ADVERTISEMENT

ಬೆಂಬಲಕ್ಕೆ ಇದ್ದೇವೆ, ಪ್ರತಿಭಟನೆ ಮುಂದುವರಿಸಿ: ಇರಾನಿಗರಿಗೆ ಟ್ರಂಪ್ ಕುಮ್ಮಕ್ಕು

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 6:44 IST
Last Updated 14 ಜನವರಿ 2026, 6:44 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ವಾಷಿಂಗ್ಟನ್: ‘ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ಪ್ರತಿಭಟನೆ ಮುಂದುವರಿಸಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲ ಖಮೇನಿ ವಿರುದ್ಧ ಉಗ್ರ ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರಿಗೆ ಅಭಯ ನೀಡಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ತೀವ್ರ ಏರಿಕೆ, ಅರಾಜಕತೆ ವಿರೋಧಿಸಿ ಇರಾನ್‌ನಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ.

‘ಇರಾನ್‌ನ ದೇಶಪ್ರೇಮಿಗಳೇ ಪ್ರತಿಭಟನೆ ಮುಂದುವರಿಸಿ. ನಿಮ್ಮ ಸಂಸ್ಥೆಗಳನ್ನು ವಶಕ್ಕೆ ಪಡೆಯಿರಿ’ ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

‘ಹತ್ಯೆಕೋರರು ಮತ್ತು ಕಿರುಕುಳ ನೀಡುವವರ ಹೆಸರುಗಳನ್ನು ನೆನಪಿಟ್ಟುಕೊಳ್ಳಿ. ಅವರು ತಮ್ಮ ಕೃತ್ಯಕ್ಕಾಗಿ ದೊಡ್ಡ ಬೆಲೆ ತೆರಬೇಕಾಗುತ್ತದೆ. ಪ್ರತಿಭಟನಾಕಾರರ ಅಪ್ರಜ್ಞಾಪೂರ್ವಕ ಹತ್ಯೆಗಳು ನಿಲ್ಲುವವರೆಗೂ ಇರಾನ್ ಅಧಿಕಾರಿಗಳ ಜೊತೆಗಿನ ಎಲ್ಲ ಸಭೆಗಳನ್ನು ರದ್ದು ಮಾಡಿದ್ದೇನೆ. ನಿಮ್ಮ ನೆರವು ಹಾದಯಲ್ಲಿದೆ’ ಎಂದೂ ತಿಳಿಸಿದ್ದಾರೆ.

ಇರಾನ್ ನಾಯಕತ್ವವು ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಮುಂದುವರಿಸಿದರೆ ಮಿಲಿಟರಿ ಕಾರ್ಯಾಚರಣೆ ನಡೆಸುವುದಾಗಿ ಟ್ರಂಪ್ ಎರಡು ಬಾರಿ ಎಚ್ಚರಿಕೆ ನೀಡಿದ್ದಾರೆ. ದಾಳಿ ಯಾವಾಗ ನಡೆಸುತ್ತೀರಿ ಎಂದು ಮಿಷಿಗನ್‌ ಭೇಟಿಯ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಟ್ರಂಪ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ದೇಶದಲ್ಲಿ ಹಣದುಬ್ಬರ ಹೆಚ್ಚಳ, ಅರಾಜಕತೆ ವಿರುದ್ಧ ಎರಡು ವಾರಗಳ ಹಿಂದೆ ರಾಜಧಾನಿ ಟೆಹ್ರಾನ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ ದೇಶದ ಇತರೆಡೆಗೂ ವ್ಯಾಪಿಸಿದೆ. ಕೆಲ ದಿನಗಳಿಂದ ಇಂಟರ್ನೆಟ್ ಸಂಪರ್ಕ ಕಡಿತ, ರಸ್ತೆ ಬಂದ್, ವಿಮಾನಗಳ ಸಂಚಾರ ಸ್ಥಗಿತ ಮುಂತಾದ ಸಮಸ್ಯೆಗಳುಂಟಾಗಿ ಜನ ತತ್ತರಿಸುತ್ತಿದ್ದಾರೆ ಎಂದು ದಿ ಟೈಮ್ ವರದಿ ಮಾಡಿದೆ. ಇರಾನ್ ಜನರ ನೆರವಿಗೆ ಧಾವಿಸಿರುವ ಸ್ಟಾರ್‌ಲಿಂಕ್ ಸಂಸ್ಥೆಯು ಉಚಿತ ಇಂಟರ್ನೆಟ್‌ ಸೇವೆ ಸಕ್ರಿಯಗೊಳಿಸಿದೆ.

ಟೆಹ್ರಾನ್‌ನ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಕರ ಪ್ರಕಾರ, ಪ್ರತಿಭಟನೆ ವೇಳೆ ಮೃತಪಟ್ಟವರ ಸಂಖ್ಯೆ ಸುಮಾರು 6,000ದಷ್ಟಾಗಿದೆ.

ಕಳೆದ ವಾರಾಂತ್ಯದಲ್ಲೇ ಇರಾನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯ ಸೂಚನೆ ನೀಡಿದ್ದ ಟ್ರಂಪ್, ಈವರೆಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ.

ಈ ನಡುವೆ ಪ್ರತಿಭಟನಾಕಾರರಲ್ಲಿ ಕೆಲವರನ್ನು ಗಲ್ಲಿಗೇರಿಸಲು ಇರಾನ್ ಸಿದ್ಧತೆ ನಡೆಸಿದ್ದು, ಹಾಗೇನಾದರೂ ಮಾಡಿದರೆ ಉಗ್ರ ಕ್ರಮ ಜರುಗಿಸುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಟ್ರಂಪ್ ಅವರ ಈ ಹೇಳಿಕೆ ಮಿಲಿಟರಿ ಕಾರ್ಯಾಚರಣೆ ಆರಂಭದ ಸೂಚನೆ ಎಂದು ಇರಾನ್ ಕರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.