ADVERTISEMENT

Turkey Earthquake | ಬೆಂಗಳೂರಿನ ಟೆಕಿ ನಾಪತ್ತೆ: ಕುಟುಂಬದವರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 5:41 IST
Last Updated 10 ಫೆಬ್ರುವರಿ 2023, 5:41 IST
ವಿಜಯ್‌  ಕುಮಾರ್
ವಿಜಯ್‌ ಕುಮಾರ್   

ಬೆಂಗಳೂರು: ಕಂಪನಿ ಕೆಲಸ ನಿಮಿತ್ತ ಟರ್ಕಿಗೆ ಹೋಗಿದ್ದ ಬೆಂಗಳೂರಿನ ಎಂಜಿನಿಯರ್ ವಿಜಯ್‌ಕುಮಾರ್ (36) ಎಂಬುವವರು ನಾಪತ್ತೆಯಾಗಿದ್ದು, ಅವರ ಕುಟುಂಬದವರು ಆತಂಕದಲ್ಲಿದ್ದಾರೆ.

ಪೀಣ್ಯದಲ್ಲಿರುವ ಆಮ್ಲಜನಕ ಹಾಗೂ ನೈಟ್ರೋಜನ್ ತಯಾರಿಕೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಜಯ್‌ಕುಮಾರ್, ಕಂಪನಿಯ ಹೊಸ ಘಟಕ ಸ್ಥಾಪನೆ ಕೆಲಸಕ್ಕಾಗಿ ಟರ್ಕಿಗೆ ಹೋಗಿದ್ದರು. ಟರ್ಕಿಯಲ್ಲಿ ಭೂಕಂಪ ಸಂಭವಿಸಿದ್ದು, ವಿಜಯ್‌ಕುಮಾರ್ ಎಲ್ಲಿದ್ದಾರೆಂಬ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.

‘ಡೆಹ್ರಾಡೂನ್‌ನ ವಿಜಯ್‌ಕುಮಾರ್, ಹಲವು ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಉತ್ತಮ ಎಂಜಿನಿಯರ್ ಆಗಿದ್ದರು. ಹೊಸ ಘಟಕಕ್ಕೆ ಅಗತ್ಯವಿದ್ದ ಸಾಮಗ್ರಿಗಳನ್ನು ನಾಲ್ಕು ತಿಂಗಳ ಹಿಂದೆಯೇ ಕಳುಹಿಸಲಾಗಿತ್ತು. ಘಟಕ ಸ್ಥಾಪನೆ ಕೆಲಸಕ್ಕಾಗಿ ವಿಜಯ್, ಜ. 25ರಂದು ಟರ್ಕಿಗೆ ಹೋಗಿದ್ದರು’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಸಿದ್ದಪ್ಪ ಹೇಳಿದರು.

ADVERTISEMENT

‘ವಿಜಯ್‌ಕುಮಾರ್ ಉಳಿದುಕೊಂಡಿದ್ದ ಟರ್ಕಿಯ ಹೋಟೆಲ್ ಸಂಪೂರ್ಣ ನೆಲಸಮವಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆದಿರುವ ಮಾಹಿತಿ ಇದೆ. ಆದರೆ, ವಿಜಯ್‌ಕುಮಾರ್ ಎಲ್ಲಿದ್ದಾರೆಂಬ ಮಾಹಿತಿ ಇದುವರೆಗೂ ಗೊತ್ತಾಗಿಲ್ಲ. ಘಟಕ ಸ್ಥಾಪನೆಗೆ ಕೈಜೋಡಿಸಿದ್ದ ಟರ್ಕಿಯ ಕಂಪನಿಯ ಕಟ್ಟಡವೂ ನೆಲಸಮವಾಗಿದೆ. ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ವಿಜಯ್‌ಕುಮಾರ್ ನಾಪತ್ತೆ ಬಗ್ಗೆ ಭಾರತೀಯ ರಾಯಭಾರಿ ಕಚೇರಿಗೂ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

ಫೆ. 5ರಂದು ಕೊನೆ ಕರೆ: ಟರ್ಕಿಯಿಂದ ಫೆ. 5ರಂದು ಕುಟುಂಬದವರಿಗೆ ಕರೆ ಮಾಡಿದ್ದ ವಿಜಯ್‌ಕುಮಾರ್, ಕುಶಲೋಪರಿ ವಿಚಾರಿಸಿದ್ದರು.

ವಿಜಯ್‌ಕುಮಾರ್ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ ಅರುಣ್‌ಕುಮಾರ್, ‘ನನ್ನ ತಮ್ಮ ವಿಜಯ್‌ಕುಮಾರ್ ಬದುಕಿ ಬಂದರೆ ಸಾಕು. ಆತ ಯಾವುದೇ ಸ್ಥಿತಿಯಲ್ಲಿದ್ದರೂ ಆರೈಕೆ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.