ADVERTISEMENT

ಇರಾನ್ ಹಾರಿಸಿದ 137 ಕ್ಷಿಪಣಿ, 209 ಡ್ರೋಣ್‌ಗಳನ್ನು ಹೊಡೆದುರುಳಿಸಿದ್ದೇವೆ: ಯುಎಇ

ಏಜೆನ್ಸೀಸ್
Published 1 ಮಾರ್ಚ್ 2026, 15:15 IST
Last Updated 1 ಮಾರ್ಚ್ 2026, 15:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಬುಧಾಬಿ: ಇರಾನ್‌ ಉಡಾಯಿಸಿದ 137 ಖಂಡಾಂತರ ಕ್ಷಿಪಣಿಗಳು, 209 ಡ್ರೋಣ್‌ಗಳನ್ನು ವಾಯುಪಡೆ ಹಾಗೂ ವಾಯು ರಕ್ಷಣಾ ಪಡೆಗಳು ಸಮರ್ಥವಾಗಿ ಹಿಮ್ಮೆಟ್ಟಿಸಿ, ನಾಶಪಡಿಸಿವೆ ಎಂದು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಭಾನುವಾರ ತಿಳಿಸಿದೆ.

137 ಕ್ಷಿಪಣಿಗಳ ಪೈಕಿ 132 ನಾಶವಾಗಿವೆ. ಉಳಿದ ಐದು ಸಮುದ್ರಕ್ಕೆ ಬಿದ್ದಿವೆ. ದೇಶದತ್ತ ಹಾರಿ ಬಂದ 209 ಡ್ರೋಣ್‌ಗಳಲ್ಲಿ 195 ಅನ್ನು ಹಿಮ್ಮೆಟ್ಟಿಸಲಾಗಿದೆ. ಉಳಿದ 14 ಡ್ರೋಣ್‌ಗಳು ದೇಶದ ಭೂ ಪ್ರದೇಶ, ಸಾಗರದಲ್ಲಿ ಉರುಳಿವೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.

ಕ್ಷಿಪಣಿ, ಡ್ರೋಣ್‌ಗಳ ಅವಶೇಷಗಳು ಹಲವೆಡೆ ಬಿದ್ದಿವೆ. ಇದರಿಂದಾಗಿ, ಅಲ್ಲಲ್ಲಿ ಸಣ್ಣಪುಟ್ಟ ಹಾನಿಯಾಗಿದೆ. ಸಾರ್ವಜನಿಕರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವ ಸಲುವಾಗಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದೂ ತಿಳಿಸಿದೆ.

ADVERTISEMENT

'ಅಬುಧಾಬಿಯ ಝಾಯೆದ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಡ್ರೋಣ್‌ ದಾಳಿ ನಡೆಸಲಾಗಿತ್ತು. ಅವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲಾಗಿದೆ. ಈ ವೇಳೆ, ಅವಶೇಷಗಳು ಕೆಳಗೆ ಬಿದ್ದ ಪರಿಣಾಮ, ಏಷ್ಯಾ ಮೂಲದ ಪ್ರಜೆಯೊಬ್ಬರು ಮೃತಪಟ್ಟು, 7 ಮಂದಿ ಗಾಯಗೊಂಡಿದ್ದಾರೆ' ಎಂದು ವಿಮಾನ ನಿಲ್ದಾಣದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದಾಳಿಯಿಂದಾಗಿ ವಿಮಾನ ಸೇವೆಯಲ್ಲಿ ವ್ಯತ್ಯಯಗಳಾಗಿವೆ. ಇದರಿಂದಾಗಿ ಸುಮಾರು 20,200 ಪ್ರಯಾಣಿಕರಿಗೆ ತೊಂದರೆಯಾಗಿದೆ. ಅವರಿಗೆಲ್ಲ ತಾತ್ಕಾಲಿಕ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ. ಮತ್ತೊಮ್ಮೆ ಟಿಕೆಟ್‌ ಕಾಯ್ದಿರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ವಿಮಾನಯಾನ ಪ್ರಾಧಿಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.