ADVERTISEMENT

ಹೆಚ್ಚುವರಿ ಸುಂಕಕ್ಕೆ ಐರೋಪ್ಯ ದೇಶಗಳ ಆಕ್ಷೇಪ: ಟ್ರಂಪ್ ಕ್ರಮ ತಪ್ಪು ಎಂದ ಬ್ರಿಟನ್

ಪಿಟಿಐ
Published 18 ಜನವರಿ 2026, 14:39 IST
Last Updated 18 ಜನವರಿ 2026, 14:39 IST
.
.   

ಲಂಡನ್‌: ಗ್ರೀನ್‌ಲ್ಯಾಂಡ್‌ ಸ್ವಾಧೀನ ವಿರೋಧಿಸುತ್ತಿರುವ ಯುರೋಪ್‌ ರಾಷ್ಟ್ರಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆದರಿಕೆ ಹಾಕಿರುವುದಕ್ಕೆ ಬ್ರಿಟನ್‌, ನೆದರ್ಲೆಂಡ್ಸ್, ಫ್ರಾನ್ಸ್‌, ಸ್ಪೇನ್‌, ಸ್ವೀಡನ್‌ ಆಕ್ಷೇಪ ವ್ಯಕ್ತಪಡಿಸಿವೆ. ‌

‘ಟ್ರಂಪ್‌ ಅವರದ್ದು ಸಂಪೂರ್ಣ ತಪ್ಪು ನಿರ್ಧಾರ’ ಎಂದು ಈ ರಾಷ್ಟ್ರಗಳು ಹೇಳಿವೆ.

ಟ್ರಂಪ್‌ ಅವರು ತಮ್ಮ ಸಾಮಾಜಿಕ ಮಾಧ್ಯಮ ‘ಟ್ರೂಥ್‌’ನಲ್ಲಿ ಹೆಚ್ಚುವರಿ ಸುಂಕ ವಿಧಿಸುವ ಬಗ್ಗೆ ಪೋಸ್ಟ್‌ ಮಾಡಿದ ನಂತರ, ಯುರೋಪಿನ ಮಿತ್ರ ರಾಷ್ಟ್ರಗಳು ಈ ಕ್ರಮವನ್ನು ಖಂಡಿಸಿವೆ.

ADVERTISEMENT

‘ಫೆಬ್ರುವರಿ 1ರಿಂದ ಬ್ರಿಟನ್‌, ಡೆನ್ಮಾರ್ಕ್‌, ನಾರ್ವೆ, ಸ್ವೀಡನ್‌, ಫ್ರಾನ್ಸ್‌, ಜರ್ಮನಿ, ನೆದರ್ಲೆಂಡ್ಸ್ ಮತ್ತು ಫಿನ್ಲೆಂಡ್‌ನಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ 10ರಷ್ಟು ಸುಂಕ ವಿಧಿಸಲಾಗುವುದು. ಗ್ರೀನ್‌ಲ್ಯಾಂಡ್‌ನ ಖರೀದಿ ಒಪ್ಪಂದವಾಗುವವರೆಗೆ ಈ ಸುಂಕವು ಶೇ 25ರವರೆಗೆ ಏರಿಕೆಯಾಗಬಹುದು’ ಎಂದು ಟ್ರಂಪ್‌ ಹೇಳಿದ್ದಾರೆ.

‘ಗ್ರೀನ್‌ಲ್ಯಾಂಡ್‌ ಬಗ್ಗೆ ನಮ್ಮ ನಿಲುವು ತುಂಬಾ ಸ್ಪಷ್ಟವಾಗಿದೆ. ಇದು ಡೆನ್ಮಾರ್ಕ್ ಸಾಮ್ರಾಜ್ಯದ ಭಾಗವಾಗಿದೆ. ಅದರ ಭವಿಷ್ಯವು ಗ್ರೀನ್‌ಲ್ಯಾಂಡ್‌ ಮತ್ತು ಡೆನ್ಮಾರ್ಕ್‌ನವರಿಗೆ ಸಂಬಂಧಿಸಿದ ವಿಷಯವಾಗಿದೆ’ ಎಂದು ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಶನಿವಾರ ರಾತ್ರಿ ತಿಳಿಸಿದ್ದಾರೆ.

‘ಆರ್ಕ್‌ಟಿಕ್‌ ಭದ್ರತೆಯು ನ್ಯಾಟೊಗೆ ಮುಖ್ಯವಾಗಿದೆ. ಮಿತ್ರ ರಾಷ್ಟ್ರಗಳು ಆರ್ಕ್‌ಟಿಕ್‌ನ ವಿವಿಧ ಭಾಗಗಳಲ್ಲಿ ರಷ್ಯಾದಿಂದ ಬರುವ ಬೆದರಿಕೆಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡಬೇಕು. ನ್ಯಾಟೊ ರಾಷ್ಟ್ರಗಳ ಸಾಮೂಹಿಕ ಭದ್ರತೆಗಾಗಿ ಶ್ರಮಿಸುತ್ತಿರುವ ಮಿತ್ರ ರಾಷ್ಟ್ರಗಳ ಮೇಲೆ ಸುಂಕಗಳನ್ನು ಹೇರುವುದು ಸರಿಯಲ್ಲ. ನಾವು ಈ ವಿಷಯವನ್ನು ನೇರವಾಗಿ ಅಮೆರಿಕ ಆಡಳಿತದೊಂದಿಗೆ ಚರ್ಚಿಸುತ್ತೇವೆ’ ಎಂದು ಹೇಳಿದ್ದಾರೆ.

‘ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವು ಅಂತರರಾಷ್ಟ್ರೀಯ ಕಾನೂನಿನ ಮೂಲಭೂತ ತತ್ವಗಳಾಗಿವೆ. ಸುಂಕ ಹೆಚ್ಚಳವು ಅಟ್ಲಾಂಟಿಕ್‌ ಆಚೆಯ ಸಂಬಂಧಗಳನ್ನು ಹಾಳುಮಾಡುತ್ತದೆ’ ಎಂದು ಐರೋಪ್ಯ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವಾನ್‌ ಡರ್ ಲೆಯೆನ್ ಅವರು ‘ಎಕ್ಸ್‌’ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ಸಭೆಯಲ್ಲಿ ಟ್ರಂಪ್‌ ಅವರು ವಾನ್‌ ಡರ್ ಲೆಯೆನ್ ಮತ್ತು ಯುರೋಪ್‌ನ ಇತರ ನಾಯಕರನ್ನು ಭೇಟಿಯಾಗಲಿದ್ದಾರೆ. ಅಲ್ಲಿ ಗ್ರೀನ್‌ಲ್ಯಾಂಡ್‌ ಕುರಿತ ವಿಚಾರ ಪ್ರಮುಖವಾಗಿ ಚರ್ಚೆಯಾಗಲಿದೆ.

ಹೆಚ್ಚುವರಿ ಸುಂಕ ವಿಧಿಸುವ ಕ್ರಮವು ಸ್ವೀಕಾರ್ಹವಲ್ಲ. ಟ್ರಂಪ್‌ ಅವರ ಬೆದರಿಕೆಗೆ ನಾವು ಮಣಿಯುವುದಿಲ್ಲ.
–ಎಮಾನ್ಯುಯೆಲ್ ಮ್ಯಾಕ್ರನ್, ಫ್ರಾನ್ಸ್ ಅಧ್ಯಕ್ಷ
ಹೆಚ್ಚುವರಿ ಸುಂಕ ವಿಧಿಸುವ ಟ್ರಂಪ್‌ ಬೆದರಿಕೆಯು ಬ್ಲ್ಯಾಕ್‌ಮೇಲ್‌ನ ತಂತ್ರವಾಗಿದೆ. ಇದರ ಅಗತ್ಯವಿಲ್ಲ. ನ್ಯಾಟೊ ಹಾಗೂ ಗ್ರೀನ್‌ಲ್ಯಾಂಡ್‌ಗೆ ಇದು ಸಹಾಯ ಮಾಡುವುದಿಲ್ಲ.
– ಡೇವಿಡ್‌ ವ್ಯಾನ್‌ ವೀಲ್‌, ನೆದರ್ಲೆಂಡ್ಸ್‌ ವಿದೇಶಾಂಗ ಸಚಿವ
ಗ್ರೀನ್‌ಲ್ಯಾಂಡ್‌ ಮೇಲಿನ ಅಮೆರಿಕದ ಆಕ್ರಮಣವು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಅವರನ್ನು ಭೂಮಿಯ ಮೇಲಿನ ಅತ್ಯಂತ ಸಂತೋಷದಾಯಕ ವ್ಯಕ್ತಿಯನ್ನಾಗಿ ಮಾಡುತ್ತದೆ. 
– ಪೆದ್ರೊ ಸಂಚೆಝ್‌, ಸ್ಪೇನ್‌ ಪ್ರಧಾನಿ
ಈ ಬ್ಲ್ಯಾಕ್‌ಮೇಲ್‌ನ ತಂತ್ರಕ್ಕೆ ನಾವು ಮಣಿಯುವುದಿಲ್ಲ. ಈ ಸಮಸ್ಯೆಯನ್ನು ಒಟ್ಟಾಗಿ ಎದುರಿಸಲು ಐರೋಪ್ಯ ಒಕ್ಕೂಟದ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ.
– ಅಲ್ಫ್‌ ಕ್ರಿಸ್ಟರ್‌ಸನ್‌, ಸ್ವೀಡನ್‌ ಪ್ರಧಾನಿ
‘ಒಪ್ಪಂದ ಏರ್ಪಟ್ಟರೆ ಮಾತ್ರ ಸುಂಕ ವಾಪಸ್‌’
‘ವಿಶ್ವ ಶಾಂತಿ ಅಪಾಯದಲ್ಲಿದೆ. ಆದ್ದರಿಂದ ಈಗ ಡೆನ್ಮಾರ್ಕ್ ದೇಶವು ಗ್ರೀನ್‌ಲ್ಯಾಂಡ್‌ ಅನ್ನು ಹಿಂತಿರುಗಿಸುವ ಸಮಯ ಬಂದಿದೆ’ ಎಂದು ಡೊನಾಲ್ಡ್‌ ಟ್ರಂಪ್‌ ಅವರು ಸಾಮಾಜಿಕ ಮಾಧ್ಯಮ ‘ಟ್ರೂಥ್‌’ನಲ್ಲಿ ತಿಳಿಸಿದ್ದಾರೆ. ‘ಇದರಲ್ಲಿ ಭಾಗಿಯಾಗಿರುವ ದೇಶಗಳೊಂದಿಗೆ ಮಾತುಕತೆ ನಡೆಸಲು ತಮ್ಮ ಆಡಳಿತವು ತಕ್ಷಣವೇ ಮುಕ್ತವಾಗಿದೆ. ಗ್ರೀನ್‌ಲ್ಯಾಂಡ್‌ನ ಸಂಪೂರ್ಣ ಖರೀದಿಗೆ ಒಪ್ಪಂದ ಏರ್ಪಟ್ಟಾಗ ಮಾತ್ರ ಈ ಸುಂಕಗಳನ್ನು ಕೊನೆಗೊಳಿಸಲಾಗುವುದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.