
ಲಂಡನ್ : ‘ಇರಾನ್ ಮೇಲೆ ಶನಿವಾರ ಅಮೆರಿಕ ಹಾಗೂ ಇಸ್ರೇಲ್ ಸೇನೆಯು ಜಂಟಿಯಾಗಿ ನಡೆಸಿದ ಸೇನಾ ದಾಳಿಯಲ್ಲಿ ಬ್ರಿಟನ್‌ನ ಯುದ್ಧ ವಿಮಾನಗಳು ಭಾಗಿಯಾಗಿದ್ದವು’ ಎಂದು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ತಿಳಿಸಿದ್ದಾರೆ.
‘ದೇಶದ ಜನರ ರಕ್ಷಣೆಯ ಜೊತೆಗೆ ಮಿತ್ರಪಡೆಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸಂಘಟಿತ ಪ್ರಾದೇಶಿಕ ರಕ್ಷಣಾ ಕಾರ್ಯಾಚರಣಾ ಭಾಗವಾಗಿ ಆಕಾಶದಲ್ಲಿ ನಾವು ಕೂಡ ಕೈ ಜೋಡಿಸಿದ್ದೆವು’ ಎಂದು ಅವರು ವಿವರಿಸಿದ್ದಾರೆ.
ದಾಳಿ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿಯೇ ಈ ದಾಳಿ ನಡೆಸಲಾಗಿದೆ’ ಎಂದು ಹೇಳಿದ್ದಾರೆ.
ಇರಾನ್ ಮೇಲೆ ಅಮೆರಿಕ ನಡೆಸಿರುವ ಸೇನಾ ದಾಳಿಗೆ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಟೆಹರಾನ್ ತನ್ನ ಪರಮಾಣು ಕಾರ್ಯಕ್ರಮಗಳನ್ನು ಸ್ಥಗಿ ತಗೊಳಿಸಲು ಹಾಗೂ ಉಗ್ರಗಾಮಿ ಗುಂಪುಗಳಿಗೆ ಬೆಂಬಲ ನಿಲ್ಲಿಸಲು ವಿಫಲವಾಗಿತ್ತು ಎಂದು ಆರೋಪಿಸಿದ್ದಾರೆ.
‘ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದನ್ನು ತಪ್ಪಿಸಲು, ಅಲ್ಲಿನ ಆಡಳಿತವು ಅಂತರರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಗೆ ಧಕ್ಕೆ ಉಂಟಾಗುವುದನ್ನು ತಡೆಯಲು ಅಮೆರಿಕ ಸೇನಾ ದಾಳಿಯನ್ನು ಕೆನಡಾ ಕೂಡ ಬೆಂಬಲಿಸುತ್ತದೆ’ ಎಂದು ಅವರು ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಅವರು,
ಮುಂಬೈನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.