ADVERTISEMENT

ರಷ್ಯಾದ ಷೆಲ್‌ ದಾಳಿಯ ನಡುವೆಯೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಉಕ್ರೇನ್‌ ಜೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮಾರ್ಚ್ 2022, 10:02 IST
Last Updated 3 ಮಾರ್ಚ್ 2022, 10:02 IST
ಮದುವೆ ಮಾಡಿಕೊಂಡ ಉಕ್ರೇನ್‌ ಜೋಡಿ– ಚಿತ್ರ ಕೃಪೆ: NEXTA ಟ್ವಿಟರ್‌ ಖಾತೆ
ಮದುವೆ ಮಾಡಿಕೊಂಡ ಉಕ್ರೇನ್‌ ಜೋಡಿ– ಚಿತ್ರ ಕೃಪೆ: NEXTA ಟ್ವಿಟರ್‌ ಖಾತೆ   

ಬೆಂಗಳೂರು: ರಷ್ಯಾದ ಸೇನಾ ಪಡೆಗಳು ಉಕ್ರೇನ್‌ ಮೇಲೆ ದಾಳಿ ಮುಂದುವರಿಸಿದ್ದು, ಬಾಂಬ್‌ಗಳಿಂದ ರಕ್ಷಣೆ ಪಡೆಯಲು ನಿರ್ಮಿಸಲಾಗಿರುವ ಕೇಂದ್ರದಲ್ಲೇ ಜೋಡಿಯೊಂದರ ಮದುವೆ ಏರ್ಪಟ್ಟಿದೆ.

ಸಂಭ್ರಮದ ಸದ್ದು–ಗದ್ದಲ, ಸಂಗೀತ ಆಲಾಪಗಳ ಬದಲು ಆಗಸದಲ್ಲಿ ಮೊಳಗುತ್ತಿರುವ ಸೈರನ್‌ ಸದ್ದಿನ ನಡುವೆ ಜೋಡಿಯು ವೈವಾಹಿಕ ಜೀವನಕ್ಕೆ ಕಾಲಿಸಿದ್ದಾರೆ. ಉಕ್ರೇನ್‌ನ ಒದೆಸಾ ನಗರದಲ್ಲಿ ನಿರ್ಮಿಸಲಾಗಿರುವ ಸ್ಫೋಟಕಗಳಿಂದ ರಕ್ಷಣೆ ಪಡೆಯುವ ಕೇಂದ್ರದಲ್ಲಿ ವಿವಾಹ ನಡೆದಿರುವುದಾಗಿ ನೆಕ್ಸ್‌ಟಾ ಸುದ್ದಿ ಮಾಧ್ಯಮ ಟ್ವೀಟಿಸಿದೆ.

ಉಕ್ರೇನ್‌ನ ಹಲವು ನಗರಗಳಲ್ಲಿ ರಷ್ಯಾ ಪೂರ್ಣ ಪ್ರಮಾಣದಲ್ಲಿ ದಾಳಿ ನಡೆಸುತ್ತಿದೆ. ಕ್ಷಿಪಣಿ ಹಾಗೂ ಷೆಲ್‌ ದಾಳಿಗಳನ್ನು ಮುಂದುವರಿಸಿದೆ. ಈ ನಡುವೆಯೇ ಜೀವನದ ಹೊಸ ಕನಸುಗಳೊಂದಿಗೆ ಈ ಜೋಡಿಯು ಮುಂದಿನ ಹೆಜ್ಜೆ ಇಟ್ಟಿದ್ದಾರೆ.

ADVERTISEMENT
ಬಾಂಬ್‌ಗಳಿಂದ ರಕ್ಷಣೆ ಪಡೆಯಲು ನಿರ್ಮಿಸಲಾಗಿರುವ ಕೇಂದ್ರದಲ್ಲಿ ಮದುವೆ ಸಂಭ್ರಮ–ಚಿತ್ರ ಕೃಪೆ: NEXTA ಟ್ವಿಟರ್‌ ಖಾತೆ

ವಧು ಹೂವಿನ ಗುಚ್ಚ ಹಿಡಿದು ಮುಗುಳು ನಗುತ್ತಿದ್ದರೆ, ವರ ಬ್ರೆಡ್‌ ಮುರಿದು ಸಂಭ್ರಮ ಹಂಚಿಕೊಳ್ಳುತ್ತಿರುವುದನ್ನು ಚಿತ್ರಗಳಲ್ಲಿ ಕಾಣಬಹುದಾಗಿದೆ. ವಿವಾಹ ನೋಂದಣಿಗೆ ಸಂಬಂಧಿಸಿದ ಕೆಲವು ದಾಖಲೆಗಳಿಗೆ ಸಹಿ ಮಾಡುತ್ತಿರುವುದೂ ಚಿತ್ರದಲ್ಲಿದೆ.

ರಷ್ಯಾ ಪಡೆಗಳು ಈಗಾಗಲೇ ಖೆರ್ಸನ್‌ ನಗರವನ್ನು ವಶಕ್ಕೆ ಪಡೆದಿರುವುದನ್ನು ಉಕ್ರೇನ್‌ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ರಷ್ಯಾದ ದಾಳಿಯ ಆರಂಭದಿಂದ ಈವರೆಗೂ ಉಕ್ರೇನ್‌ನ 2,000ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.