಿ ಪ್ರಭಾವವನ್ನು ತಗ್ಗಿಸಲು ಬ್ರಿಟನ್‌ ಹಾಗೂ ಸೋವಿಯತ್‌ ಒಕ್ಕೂಟದ ಪಡೆಗಳಿಂದ ಪಶ್ಚಿಮ ಇರಾನ್‌ ಮೇಲೆ ದಾಳಿ

* 1953: ಅಮೆರಿಕ ಮತ್ತು ಬ್ರಿಟಿಷ್‌ ಗುಪ್ತಚರ ವಿಭಾಗದ ಬೆಂಬಲದಲ್ಲಿ ಶಾ ನೇತೃತ್ವದಲ್ಲಿ ಇರಾನ್‌ನಲ್ಲಿ ದಂಗೆ. ಮೊಸಾದಿಗ್‌ ಪದಚ್ಯುತಿ. ತೈಲ ವಿಚಾರದಲ್ಲಿ ಸಹಕಾರ, ಕಮ್ಯುನಿಸ್ಟ್‌ ವಿಸ್ತರಣೆ ತಡೆಯನ್ನು ಖಾತ್ರಿಗೊಳಿಸಿದ ಬ್ರಿಟನ್‌– ಅಮೆರಿಕ

* 1963–64: ಅಮೆರಿಕದ ಜೊತೆಗೆ ಶಾ ಅವರ ಸಂಬಂಧದ ಬಗ್ಗೆ ಹೇಳಿಕೆ ನೀಡಿದ್ದ ಧಾರ್ಮಿಕ ನಾಯಕ ಅಯತ್‌ ಉಲ್ಲಾ ಖೊಮೇನಿ ಟರ್ಕಿಗೆ ಗಡಿಪಾರು

* 1978: ಇರಾನ್‌ನಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣ. ಸರ್ಕಾರದ ವಿರುದ್ಧ ಖೊಮೇನಿಯಿಂದ ಪ್ಯಾರಿಸ್‌ನಲ್ಲಿ ಚಳವಳಿ ಆರಂಭ

* 1979: ಚಳವಳಿಯಿಂದಾಗಿ ಅಧಿಕಾರ ಕಳೆದುಕೊಂಡ ಶಾ. ಒಂದು ತಿಂಗಳ ಬಳಿಕ ಕ್ಯಾನ್ಸರ್‌ ಚಿಕಿತ್ಸೆಗಾಗಿ ಅಮೆರಿಕಕ್ಕೆ ಪ್ರಯಾಣ. ಇರಾನ್‌ಗೆ ಮರಳಿಬಂದ ಖೊಮೇನಿಯಿಂದ ‘ಇಸ್ಲಾಮಿಕ್‌ ಗಣರಾಜ್ಯ’ದ ಘೋಷಣೆ. ಖೊಮೇನಿ ಬೆಂಬಲದೊಂದಿಗೆ ವಿದ್ಯಾರ್ಥಿಗಳಿಂದ ಅಮೆರಿಕದ ದೂತಾವಾಸದ ಮೇಲೆ ದಾಳಿ. ಅಮೆರಿಕದ 54 ಮಂದಿ ಪ್ರಜೆಗಳ ಅಪಹರಣ.

* 1980: ಇರಾನ್‌ ಜೊತೆಗಿನ ಎಲ್ಲಾ ಒಪ್ಪಂದಗಳನ್ನು ರದ್ದುಪಡಿಸಿದ ಅಮೆರಿಕ. ರಫ್ತು ನಿಷೇಧ, ಇರಾನ್‌ನ ರಾಜತಾಂತ್ರಿಕರ ವಾಪಸ್‌.

* ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಅಮೆರಿಕದ ಪ್ರಯತ್ನ ವಿಫಲ. 8 ಮಂದಿ ಸೈನಿಕರನ್ನು ಹೊತ್ತು ತರುತ್ತಿದ್ದ ಅಮೆರಿಕದ ಸೇನಾ ವಿಮಾನವು ಕೆಟ್ಟ ಹವಾಮಾನದ ಕಾರಣದಿಂದ ಅಪಘಾತಕ್ಕೆ ಒಳಗಾಗಿ ಎಲ್ಲಾ ಸೈನಿಕರ ಸಾವು

* 1981: ಅಮೆರಿಕದ ಒತ್ತೆಯಾಳುಗಳ ಬಿಡುಗಡೆ

* 1986: ಒತ್ತೆಯಾಳುಗಳ ಬಿಡುಗಡೆಗಾಗಿ ಅಮೆರಿಕವು ಇರಾನ್‌ ಜೊತೆ ಶಸ್ತ್ರಾಸ್ತ್ರ ಒಪ್ಪಂದ ಮಾಡಿಕೊಂಡಿತ್ತು ಎಂಬ ವಿಚಾರ ಬಹಿರಂಗ

* 1988: ಪರ್ಷಿಯನ್‌ ಕೊಲ್ಲಿಯ ಮೇಲೆ ಹಾರಾಡುತ್ತಿದ್ದ ಇರಾನ್‌ನ ವಿಮಾನವನ್ನು ಹೊಡೆದುರುಳಿಸಿದ ಅಮೆರಿಕ. 290 ಪ್ರಯಾಣಿಕರ ಸಾವು.

* 1993: ಇರಾನ್‌ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ, ಅಣ್ವಸ್ತ್ರಗಳನ್ನು ತಯಾರಿಸುತ್ತಿದೆ ಮತ್ತು ಮಧ್ಯಪ್ರಾಚ್ಯದ ಶಾಂತಿಗೆ ಅಪಾಯ ಒಡ್ಡುತ್ತಿದೆ ಎಂದು ಆರೋಪಿಸುವ ಮೂಲಕ ಇರಾನ್‌ ಅನ್ನು ಏಕಾಂಗಿಯಾಗಿಸುವ ಪ್ರಯತ್ನ ಕ್ಲಿಂಟನ್‌ ಸರ್ಕಾರದಿಂದ ಆರಂಭ

* 1997: ಇರಾನ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಮೊಹಮ್ಮದ್‌ ಖಟಾಮಿ ಗೆಲುವು. ಇರಾನ್‌ ಜತೆ ಮಾತುಕತೆಗೆ ಕ್ಲಿಂಟನ್‌ ಸರ್ಕಾರದ ಒಪ್ಪಿಗೆ

* 2000: ಇರಾನ್‌ನಿಂದ ಐಷಾರಾಮಿ ಉಪಕರಣಗಳ ಆಮದಿನ ಮೇಲೆ ಹೇರಿದ್ದ ನಿಷೇಧವನ್ನು ಹಿಂತೆಗೆದುಕೊಂಡ ಅಮೆರಿಕ. 1953ರಲ್ಲಿ ಇರಾನ್‌ನಲ್ಲಿ ನಡೆದಿದ್ದ ದಂಗೆಯಲ್ಲಿ ತನ್ನ ಕೈವಾಡವಿತ್ತು ಎಂದು ಒಪ್ಪಿ, ಅದಕ್ಕಾಗಿ ಕ್ಷಮೆಯಾಚನೆ

*
ಅಮೆರಿಕದ ಸೇನೆಯು ಇರಾಕ್‌ನಲ್ಲಿ ಇರಲು ನಾವು ಹೇರಿದ್ದ ಷರತ್ತುಗಳನ್ನು ಉಲ್ಲಂಘಿಸಿದೆ. ಇರಾಕ್‌ನ ಕಮಾಂಡರ್ ಅನ್ನೂ ಹತ್ಯೆ ಮಾಡಿರುವುದು, ನಮ್ಮ ಸಾರ್ವಭೌಮತೆ ಮೇಲಿನ ದಾಳಿ.
–ಅದಿಲ್‌ ಅಬ್ದುಲ್‌ ಮಹ್ದಿ, ಇರಾಕ್‌ನ ಪ್ರಬಾರಿ ಪ್ರಧಾನಿ

*
ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಸೇನಾಬಲವನ್ನು ಪ್ರಯೋಗಿಸುವುದನ್ನು ಚೀನಾ ವಿರೋಧಿಸುತ್ತದೆ. ಈ ವಿಚಾರದಲ್ಲಿ ಅಮೆರಿಕವು ಸಂಯಮದಿಂದ ವರ್ತಿಸಬೇಕು.
–ಗೆಂಗ್ ಶಾಂಗ್, ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ

*
ಯುದ್ಧದ ಉನ್ಮಾದ ಏರುತ್ತಿರುವ ಈ ಸಂದರ್ಭದಲ್ಲಿ ಯಾವುದೋ ಒಂದು ಬಣದ ಪರ ನಿಲ್ಲುವುದಲ್ಲ. ಎರಡೂ ಬಣಗಳ ಜತೆ ಮಾತುಕತೆ ನಡೆಸುವುದು ಅತ್ಯಗತ್ಯವಾಗಿದೆ.
–ಅಮೆಲಿ ಡಿ ಮಾಂಚಲಿನ್, ಫ್ರಾನ್ಸ್‌ನ ಯೂರೋಪ್‌ ವ್ಯವಹಾರಗಳ ಸಚಿವೆ

*
ಸುಲೇಮಾನಿಯ ಹತ್ಯೆಯು ಅತ್ಯಂತ ದುಸ್ಸಾಹಸದ ಕೃತ್ಯ. ಇದರಿಂದ ಇಡೀ ಕೊಲ್ಲಿ ಪ್ರದೇಶದಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಅಮೆರಿಕವು ಇದರ ತಿರುಗೇಟು ಎದುರಿಸಬೇಕಾಗಬಹುದು.
–ಕೆ.ಕೊಶ್ಚೇವ್, ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರ

*
ಸುಲೇಮಾನಿ ಮತ್ತು ಆತನ ಪಡೆ ದೊಡ್ಡ ಬೆದರಿಕೆಯಾಗಿತ್ತು. ಆತ ಸತ್ತಿದ್ದಾನೆ. ಎಲ್ಲಾ ಬಣಗಳು ಈಗ ಶಾಂತಿಯತ್ತ ನಡೆಯಬೇಕು. ಸಂಘರ್ಷ ಮುಂದುವರಿಸುವುದು ಯಾರಿಗೂ ಬೇಕಿಲ್ಲ.
–ಡಾಮಿನಿಕ್ ರಾಬ್, ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.