ADVERTISEMENT

ಭಾರತದೊಂದಿಗೆ ಹೊಸ ಮುಕ್ತ ವ್ಯಾಪಾರ ಒಪ್ಪಂದ: ರಿಷಿ ಸುನಕ್ ಪುನರುಚ್ಚಾರ

ಪಿಟಿಐ
Published 29 ನವೆಂಬರ್ 2022, 3:02 IST
Last Updated 29 ನವೆಂಬರ್ 2022, 3:02 IST
   

ಲಂಡನ್: ಇಂಡೋ-ಪೆಸಿಫಿಕ್ ಪ್ರದೇಶದೊಂದಿಗೆ ಬಾಂಧವ್ಯವನ್ನು ಹೆಚ್ಚಿಸುವ ದೇಶದ ವಿಶಾಲ ದೃಷ್ಟಿಕೋನದ ಭಾಗವಾಗಿ ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಬದ್ಧತೆಯನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪುನರುಚ್ಚರಿಸಿದ್ದಾರೆ.

ಕಳೆದ ತಿಂಗಳು ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ರಿಷಿ, ಸೋಮವಾರ ವಿದೇಶಾಂಗ ನೀತಿ ಕುರಿತಾದ ಅವರ ಮೊದಲ ಭಾಷಣದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚೀನಾ ವಿಷಯಕ್ಕೆ ಬಂದಾಗ ವಿಭಿನ್ನ ನಿರ್ಧಾರಗಳ ವಾಗ್ದಾನ ಮಾಡಿದ ಅವರು, ಬ್ರಿಟಿಷ್ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ಚೀನಾ ವ್ಯವಸ್ಥಿತ ಸವಾಲಾಗಿದೆ ಎಂದು ಹೇಳಿದರು.

ADVERTISEMENT

‘ನಾನು ರಾಜಕೀಯಕ್ಕೆ ಬರುವ ಮೊದಲು, ಪ್ರಪಂಚದಾದ್ಯಂತದ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದೇನೆ ಮತ್ತು ಇಂಡೋ ಪೆಸಿಫಿಕ್‌ನಲ್ಲಿನ ಅವಕಾಶಗಳು ವಿಫುಲವಾಗಿವೆ' ಎಂದು ಸುನಕ್ ಹೇಳಿದರು.

‘2050ರ ವೇಳೆಗೆ, ಇಂಡೋ-ಪೆಸಿಫಿಕ್ ವಲಯವು ಜಾಗತಿಕ ಬೆಳವಣಿಗೆಯ ಅರ್ಧದಷ್ಟು ಭಾಗವನ್ನು ತಲುಪುತ್ತದೆ. ಅದಕ್ಕಾಗಿಯೇ ನಾವು ಟ್ರಾನ್ಸ್-ಪೆಸಿಫಿಕ್ ವ್ಯಾಪಾರ ಒಪ್ಪಂದ, ಸಿಪಿಟಿಪಿಪಿಗೆ ಸೇರುತ್ತಿದ್ದೇವೆ, ಭಾರತದೊಂದಿಗೆ ಹೊಸ ( ಮುಕ್ತ ವ್ಯಾಪಾರ ಒಪ್ಪಂದ)ಎಫ್‌ಟಿಎ ಅನ್ನು ಮಾಡಿಕೊಳ್ಳುತ್ತಿದ್ದೇವೆ’ಎಂದು ಅವರು ಹೇಳಿದರು.

‘ಇಲ್ಲಿರುವ ಹಲವು ಜನರಂತೆ ನನ್ನ ಪೂರ್ವಜರು ಸಹ ಪೂರ್ವ ಆಫ್ರಿಕಾ ಮತ್ತು ಭಾರತೀಯ ಉಪಖಂಡದ ಮೂಲಕ ಬ್ರಿಟನ್‌ಗೆ ಬಂದವರೇ ಆಗಿದ್ದಾರೆ. ಅವರು ಇಲ್ಲಿಯೇ ತಮ್ಮ ಜೀವನವನ್ನು ಕಟ್ಟಿಕೊಂಡರು. ಅದೇ ರೀತಿ, ಇತ್ತೀಚಿನ ವರ್ಷಗಳಲ್ಲಿ ನಾವು ಹಾಂಗ್ ಕಾಂಗ್, ಅಫ್ಗಾನಿಸ್ತಾನ ಮತ್ತು ಉಕ್ರೇನ್‌ನಿಂದ ಸಾವಿರಾರು ಜನರನ್ನು ಸ್ವಾಗತಿಸಿದ್ದೇವೆ. ಈ ದೇಶ ಮೌಲ್ಯಗಳ ಪರವಾಗಿ ನಿಲ್ಲುತ್ತದೆ, ಅದು ಕೇವಲ ಪದಗಳಲ್ಲದೇ ಕಾರ್ಯಗಳಿಂದಲೂ ಪ್ರಜಾಪ್ರಭುತ್ವವನ್ನು ರಕ್ಷಿಸುತ್ತದೆ’ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.