ADVERTISEMENT

‘ಭಾರತ, ಚೀನಾಕ್ಕೆ ಅಮೆರಿಕದ ಸಬ್ಸಿಡಿ ಸ್ಥಗಿತ ಅನಿವಾರ್ಯ’

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ನೆರವು: ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಕ್ಷೇಪ

ಪಿಟಿಐ
Published 8 ಸೆಪ್ಟೆಂಬರ್ 2018, 19:31 IST
Last Updated 8 ಸೆಪ್ಟೆಂಬರ್ 2018, 19:31 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ಷಿಕಾಗೊ: ‘ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತ ಮತ್ತು ಚೀನಾದಂತಹ ದೇಶಗಳಿಗೆ ಸಬ್ಸಿಡಿ ನೀಡುವುದನ್ನು ಸ್ಥಗಿತಗೊಳಿಸುವುದು ಅಗತ್ಯವಿದೆ’ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಪಾದಿಸಿದ್ದಾರೆ.

‘ಕೆಲವು ದೇಶಗಳು ಆರ್ಥಿಕ ಬೆಳವಣಿಗೆ ಸಾಧಿಸುತ್ತಿವೆ. ಇನ್ನು ಕೆಲವು ಪ್ರಗತಿಯ ಹಾದಿಯಲ್ಲಿ ಸಾಗಲು ಹರಸಾಹಸ ಮಾಡುತ್ತಿವೆ. ಈ ರೀತಿಯ ಎಲ್ಲ ದೇಶಗಳಿಗೆ ನಾವು ಸಬ್ಸಿಡಿ ನೀಡುತ್ತಿದ್ದೇವೆ. ಆದರೆ, ಒಟ್ಟಾರೆಯಾಗಿ ಸಬ್ಸಿಡಿ ನೀಡುತ್ತಿರುವ ವಿಷಯವೇ ವಿಚಿತ್ರವಾಗಿದೆ’ ಎಂದು ಫಾರ್ಗೋ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ಲೇಷಿಸಿದರು.

‘ಭಾರತ, ಚೀನಾ ಮತ್ತು ಇತರ ಕೆಲವು ದೇಶಗಳು ಅಭಿವೃದ್ದಿ ಸಾಧಿಸುತ್ತಿವೆ. ಈ ದೇಶಗಳು ತಮ್ಮನ್ನು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಎಂದು ಕರೆದುಕೊಳ್ಳುತ್ತಿದ್ದು, ಈ ವಿಭಾಗದಲ್ಲೇ ನಿರಂತರವಾಗಿ ಸಬ್ಸಿಡಿ ಪಡೆದುಕೊಳ್ಳುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಅಮೆರಿಕ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದೇ ಪರಿಗಣಿಸಿಬೇಕು. ನಾವು ಸಾಧಿಸಬೇಕಾದದ್ದು ಸಾಕಷ್ಟಿದೆ. ಇದಕ್ಕಾಗಿ ಅತಿ ವೇಗದಲ್ಲಿ ಪ್ರಗತಿಯ ಪಥದಲ್ಲಿ ಸಾಧಿಸಬೇಕಾಗಿದೆ. ಜಗತ್ತಿನಲ್ಲೇ ನಾವು ಮುಂಚೂಣಿಯಲ್ಲಿರಬೇಕು’ ಎಂದರು.

ಅಮೆರಿಕ ಮತ್ತು ಚೀನಾ ನಡುವೆ ವ್ಯಾಪಾರ ವಹಿವಾಟು ಹದಗೆಟ್ಟಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ‘ನಾನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಅತಿ ದೊಡ್ಡ ಅಭಿಮಾನಿ. ಆದರೆ, ನಾವು ಪ್ರಾಮಾಣಿಕರಾಗಿರಬೇಕು ಎಂದು ಅವರಿಗೆ ತಿಳಿಸಿದ್ದೇನೆ. ಪ್ರತಿ ವರ್ಷ ನಡೆಯುವ 50 ಸಾವಿರ ಕೋಟಿ ಡಾಲರ್‌ ಗಾತ್ರದ ವಹಿವಾಟನ್ನು ಕಿತ್ತುಕೊಳ್ಳಲು ಚೀನಾಗೆ ನಾವು ಅವಕಾಶ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಹಲವು ಶ್ರೀಮಂತ ದೇಶಗಳನ್ನು ಹೊರಗಿನ ಶಕ್ತಿಗಳಿಂದ ಕಾಪಾಡಿರುವುದಕ್ಕೆ ಅಮೆರಿಕಕ್ಕೆ ಆ ದೇಶಗಳು ಅಭಾರಿಯಾಗಿರಬೇಕು. ರಕ್ಷಣೆಯ ಮೊತ್ತವನ್ನು ಈ ದೇಶಗಳು ಪಾವತಿಸಲೇಬೇಕು’ ಎಂದು ಹೇಳಿದರು.

**

ಡಬ್ಲ್ಯೂಟಿಒ ವಿರುದ್ಧ ಟೀಕೆ

ವಿಶ್ವ ವಾಣಿಜ್ಯ ಸಂಸ್ಥೆಯ (ಡಬ್ಲ್ಯೂಟಿಒ) ನೀತಿಗಳ ವಿರುದ್ಧವೂ ವಾಗ್ದಾಳಿ ನಡೆಸಿದ ಡೊನಾಲ್ಡ್‌ ಟ್ರಂಪ್‌, ಇವು ಚೀನಾಕ್ಕೆ ಪೂರಕವಾಗಿಯೇ ಕಾರ್ಯನಿರ್ವಹಿಸುತ್ತಿದೆ ಎಂದು ಕಿಡಿಕಾರಿದರು.

‘ಎಲ್ಲದಕ್ಕಿಂತ ವಿಶ್ವ ವಾಣಿಜ್ಯ ಸಂಸ್ಥೆಯೇ ಕೆಟ್ಟದ್ದು. ಚೀನಾ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಅದು ಅವಕಾಶ ಕಲ್ಪಿಸಿತು’ ಎಂದು ಟೀಕಿಸಿದರು.

**

ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ನಾವು ಹಣ ನೀಡುತ್ತಿದ್ದೇವೆ. ಇದು ಹುಚ್ಚುತನ. ಇನ್ನು ಮುಂದೆ ಹಣ ನೀಡುವುದನ್ನು ಸ್ಥಗಿತಗೊಳಿಸುವುದು ಖಚಿತ.

->ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.