ADVERTISEMENT

ಅಪರೂಪದ ಖನಿಜಗಳ ಪೂರೈಕೆ: ಚೀನಾ, ಅಮೆರಿಕ ಒಪ್ಪಂದ

ಚೀನಾ ಸರಕುಗಳ ಮೇಲಿನ ಸುಂಕ ಶೇ 55ರಷ್ಟಾಗಲಿದೆ: ಟ್ರಂಪ್

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 14:48 IST
Last Updated 11 ಜೂನ್ 2025, 14:48 IST
-
-   

ವಾಷಿಂಗ್ಟನ್: ನೂತನ ಒಪ್ಪಂದದಡಿ, ಅಮೆರಿಕವು ಚೀನಾ‌ದಿಂದ ಅಯಸ್ಕಾಂತಗಳು ಹಾಗೂ ಅಪರೂಪದ ಖನಿಜಗಳನ್ನು (ರೇರ್ ಅರ್ತ್ ಎಲಿಮೆಂಟ್ಸ್) ಖರೀದಿಸಲಿದೆ. ಹೀಗಾಗಿ, ಚೀನಾದ ಸರಕುಗಳ ಮೇಲಿನ ಸುಂಕಗಳು ಶೇ 55ರಷ್ಟು ಹೆಚ್ಚಳವಾಗಲಿವೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬುಧವಾರ ಹೇಳಿದ್ದಾರೆ.

‘ಇದಕ್ಕೆ ಪ್ರತಿಯಾಗಿ, ಚೀನಾ ವಿದ್ಯಾರ್ಥಿಗಳು ಅಮೆರಿಕದ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಕೈಗೊಳ್ಳುವುದಕ್ಕೆ ಅವಕಾಶ ನೀಡಲಾಗುವುದು’ ಎಂದೂ ಹೇಳಿದ್ದಾರೆ.

ಆತಂಕ: ಅಪರೂಪದ ಖನಿಜಗಳ ವ್ಯಾಪಾರಕ್ಕೆ ಸಂಬಂಧಿಸಿ ಅಮೆರಿಕ ಮತ್ತು ಚೀನಾ ನಡುವೆ ಒಪ್ಪಂದ ಏರ್ಪಟ್ಟ ಬೆನ್ನಲ್ಲೇ, ಚೀನಾದ ಜಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಕಾರ್ಮಿಕರ ಶೋಷಣೆ ಹೆಚ್ಚಾಗುವ ಕುರಿತು ಮಾನವ ಹಕ್ಕುಗಳ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ADVERTISEMENT

ಟೈಟಾನಿಯಂ, ಲೀಥಿಯಂ, ಬೆರಿಲಿಯಂ ಹಾಗೂ ಮ್ಯಾಗ್ನೇಷಿಯಂನಂತಹ ಖನಿಜಗಳ ಗಣಿಗಾರಿಕೆ ಜಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ಹೆಚ್ಚು. ಇಲ್ಲಿಂದ ಪೂರೈಕೆಯಾಗುವ ಈ ಅಪರೂಪದ ಖನಿಜಗಳ ಮೇಲೆ ಜಾಗತಿಕ ಮಟ್ಟದ  ಅನೇಕ ಕಂಪನಿಗಳು ಅವಲಂಬಿತವಾಗಿವೆ.

ಜಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿನ ಗಣಿಗಳಲ್ಲಿ ಉಯಿಘರ್ ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಚೀನಾ ಸರ್ಕಾರ ಇಲ್ಲಿ ಕಾರ್ಮಿಕಸ್ನೇಹಿ ನೀತಿ ಅನುಸರಿಸುವುದಿಲ್ಲ. ಹೆಚ್ಚು ದುಡಿಮೆ–ಕಡಿಮೆ ವೇತನದಂತಹ ಕಠಿಣ ನೀತಿಗಳನ್ನು ಅನುಸರಿಸಲಾಗುತ್ತಿದೆ. ನೂತನ ಒಪ್ಪಂದದಿಂದಾಗಿ ಈ ಕಾರ್ಮಿಕರ ಶೋಷಣೆ ಹೆಚ್ಚಲಿದೆ ಎಂದು ನೆದರ್ಲೆಂಡ್ಸ್ ಮೂಲದ ಗ್ಲೋಬಲ್ ರೈಟ್ಸ್‌ ಕಾಂಪ್ಲಿಯನ್ಸ್‌ ಸಂಘಟನೆ ಆತಂಕ ವ್ಯಕ್ತಪಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವಾಲಯ, ‘ಜಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ದುಡಿಯುವುದಕ್ಕಾಗಿ ಬಲವಂತದಿಂದ ಯಾರನ್ನೂ ವರ್ಗಾವಣೆ ಮಾಡಿಲ್ಲ’ ಎಂದು ಹೇಳಿದೆ.

‘ಜಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ಕಾರ್ಮಿಕ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂಬ ಆರೋಪಗಳು ಸುಳ್ಳು. ಚೀನಾ ವಿರೋಧಿ ಶಕ್ತಿಗಳು ಇಂತಹ ಸುಳ್ಳುಗಳನ್ನು ಹಬ್ಬಿಸುತ್ತಿವೆ’ ಎಂದೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.