ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ಬೀಜಿಂಗ್/ವಾಷಿಂಗ್ಟನ್: ಟ್ರಂಪ್ ಅವರು ಚೀನಾದ ಉತ್ಪನ್ನಗಳ ಮೇಲಿನ ಸುಂಕವನ್ನು ಗಣನೀಯವಾಗಿ ತಗ್ಗಿಸುವ ಸುಳಿವು ನೀಡಿದ ಮರುದಿನವೇ ಅಮೆರಿಕ ಜತೆಗೆ ವ್ಯಾಪಾರ ಮಾತುಕತೆಗೆ ಬಾಗಿಲು ತೆರೆದಿದೆ ಎಂದು ಚೀನಾ ಬುಧವಾರ ಹೇಳಿದೆ.
ಟ್ರಂಪ್ ಅವರು ಎರಡನೇ ಬಾರಿಗೆ ಅಧ್ಯಕ್ಷರಾಗಿ ಅಧಿಕಾರಕ್ಕೆ ಮರಳಿದ ನಂತರ ಚೀನಾದ ಅನೇಕ ಉತ್ಪನ್ನಗಳ ಮೇಲೆ ಶೇ 145 ರಷ್ಟು ಹೆಚ್ಚುವರಿ ಸುಂಕ ವಿಧಿಸಿದ್ದಾರೆ.
ಚೀನಾ ಕೂಡ ಅಮೆರಿಕದ ಉತ್ಪನ್ನಗಳ ಮೇಲೆ ಶೇ 125ರಷ್ಟು ಪ್ರತಿ ಸುಂಕ ವಿಧಿಸುವ ಮೂಲಕ ಪತ್ರೀಕಾರ ಕ್ರಮ ತೆಗೆದುಕೊಂಡಿತ್ತು. ಆದರೆ, ಟ್ರಂಪ್ ಅವರ ಸುಂಕ ಕಡಿತ ಹೇಳಿಕೆ ಬೆನ್ನಲ್ಲೇ ವ್ಯಾಪಾರ ಮಾತುಕತೆಗಳಲ್ಲಿ ತೊಡಗಿಸಿಕೊಳ್ಳಲು ಸಿದ್ಧವಿರುವುದಾಗಿ ಚೀನಾ ಬುಧವಾರ ಪುನರುಚ್ಚರಿಸಿದೆ.
ಚೀನಾದ ಉತ್ಪನ್ನಗಳ ಮೇಲೆ ಹೇರಿರುವ ಶೇ 145ರಷ್ಟು ಸುಂಕ ಹೆಚ್ಚಿನ ಮಟ್ಟದ್ದಾಗಿದೆ ಎಂದು ಒಪ್ಪಿಕೊಂಡಿರುವ ಟ್ರಂಪ್, ‘ಇದು ಮುಂದೆ ಗಣನೀಯ ಪ್ರಮಾಣದಲ್ಲಿ ತಗ್ಗಲಿದೆ. ಆದರೆ, ಅದು ಶೂನ್ಯಕ್ಕೆ ಇಳಿಯುವುದಿಲ್ಲ. ಅಂತಿಮವಾಗಿ, ಚೀನಾ ಒಪ್ಪಂದಕ್ಕೆ ಬರಬೇಕಾಗುತ್ತದೆ. ಇಲ್ಲದಿದ್ದರೆ ಅವರು ಅಮೆರಿಕದಲ್ಲಿ ವ್ಯವಹಾರ ಮಾಡಲು ಸಾಧ್ಯವಾಗದು’ ಎಂದು ಮಂಗಳವಾರವಷ್ಟೇ ಹೇಳಿದ್ದರು.
‘ಸುಂಕ ಮತ್ತು ವ್ಯಾಪಾರ ಸಮರದಲ್ಲಿ ಯಾರೂ ವಿಜಯ ಸಾಧಿಸಲು ಸಾಧ್ಯವಿಲ್ಲ’ವೆಂದು ಚೀನಾ ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದೆ. ವ್ಯಾಪಾರ ಸಂಬಂಧಿ ಮಾತುಕತೆಯ ಬಾಗಿಲುಗಳು ತೆರೆದಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
‘ವ್ಯಾಪಾರ ಯುದ್ಧಗಳು ಎಲ್ಲ ದೇಶಗಳ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ದುರ್ಬಲಗೊಳಿಸುತ್ತವೆ. ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ಘಾಸಿಗೊಳಿಸುತ್ತವೆ. ಅಲ್ಲದೆ, ಇವು ವಿಶ್ವದ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ’ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಬುಧವಾರ ಎಚ್ಚರಿಸಿದ್ದಾರೆ ಎಂದು ದೇಶದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಫೆಡರಲ್ ಮುಖ್ಯಸ್ಥರ ವಜಾ ಇಲ್ಲ: ಟ್ರಂಪ್
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರನ್ನು ವಜಾಗೊಳಿಸುವ ಉದ್ದೇಶವಿಲ್ಲ ಎಂದು ಟ್ರಂಪ್ ಅವರು ಮಂಗಳವಾರ ಪ್ರಕಟಿಸಿದ್ದಾರೆ. ‘ಫೆಡರಲ್ ಮುಖ್ಯಸ್ಥರನ್ನು ವಜಾಗೊಳಿಸುವ ಉದ್ದೇಶ ನನಗಿಲ್ಲ. ಬಡ್ಡಿ ದರಗಳನ್ನು ತಗ್ಗಿಸುವ ವಿಷಯದಲ್ಲಿ ಅವರು ಹೆಚ್ಚು ಸಕ್ರಿಯರಾಗಬೇಕೆಂದು ಬಯಸುತ್ತೇನೆ. ಬಡ್ಡಿದರಗಳನ್ನು ತಗ್ಗಿಸಲು ಇದು ಸಕಾಲ. ಅವರು ಹಾಗೆ ಮಾಡದಿದ್ದರೆ ಅದೇ ಕೊನೆ ಎಂದಲ್ಲ’ ಎಂದು ಟ್ರಂಪ್ ಹೇಳಿದ್ದಾರೆ. ಪೊವೆಲ್ ವಿರುದ್ಧ ಟ್ರಂಪ್ ಅವರು ಇತ್ತೀಚೆಗೆ ವ್ಯಕ್ತಪಡಿಸಿದ ಆಕ್ರೋಶ ಪೊವೆಲ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಸೂಚನೆ ಎನ್ನಲಾಗಿತ್ತು. ಇದು ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಉಂಟು ಮಾಡಿತ್ತು. ಶ್ವೇತಭವನದ ವ್ಯಾಪಕ ಸುಂಕ ನೀತಿಯು ಹಣದುಬ್ಬರಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಪೊವೆಲ್ ಎಚ್ಚರಿಕೆ ನೀಡಿದ್ದಕ್ಕಾಗಿ ಟ್ರಂಪ್ ಅವರು ಪೊವೆಲ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.