ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು
ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ‘ಯುದ್ಧ ಬಾಧಿತ ಗಾಜಾಪಟ್ಟಿಯನ್ನು ಅಮೆರಿಕ ತನ್ನ ಸುಪರ್ದಿಗೆ ಪಡೆದು, ಸಮಗ್ರವಾಗಿ ಆರ್ಥಿಕ ಅಭಿವೃದ್ಧಿ ಚಟುವಟಿಕೆ ಕೈಗೊಂಡು, ಉದ್ಯೋಗಗಳನ್ನೂ ಸೃಷ್ಟಿಸಲಿದೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಜೊತೆ ಶ್ವೇತಭವನದಲ್ಲಿ ಬುಧವಾರ ನಡೆಸಿದ ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಅಚ್ಚರಿಯ ತೀರ್ಮಾನ ಪ್ರಕಟಿಸಿದರು.
ಟ್ರಂಪ್ ಅವರ ಈ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಧ್ಯಪೂರ್ವದಲ್ಲಿ ಅಮೆರಿಕದ ಸಹವರ್ತಿ ರಾಷ್ಟ್ರಗಳಾಗಿರುವ ಈಜಿಪ್ಟ್, ಜೋರ್ಡಾನ್ ಮತ್ತು ಇತರೆ ರಾಷ್ಟ್ರಗಳು ಈ ಪ್ರಸ್ತಾವವನ್ನು ತಿರಸ್ಕರಿಸಿವೆ. ‘ಇದು, ಬೆಂಕಿಗೆ ತುಪ್ಪ ಸುರಿಯುವ ಕ್ರಮ’ ಎಂದು ಹಮಾಸ್ ಹೇಳಿದೆ.
ಪ್ರಸ್ತುತ, ಗಾಜಾ ಪಟ್ಟಿಯಲ್ಲಿ ನೆಲಸಿರುವ ಸುಮಾರು 20 ಲಕ್ಷ ಪ್ಯಾಲೆಸ್ಟೀನಿಯರು ಅಲ್ಲಿಂದ ನಿರ್ಗಮಿಸಬೇಕು. ಇವರಿಗೆ ಮಧ್ಯಪೂರ್ವದ ಇತರೆ ರಾಷ್ಟ್ರಗಳಲ್ಲಿ ನೆಲೆ ಒದಗಿಸಬೇಕು ಎಂದು ಟ್ರಂಪ್ ಅವರು ಇದೇ ವೇಳೆ ನೇತನ್ಯಾಹು ಉಪಸ್ಥಿತಿಯಲ್ಲಿ ಹೇಳಿದರು.
‘ಇಸ್ರೇಲ್ ಅಷ್ಟೇ ಅಲ್ಲ, ಮಧ್ಯಪೂರ್ವ ವಲಯಕ್ಕೆ ಸದೃಢ ವಲಯವಾಗಿ ಗಾಜಾಪಟ್ಟಿ ರೂಪಿಸಲಿದ್ದೇವೆ. ಶೀಘ್ರವೇ ಭೇಟಿ ನೀಡುತ್ತೇನೆ. ಸೇನೆ ರವಾನೆ ಸೇರಿ ಎಲ್ಲ ಅಗತ್ಯ ಕ್ರಮವಹಿಸುತ್ತೇವೆ’ ಎಂದರು.
‘ಗಾಜಾಪಟ್ಟಿಯಲ್ಲಿ ಇರುವ ಅಪಾಯಕಾರಿ, ಸ್ಫೋಟಿಸದ ಬಾಂಬ್‌ಗಳು, ಇತರೆ ಶಸ್ತ್ರಾಸ್ತ್ರಗಳ ನಿಷ್ಕ್ರಿಯ ಗೊಳಿಸಲಿದೆ. ಅವಶೇಷಗಳ ತೆರವುಗೊಳಿಸಲಿದೆ. ಉತ್ತಮ ವಾತಾವರಣ ರೂಪಿಸಲಿದೆ’ ಎಂದರು.
ಅಮೆರಿಕವು ಈ ನೆಲದ ಸಾರ್ವಭೌಮತೆಯನ್ನು ತನ್ನ ಹಿಡಿತಕ್ಕೆ ಪಡೆಯಲಿದೆಯೇ? ಶಾಶ್ವತವಾಗಿ ಸ್ವಾಧೀನ ಪಡೆಯಲಿದೆಯೇ ಎಂಬ ಪ್ರಶ್ನೆಗೆ, ‘ದೀರ್ಘಾವಧಿ ಸುಪರ್ದಿಯನ್ನೇ ಎದುರು ನೋಡುತ್ತಿದ್ದೇನೆ. ಮಧ್ಯಪೂರ್ವದ ವಿಸ್ತೃತ ಸ್ಥಿರತೆಗೆ ಇದು ಅಗತ್ಯ’ ಎಂದರು.
ಜಗತ್ತಿನ ಪ್ರತಿನಿಧಿಗಳ ನೆಲೆ: ಮರುನಿರ್ಮಾಣ ಬಳಿಕ ಗಾಜಾಪಟ್ಟಿಯಲ್ಲಿ ಯಾರು ನೆಲಸುತ್ತಾರೆ ಎಂಬ ಪ್ರಶ್ನೆಗೆ ಟ್ರಂಪ್, ‘ನನ್ನ ಕಾಲ್ಪನಿಕ ಜಗತ್ತಿನ, ವಿಶ್ವದ ಜನ ನೆಲಸುತ್ತಾರೆ. ಬಹುಶಃ ಅದು ಅಂತರರಾಷ್ಟ್ರೀಯ, ವಿಶ್ವಾಸಾರ್ಹವಾದ ಸ್ಥಳವಾಗಲಿದೆ’ ಎಂದರು.
‘ಬಹುಶಃ ಜಗತ್ತಿನ ಎಲ್ಲ ಪ್ರತಿನಿಧಿಗಳು ಅಲ್ಲಿರುತ್ತಾರೆ. ಪ್ಯಾಲೆಸ್ಟೀನಿಯರೂ ಇರುತ್ತಾರೆ. ಹಲವು ಜನ ಸಮುದಾಯದವರು ಇರುತ್ತಾರೆ. ಇತಿಹಾಸದಿಂದ ನಾವು ಪಾಠ ಕಲಿಯಬೇಕು. ಇತಿಹಾಸ ಉಳಿಸುವುದು, ಪುನರಾವರ್ತನೆ ಸಲ್ಲದು. ಹೊಸತನ್ನು ಮಾಡುವ ಅವಕಾಶ ನಮಗೆ ಸಿಕ್ಕಿದೆ’ ಎಂದು ಪ್ರತಿಪಾದಿಸಿದರು.
ಪ್ಯಾಲೆಸ್ಟೀನಿಯರನ್ನು ಆ ನೆಲದಿಂದ ಕದಲಿಸದೇ ಗಾಜಾಪಟ್ಟಿ ಮರು ನಿರ್ಮಾಣ ಈಗಿನ ಅಗತ್ಯ.–ವಿದೇಶಾಂಗ ಸಚಿವಾಲಯ, ಈಜಿಪ್ಟ್
ಸ್ವತಂತ್ರ ಪ್ಯಾಲೆಸ್ಟೀನ್ ರಾಷ್ಟ್ರದ ನಿರ್ಮಾಣ ಆಗಲಿ ಎಂಬುದು ನಮ್ಮ ನಿಲುವು. ಪ್ಯಾಲೆಸ್ಟೀನಿಯರ ಕಾನೂನುಬದ್ಧ ಹಕ್ಕು ಕಸಿಯುವುದು ಸರಿಯಲ್ಲ.–ಮೊಹಮ್ಮದ್ ಬಿನ್ ಸಲ್ಮಾನ್, ಸೌದಿ ಅರೇಬಿಯದ ರಾಜ
ಮಧ್ಯ ಪೂರ್ವ ಪ್ರಾಂತ್ಯದಲ್ಲಿ ಎರಡು ರಾಷ್ಟ್ರಗಳ ನಿರ್ಮಾಣವೇ ಈಗಿನ ಸಮಸ್ಯೆಗೆ ಪರಿಹಾರ. ನಮ್ಮ ಈ ನಿಲುವಿನಲ್ಲಿ ಬದಲಾವಣೆ ಇಲ್ಲ.–ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಚೀನಾ
ಪ್ಯಾಲೆಸ್ಟೀನಿಯರ ಜನ್ಮಸಿದ್ಧ ಹಕ್ಕುಗಳನ್ನು ರಕ್ಷಿಸಬೇಕು. ಟ್ರಂಪ್ ಅವರು ಏನು ಮಾಡಬೇಕು ಎಂದಿದ್ದಾರೋ ಅದು ಅಂತರರಾಷ್ಟ್ರೀಯ ಕಾಯ್ದೆಯ ಗಂಭೀರ ಉಲ್ಲಂಘನೆ.–ಮಹಮೂದ್ ಅಬ್ಬಾಸ್. ಅಧ್ಯಕ್ಷ ಪ್ಯಾಲೆಸ್ಟೀನ್
ಗಾಜಾ ಪಟ್ಟಿ ಪ್ಯಾಲೆಸ್ಟೀನಿಯರಿಗೇ ಸೇರಿದ್ದು. ಅಲ್ಲಿಂದ ಅವರನ್ನು ಒಕ್ಕಲೆಬ್ಬಿಸುವುದು ಸ್ವೀಕಾರಾರ್ಹವಲ್ಲ ಮತ್ತು ಅಂತರರಾಷ್ಟ್ರೀಯ ಕಾಯ್ದೆಗೆ ವಿರುದ್ಧವಾದುದು.–ಅನ್ನಾಲೆನಾ ಬೇರ್ಬಾಕ್, ವಿದೇಶಾಂಗ ಸಚಿವರು ಜರ್ಮನ್.
ಗೊಂದಲ ಬಿಗುವಿನ ಸ್ಥಿತಿ ಹೆಚ್ಚಲಿದೆ –ಹಮಾಸ್
ದುಬೈ (ಎ.ಪಿ): ಗಾಜಾ ಪಟ್ಟಿಯನ್ನು ಸುಪರ್ದಿಗೆ ಪಡೆಯುವ ಟ್ರಂಪ್ ಅವರ ತೀರ್ಮಾನವನ್ನು ಹಮಾಸ್ ತಿರಸ್ಕರಿಸಿದೆ. ‘ಗಾಜಾಪಟ್ಟಿಯಲ್ಲಿನ ನರಮೇಧಕ್ಕೆ ಇಸ್ರೇಲ್ ಅನ್ನು ಶಿಕ್ಷಿಸುವ ಬದಲಿಗೆ ಈ ಮೂಲಕ ಪುರಸ್ಕಾರ ನೀಡಲಾಗುತ್ತಿದೆ’ ಹಮಾಸ್ ಬಂಡುಕೋರ ಸಂಘಟನೆ ಪ್ರತಿಕ್ರಿಯಿಸಿದೆ. ‘ಪ್ಯಾಲೆಸ್ಟೀನಿಯರನ್ನು ಎತ್ತಂಗಡಿ ಮಾಡುವುದು ಈ ವಲಯದಲ್ಲಿ ಇನ್ನಷ್ಟು ಗೊಂದಲ ಮತ್ತು ಉದ್ವಿಗ್ನ ಸ್ಥಿತಿ ಮೂಡಲು ಕಾರಣವಾಗಬಹುದು’ ಎಂದು ಹಮಾಸ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.