ಲಂಡನ್: 'ಭಾರತ ತನ್ನ ರಕ್ಷಣೆಗಾಗಿ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದೆ. ದೇಶದ ಭದ್ರತೆಗೆ ಕಂಟಕವಾಗಿರುವ ಹಾಗೂ ಹಲವು ಜನರ ಸಾವಿಗೆ ಕಾರಣವಾಗಿರುವ ಉಗ್ರರ ಮೂಲಸೌಕರ್ಯಗಳನ್ನು ನಾಶ ಮಾಡುವ ಹಕ್ಕನ್ನೂ ಹೊಂದಿದೆ‘ ಎಂದು ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ಸಂಸದೆ ಪ್ರೀತಿ ಪಟೇಲ್ ಹೇಳಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ನಡೆಸುತ್ತಿರುವ ದಾಳಿ ಕುರಿತು ಕೆಳಮನೆಯಲ್ಲಿ (ಹೌಸ್ ಆಫ್ ಕಾಮನ್ಸ್) ನಡೆದ ಚರ್ಚೆ ವೇಳೆ ಅವರು ಈ ಮಾತು ಹೇಳಿದ್ದಾರೆ.
‘ಪಾಕಿಸ್ತಾನದಲ್ಲಿರುವ ಉಗ್ರರು ಭಾರತ ಹಾಗೂ ಪಶ್ಚಿಮ ರಾಷ್ಟ್ರಗಳಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಇದೇ ಕಾರಣಕ್ಕೆ ಭಾರತದೊಂದಿಗೆ ಬ್ರಿಟನ್ ಭದ್ರತೆಗೆ ಸಂಬಂಧಿಸಿ ಸಹಕಾರ ಒಪ್ಪಂದ ಹೊಂದಿದೆ. ಈ ಹಿಂದೆ ಒಸಾಮಾ ಬಿನ್ ಲಾಡೆನ್‌ಗೆ ಪಾಕಿಸ್ತಾನ ಆಶ್ರಯ ನೀಡಿತ್ತು’ ಎಂದು ಭಾರತ ಮೂಲದ ಸಂಸದೆ ಪ್ರೀತಿ ಪಟೇಲ್ ಹೇಳಿದ್ದಾರೆ.
‘ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಸಂಪೂರ್ಣವಾಗಿ ನಾಶ ಮಾಡುವ ಅಗತ್ಯ ಇದೆ’ ಎಂದು ಕನ್ಸರ್ವೇಟಿವ್ ಪಕ್ಷದ ಸಂಸದ ಬಾಬ್ ಬ್ಲ್ಯಾಕ್‌ಮನ್ ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.