ADVERTISEMENT

ಟ್ರಂಪ್‌ ನಿರ್ಲಕ್ಷದಿಂದಲೇ ನಿರುದ್ಯೋಗ ಪ್ರಮಾಣ ಏರಿದೆ: ಬೈಡನ್‌

ಪಿಟಿಐ
Published 10 ಅಕ್ಟೋಬರ್ 2020, 7:16 IST
Last Updated 10 ಅಕ್ಟೋಬರ್ 2020, 7:16 IST
ಜೋ ಬೈಡನ್
ಜೋ ಬೈಡನ್   

ವಾಷಿಂಗ್ಟನ್: ‘ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನಿರ್ಲಕ್ಷದಿಂದಲೇ ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣ ಏರಿದೆ’ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಜೋ ಬೈಡನ್‌ ದೂರಿದ್ದಾರೆ.

ಲಾಸ್‌ ವೆಗಾಸ್‌ ಹಾಗೂ ನೆವಾಡ ಪ್ರಾಂತ್ಯದಲ್ಲಿ ಶುಕ್ರವಾರ ನಡೆದ ಪ್ರಚಾರ ರ‍್ಯಾಲಿಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಬೈಡನ್‌, ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಟ್ರಂಪ್‌ ವಿರುದ್ಧ ಹರಿಹಾಯ್ದರು.

‘ಬರಾಕ್‌ ಒಬಾಮ ಮತ್ತು ನನ್ನ ಆಡಳಿತಾವಧಿಯಲ್ಲಿ ನೆವಾಡ ಪ್ರಾಂತ್ಯದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಾಗಿತ್ತು. ಆದರೆ ಟ್ರಂಪ್‌ ಅಧ್ಯಕ್ಷ ಗಾದಿಗೆ ಏರಿದ ನಂತರ ಇಲ್ಲಿ ಉದ್ಯೋಗದ ಪ್ರಮಾಣ ಇಳಿಮುಖವಾಗಿದೆ. ಟ್ರಂಪ್‌ ಆಡಳಿತದಲ್ಲಿ ಮಧ್ಯಮ ವರ್ಗ ಹಾಗೂ ಇತರರ ಬದುಕು ದುಸ್ತರವಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಟ್ರಂಪ್‌ ಅವರ ಅಜಾಗರೂಕ ವೈಯಕ್ತಿಕ ನಡವಳಿಕೆಗಳಿಂದಾಗಿ ನಮ್ಮ ಸರ್ಕಾರದ ಮೇಲೆ ಉಂಟಾಗುತ್ತಿರುವ ಪರಿಣಾಮವು ಅಸಹನೀಯವಾದುದು. ತಮ್ಮನ್ನು ಹಾಗೂ ಇತರರನ್ನು ರಕ್ಷಿಸಲು ಅವರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ನಿಮ್ಮನ್ನು ಕೀಳಾಗಿ ಕಾಣುವ, ನಿಮ್ಮನ್ನು ಕಡೆಗಣಿಸುವ ಅಧ್ಯಕ್ಷ ಟ್ರಂಪ್‌ ಮಾತ್ರ. ಇನ್ನೂ ಅವರ ಅಗತ್ಯ ನಿಮಗಿದೆಯೇ’ ಎಂದು ಪ್ರಶ್ನಿಸಿದ್ದಾರೆ.

ಉಪಾಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಕೂಡ ಟ್ರಂಪ್‌ ವಿರುದ್ಧ ಕಿಡಿಕಾರಿದ್ದಾರೆ.

ಅರಿಜೊನಾದಲ್ಲಿ ಮಾತನಾಡಿರುವ ಅವರು ‘ಕೊರೊನಾ ಸೋಂಕಿನ ಪಸರಿಸುವಿಕೆಗೆ ಕಡಿವಾಣ ಹಾಕಲು ಟ್ರಂಪ್‌ ಸಂಪೂರ್ಣ ವಿಫಲರಾಗಿದ್ದಾರೆ. ಇದರಿಂದ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಹೀಗಾಗಿ ಮತ್ತೊಮ್ಮೆ ಅವರನ್ನು ಆಯ್ಕೆ ಮಾಡುವ ತಪ್ಪು ಮಾಡಬೇಡಿ’ ಎಂದರು.

‘ಬೈಡನ್‌ ಖಾಲಿ ಹಡಗಿದ್ದಂತೆ. ಕಮಲಾ ಹ್ಯಾರಿಸ್‌ ಅವರು ಅತ್ಯಂತ ಉದಾರವಾದಿ ಸೆನೆಟರ್‌’ ಎಂದು ಟ್ರಂಪ್‌ ಪರ ಪ್ರಚಾರ ನಡೆಸುತ್ತಿರುವ ತಂಡವು ವ್ಯಂಗ್ಯವಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.