ADVERTISEMENT

ಸಂಪೂರ್ಣ ವರದಿ ಶೀಘ್ರ ಕೈಸೇರಲಿದೆ: ಟ್ರಂಪ್‌

ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ ಪ್ರಕರಣ

ಪಿಟಿಐ
Published 18 ನವೆಂಬರ್ 2018, 18:21 IST
Last Updated 18 ನವೆಂಬರ್ 2018, 18:21 IST
ಟ್ರಂಪ್
ಟ್ರಂಪ್   

ವಾಷಿಂಗ್ಟನ್: ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ ಪ್ರಕರಣದತನಿಖೆ ನಂತರ ಕೇಂದ್ರೀಯ ಗುಪ್ತಚರ ಸಂಸ್ಥೆ(ಸಿಐಎ) ತಳೆದಿರುವ ನಿರ್ಧಾರದ ಬಗ್ಗೆ ಅದರ ಮುಖ್ಯಸ್ಥರ ಜೊತೆ ಮಾತನಾಡಿದ್ದು, ಮಂಗಳವಾರ ಸಂಪೂರ್ಣ ವರದಿ ಕೈಸೇರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಖಶೋಗ್ಗಿ ಹತ್ಯೆಗೆ ಸೌದಿ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಆದೇಶ ನೀಡಿದ್ದರು ಎಂದು ಸಿಐಎ ನಿರ್ಧಾರಕ್ಕೆ ಬಂದಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದ ಬೆನ್ನಲ್ಲೇ ಟ್ರಂಪ್‌ ಈ ಹೇಳಿಕೆ ನೀಡಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಟ್ರಂಪ್‌, ‘ಖಶೋಗ್ಗಿ ಹತ್ಯೆ ಪ್ರಕರಣದ ಕುರಿತು ಸಿಐಎ ಮುಖ್ಯಸ್ಥೆ ಗಿನಾ ಹಾಸ್ಪೆಲ್‌ ವಿಸ್ತೃತವಾಗಿ ತನಿಖೆ ನಡೆಸುತ್ತಿದ್ದಾರೆ’ ಎಂದಿದ್ದಾರೆ.

ADVERTISEMENT

ಹತ್ಯೆಯಲ್ಲಿ ಸೌದಿ ರಾಜಕುಮಾರನ ಕೈವಾಡ ಇದೆ ಎಂಬ ವರದಿಗಳ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್‌ ‘ಇದುವರೆಗೆ ಸಿಐಎ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಈ ಕುರಿತ ವರದಿಗಳು ಅಪಕ್ವ ವರದಿಗಳು’ ಎಂದು ಹೇಳಿದ್ದಾರೆ.

ಪತ್ರಕರ್ತನ ಹತ್ಯೆಗೆ ಯಾರು ಕಾರಣರಾಗಿದ್ದಾರೆ ಮತ್ತು ಯಾರು ಹತ್ಯೆ ನಡೆಸಿದ್ದಾರೆ ಎಂಬುದು ವರದಿಯಿಂದ ತಿಳಿದುಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯ ಅಂಕಣಕಾರಾಗಿದ್ದ ಖಶೋಗ್ಗಿ, ಅಕ್ಟೋಬರ್‌ 2ರಂದು ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯಾದ ಕಾನ್ಸುಲೇಟ್‌ ಕಚೇರಿಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದಾಗ, ಕಾನ್ಸುಲೇಟ್‌ ಕಚೇರಿಯಲ್ಲಿ ಖಶೋಗ್ಗಿ ಹತ್ಯೆ ನಡೆದಿದೆ ಎಂದು ಸೌದಿ ಹೇಳಿಕೆ ನೀಡಿತ್ತು.

ಹತ್ಯೆಯಲ್ಲಿ ರಾಜಕುಮಾರನ ಕೈವಾಡ ಇದೆ ಎಂಬ ಆರೋಪವನ್ನು ಸೌದಿ ಅರೇಬಿಯಾ ತಳ್ಳಿ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.