ADVERTISEMENT

ಬ್ರಿಟನ್‌ನಲ್ಲಿ ಮತ್ತೊಂದು ಹೊಸ ಸ್ವರೂಪದ ಸೋಂಕು; ದಕ್ಷಿಣ ಆಫ್ರಿಕಾ ಮೂಲ!

ಉಭಯ ರಾಷ್ಟ್ರಗಳ ನಡುವೆ ಸಂಚಾರ ನಿರ್ಬಂಧ

ಏಜೆನ್ಸೀಸ್
Published 24 ಡಿಸೆಂಬರ್ 2020, 4:51 IST
Last Updated 24 ಡಿಸೆಂಬರ್ 2020, 4:51 IST
ಜೊಹಾನ್ಸ್‌ಬರ್ಗ್‌ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು–ಸಂಗ್ರಹ ಚಿತ್ರ
ಜೊಹಾನ್ಸ್‌ಬರ್ಗ್‌ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು–ಸಂಗ್ರಹ ಚಿತ್ರ   

ಲಂಡನ್: ಕೊರೊನಾ ವೈರಸ್‌ನ ಮತ್ತೊಂದು ಸ್ವರೂಪದ ಹೊಸ ಸೋಂಕು ಬ್ರಿಟನ್‌ನಲ್ಲಿ ಕಾಣಿಸಿಕೊಂಡಿದೆ ಎಂದು ಬ್ರಿಟೀಷ್ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಮ್ಯಾಟ್ ಹ್ಯಾಂಕಾಕ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾಗೆ ಪ್ರಯಾಣಿಸಿದ್ದ ವ್ಯಕ್ತಿಗಳ ಸಂಪರ್ಕದಲ್ಲಿದ್ದ ಲಂಡನ್‌ ಮತ್ತು ವಾಯವ್ಯ ಇಂಗ್ಲೆಂಡ್‌ನ ಇಬ್ಬರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಹೊಸ ಸ್ವರೂಪದ ಸೋಂಕು ಪತ್ತೆಯಾಗುತ್ತಿದ್ದಂತೆ ದಕ್ಷಿಣ ಆಫ್ರಿಕಾದಿಂದ ಬ್ರಿಟನ್‌ಗೆ ಪ್ರಯಾಣಿಸುವುದಕ್ಕೆ ನಿರ್ಬಂಧ ಹೇರಲಾಗಿದೆ.

ಇಂದು ಬೆಳಿಗ್ಗೆ 9ರಿಂದ (ಬ್ರಿಟನ್‌ ಕಾಲಮಾನ) ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ನಡುವಿನ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸಾರಿಗೆ ಕಾರ್ಯದರ್ಶಿ ಗ್ರಾಂಟ್‌ ಶ್ಯಾಪ್ಸ್ ನಿರ್ಧರಿಸಿದ್ದಾರೆ. ದಕ್ಷಿಣ ಆಫ್ರಿಕಾಗೆ ಭೇಟಿ ನೀಡಿದ ವ್ಯಕ್ತಿಯನ್ನು ಇಂಗ್ಲೆಂಡ್‌ಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.

ADVERTISEMENT

ಕಳೆದ ಹದಿನೈದು ದಿನಗಳಲ್ಲಿ ದಕ್ಷಿಣ ಆಫ್ರಿಕಾಗೆ ಪ್ರಯಾಣಿಸಿರುವವರು ಹಾಗೂ ಪ್ರಯಾಣಿಸಿದವರೊಂದಿಗೆ ಸಂಪರ್ಕಕ್ಕೆ ಬಂದಿರುವವರು ಕೂಡಲೇ ಕ್ವಾರಂಟೈನ್‌ ಆಗುವಂತೆ ಸೂಚಿಸಲಾಗಿದೆ.

ಹೊಸ ಸ್ವರೂಪದ ಸೋಂಕು ದಕ್ಷಿಣ ಆಫ್ರಿಕಾದಲ್ಲಿಯೂ ಪ್ರಕರಣಗಳ ಸಂಖ್ಯೆಗೆ ಕಾರಣವಾಗಿರಬಹುದೆಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ಅಲ್ಲಿನ ಆರೋಗ್ಯ ಸಚಿವ ಝ್ವೆಲಿ ಮೆಖೈಜ್‌ ಎಚ್ಚರಿಕೆ ನೀಡಿದ್ದು, 'ಯುವ ಜನತೆ ಹಾಗೂ ಹಿಂದೆ ಆರೋಗ್ಯವಾಗಿದ್ದ ಜನರೂ ಸಹ ಅಸ್ವಸ್ಥರಾಗುತ್ತಿದ್ದಾರೆ' ಎಂದಿದ್ದಾರೆ.

'ಹೊಸ ಸ್ವರೂಪದ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿದ್ದು, ದೇಶದಲ್ಲಿ ಹಲವು ಭಾಗಗಳಲ್ಲಿ ವ್ಯಾಪಿಸಿದೆ' ಎಂದು ದಕ್ಷಿಣ ಆಫ್ರಿಕಾದ ಸಂಶೋಧಕರು ತಿಳಿಸಿದ್ದಾರೆ. ವೈರಸ್‌ ಸ್ವರೂಪದ ಕುರಿತು ಪರಿಶೀಲಿಸಲಾಗುತ್ತಿದೆ, ಆದರೆ ದಾಖಲಾಗುತ್ತಿರುವ ಪ್ರಕರಣಗಳ ಪ್ರಕಾರ ಅದು ತ್ವರಿತಗತಿಯಲ್ಲಿ ಹರಡುತ್ತಿದೆ.

ಬ್ರಿಟನ್‌ನಲ್ಲಿ ಮಂಗಳವಾರ ಮೊದಲ ಬಾರಿಗೆ ಹೊಸ ಸ್ವರೂಪದ ಸೋಂಕು ಪತ್ತೆಯಾಗಿತ್ತು.

ಇತ್ತೀಚೆಗೆ ಹೊಸದಾಗಿ ಕಾಣಿಸಿಕೊಂಡಿದ್ದ ಸೋಂಕಿನ ಸ್ವರೂಪದೊಂದಿಗೆ ಸಾಮ್ಯತೆ ಇರುವುದಾಗಿ ತಿಳಿದು ಬಂದಿದೆ. ಆದರೆ, ಅದು ಪ್ರತ್ಯೇಕವಾಗಿ ಬೆಳವಣಿಗೆಯಾಗಿರಬಹುದು. ಎರಡೂ ಸ್ವರೂಪದ ವೈರಸ್‌ಗಳಲ್ಲಿ ಮನುಷ್ಯರ ದೇಹದ ಜೀವಕೋಶಗಳಿಗೆ ಸೋಂಕು ತಗುಲಿಸುವ 'ಎನ್‌501ವೈ' ರೂಪಾಂತರ ಇರುವುದಾಗಿ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಹಬ್ಬದ ಸಮಯದಲ್ಲಿ ದಕ್ಷಿಣ ಆಫ್ರಿಕಾ ಸರ್ಕಾರ ನಿರ್ಬಂಧಗಳನ್ನು ಬಿಗಿಗೊಳಿಸಿದೆ. ಬೀಚ್‌ಗಳನ್ನು ಹಾಗೂ ಪ್ರಸಿದ್ಧ ಗಾರ್ಡನ್‌ ರೂಟ್‌ಗಳನ್ನು ಮುಚ್ಚಲಾಗಿದೆ. ಈವರೆಗೂ ದಕ್ಷಿಣ ಆಫ್ರಿಕಾದಲ್ಲಿ 9.54 ಲಕ್ಷಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗಿವೆ ಹಾಗೂ 25 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.