ADVERTISEMENT

ಕದನ ವಿರಾಮಕ್ಕೆ ಒತ್ತಡ: ರಷ್ಯಾ ಜತೆಗೆ ಉಕ್ರೇನ್‌ ಶಾಂತಿ ಮಾತುಕತೆ

ಇನ್ನಷ್ಟು ನಿರ್ಬಂಧ ಹೇರಿದ ಅಮೆರಿಕ

ಏಜೆನ್ಸೀಸ್
Published 28 ಫೆಬ್ರುವರಿ 2022, 22:00 IST
Last Updated 28 ಫೆಬ್ರುವರಿ 2022, 22:00 IST
ಹಾರ್ಕಿವ್‌ನ ರಸ್ತೆಯೊಂದರಲ್ಲಿ ಉಕ್ರೇನ್‌ನ ಯೋಧರು ರಷ್ಯಾದ ಸೇನಾ ವಾಹನಗಳನ್ನು ಸೋಮವಾರ ಧ್ವಂಸ ಮಾಡಿದ್ದಾರೆ–ರಾಯಿಟರ್ಸ್‌ ಚಿತ್ರ
ಹಾರ್ಕಿವ್‌ನ ರಸ್ತೆಯೊಂದರಲ್ಲಿ ಉಕ್ರೇನ್‌ನ ಯೋಧರು ರಷ್ಯಾದ ಸೇನಾ ವಾಹನಗಳನ್ನು ಸೋಮವಾರ ಧ್ವಂಸ ಮಾಡಿದ್ದಾರೆ–ರಾಯಿಟರ್ಸ್‌ ಚಿತ್ರ   

ಕೀವ್‌: ಉಕ್ರೇನ್‌ ಮೇಲೆ ರಷ್ಯಾವು ಕಳೆದ ವಾರ ದಾಳಿ ಆರಂಭಿಸಿದ ಬಳಿಕ ಎರಡೂ ದೇಶಗಳ ನಡುವೆ ಮೊದಲ ಮಾತುಕತೆ ಸೋಮವಾರ ನಡೆದಿದೆ. ತಕ್ಷಣವೇ ಕದನ ವಿರಾಮ ಘೋಷಿಸಬೇಕು ಎಂದು ಉಕ್ರೇನ್‌ ನಿಯೋಗವು ಒತ್ತಾಯಿಸಿದೆ. ಪಶ್ಚಿಮದ ದೇಶಗಳು ವಿವಿಧ ರೀತಿಯ ನಿರ್ಬಂಧಗಳನ್ನು ಹೇರುವ ಮೂಲಕ ರಷ್ಯಾವನ್ನು ಮಣಿಸಲು ಯತ್ನಿಸುತ್ತಿವೆ.

ಬೆಲರೂಸ್‌ ಮತ್ತು ಉಕ್ರೇನ್‌ನ ಗಡಿಯಲ್ಲಿರುವ ಸ್ಥಳದಲ್ಲಿ ಶಾಂತಿ ಮಾತುಕತೆ ನಡೆಯಿತು. ಆದರೆ, ಸಭೆಯ ದಿನವೇ ರಷ್ಯಾ ನಡೆಸಿದ ಷೆಲ್‌ ದಾಳಿಗೆ ಉಕ್ರೇನ್‌ನ ಎರಡನೇ ಅತ್ಯಂತ ದೊಡ್ಡ ನಗರ ಹಾರ್ಕಿವ್‌ನಲ್ಲಿ 11 ಜನರು ಮೃತಪಟ್ಟಿದ್ದಾರೆ.

‘ಈ ಸಭೆಯಿಂದ ಬಿಕ್ಕಟ್ಟು ಬಗೆಹರಿಯುತ್ತದೆ ಎಂಬ ಭರವಸೆ ಏನೂ ಇಲ್ಲ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಮಾತುಕತೆಗೆ ಮೊದಲೇ ಹೇಳಿದ್ದಾರೆ.

ADVERTISEMENT

ಉಕ್ರೇನ್‌ ಬಿಕ್ಕಟ್ಟು ಪರಿಹಾರ ಆಗಬೇಕಿದ್ದರೆ ಆ ದೇಶವು ತಟಸ್ಥ ನಿಲವು ತಳೆಯಬೇಕು. ಸೇನೆಯನ್ನು ತ್ಯಜಿಸಬೇಕು ಮತ್ತು ನಾಜಿ ಮನಸ್ಥಿತಿಯನ್ನು ಬಿಡಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್ ಅವರಿಗೆ ಹೇಳಿದ್ದಾರೆ. ಕ್ರಿಮಿಯಾ, ರಷ್ಯಾದ ಭಾಗ ಎಂಬ ಮಾನ್ಯತೆಯನ್ನೂ ಕೊಡಬೇಕು ಎಂದು ಪುಟಿನ್‌ ಹೇಳಿದ್ದಾರೆ. ಪುಟಿನ್‌ ಮತ್ತು ಮ್ಯಾಕ್ರನ್‌ ನಡುವೆ ದೂರವಾಣಿ ಮೂಲಕ ಮಾತುಕತೆ ನಡೆದಿದೆ.

ನಾಗರಿಕರ ಮೇಲೆ ದಾಳಿ ನಡೆಸಬಾರದು, ಪ್ರಮುಖ ರಸ್ತೆಗಳ ಬಳಕೆಗೆ ನಾಗರಿಕರಿಗೆ ಅಡ್ಡಿ ಮಾಡಬಾರದು, ನಾಗರಿಕ ಮೂಲ
ಸೌಕರ್ಯಗಳನ್ನು ನಾಶ ಮಾಡಬಾರದು ಎಂದು ಪುಟಿನ್‌ ಅವರನ್ನು ಮ್ಯಾಕ್ರನ್‌ ಅವರು ಒತ್ತಾಯಿಸಿದ್ದಾರೆ. ಇದಕ್ಕೆ ಪುಟಿನ್‌ ಒಪ‍್ಪಿಗೆ ಸೂಚಿಸಿದ್ದಾರೆ ಎಂದು ಮ್ಯಾಕ್ರನ್‌ ಅವರ ಕಚೇರಿಯು ತಿಳಿಸಿದೆ.

ಅಮೆರಿಕ ಮತ್ತು ಇತರ ದೇಶಗಳು ರಷ್ಯಾ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ಸೋಮವಾರ ಹೇರಿವೆ. ರಷ್ಯಾದ ಕೇಂದ್ರೀಯ ಬ್ಯಾಂಕ್‌ನ ಜತೆಗೆ ಯಾವುದೇ ವಹಿವಾಟು ನಡೆಸುವುದಿಲ್ಲ ಎಂದು ಅಮೆರಿಕ ಘೋಷಿಸಿದೆ. ವಿದೇಶಿ ಮೀಸಲನ್ನು ಸ್ಥಗಿತಗೊಳಿಸಲಾಗುವುದು ಎಂದಿದೆ. ಸಾಂಪ್ರದಾಯಿಕವಾಗಿ ತಟಸ್ಥ ನಿಲುವು ತಳೆಯುವ ಸ್ವಿಟ್ಜರ್‌ಲೆಂಡ್‌ ಕೂಡ ಈ ಬಾರಿ ನಿಲುವು ಬದಲಿಸಿದೆ. ಐರೋಪ್ಯ ಒಕ್ಕೂಟದ ನಿಲುವೇ ತನ್ನದೂ ಆಗಿದೆ ಎಂದಿದೆ.

‘ಪಶ್ಚಿಮ ದೇಶಗಳ ನಿರ್ಬಂಧವು ಬಹಳ ಕಠಿಣವಾಗಿವೆ. ಆದರೆ, ನಮ್ಮ ದೇಶವು ಇಂತಹ ಹಾನಿಯನ್ನು ಪರಿಹರಿಸಿಕೊಳ್ಳುವ ಶಕ್ತಿಯನ್ನು ಹೊಂದಿದೆ’ ಎಂದು ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಹೇಳಿದ್ದಾರೆ.

ತೆರವು ಕಾರ್ಯಾಚರಣೆಗೆ ನಾಲ್ವರು ಉಸ್ತುವಾರಿ:

ಉಕ್ರೇನ್‌ನಿಂದ ವಿದ್ಯಾರ್ಥಿಗಳ ತೆರವು ಕಾರ್ಯಾಚರಣೆಗೆ ಕೇಂದ್ರ ಸರ್ಕಾರವು ನಾಲ್ವರು ಸಚಿವರನ್ನು ಉಸ್ತುವಾರಿಯಾಗಿ ಸೋಮವಾರ ನಿಯೋಜನೆ ಮಾಡಿದೆ. ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನು ಹಂಗೆರಿ, ರೊಮೇನಿಯಾ, ಪೋಲೆಂಡ್, ಸ್ಲೊವಾಕಿಯಾ ಮತ್ತು ಮಾಲ್ಡೋವಾ ಮೂಲಕ ತೆರವು ಮಾಡಲಾಗುತ್ತಿದೆ.

ಹಂಗರಿ ಮೂಲಕ ನಡೆಯುವ ತೆರವು ಕಾರ್ಯಾಚರಣೆಯ ಉಸ್ತುವಾರಿಯನ್ನು ಸಚಿವ ಹರದೀಪ್ ಸಿಂಗ್ ಪುರಿ ಅವರಿಗೆ ವಹಿಸಲಾಗಿದೆ. ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ರೊಮೇನಿಯಾ ಮತ್ತು ಮಾಲ್ಡೋವಾದ ಕಾರ್ಯಾಚರಣೆಯನ್ನು ನಿರ್ವಹಿಸಲಿದ್ದಾರೆ. ಕಿರಣ್ ರಿಜಿಜು ಅವರು ಸ್ಲೊವಾಕಿಯಾ ಮತ್ತು ವಿ.ಕೆ.ಸಿಂಗ್ ಅವರು ಪೋಲೆಂಡ್‌ ಮೂಲಕ ನಡೆಯುವ ಕಾರ್ಯಾಚರಣೆಗಳ ಉಸ್ತುವಾರಿಯಾಗಿದ್ದಾರೆ. ನಾಲ್ವರೂ ಸಚಿವರುಗಳು ತಮಗೆ ವಹಿಸಿರುವ ದೇಶಗಳಿಗೆ ತೆರಳಿ, ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿದೆ.

ಮೋದಿ ಮತ್ತೊಂದು ಸಭೆ:ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್‌ನಲ್ಲಿನ ಬಿಕ್ಕಟ್ಟಿನ ಸಂಬಂಧ ಸೋಮವಾರ ಸಂಜೆ ಸಹ ಉನ್ನತ ಮಟ್ಟದ ಎರಡನೇ ಸಭೆ ನಡೆಸಿದ್ದಾರೆ. ತೆರವು ಕಾರ್ಯಾಚರಣೆಯ ಉಸ್ತುವಾರಿ ಸಚಿವರು, ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಮತ್ತು ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್ ಅವರು ಸಭೆಯಲ್ಲಿದ್ದರು. ಸಭೆಯ ವಿವರಗಳು ಬಹಿರಂಗವಾಗಿಲ್ಲ.

* ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಆರಂಭಿಸಿ ಐದು ದಿನಗಳು ಕಳೆದಿವೆ

*ಉಕ್ರೇನ್‌ನಿಂದ ಸಮೀಪದ ದೇಶಗಳಿಗೆ ವಲಸೆ ಹೋದವರ ಸಂಖ್ಯೆ ಸೋಮವಾರ ಐದು ಲಕ್ಷವನ್ನು ದಾಟಿದೆ

* ಉಕ್ರೇನ್‌ನಲ್ಲಿ 352 ನಾಗರಿಕರು ರಷ್ಯಾದ ದಾಳಿಯಿಂದಾಗಿ ಮೃತಪಟ್ಟಿದ್ದಾರೆ. ಅವರಲ್ಲಿ 15 ಮಕ್ಕಳು ಕೂಡ ಸೇರಿದ್ದಾರೆ

*ದಾಳಿಯ ಸಂದರ್ಭದಲ್ಲಿ ರಷ್ಯಾ ಎಸಗಿರುವ ಯುದ್ಧಾಪರಾಧಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಉಕ್ರೇನ್‌ ಹಾಗೂ ಅದರ ಮಿತ್ರ ಪಕ್ಷಗಳು ವಿಶ್ವಸಂಸ್ಥೆಯನ್ನು ಒತ್ತಾಯಿಸಿವೆ

*ರಾಜಧಾನಿ ಕೀವ್‌ ಮತ್ತು ಎರಡನೇ ಅತಿ ದೊಡ್ಡ ನಗರ ಹಾರ್ಕಿವ್‌ ಅನ್ನು ನಿಯಂತ್ರಣಕ್ಕೆ ಪಡೆಯಲು ರಷ್ಯಾಕ್ಕೆ ಸಾಧ್ಯವಾಗಿಲ್ಲ

* ರಷ್ಯಾದ ಕರೆನ್ಸಿ ರೂಬಲ್‌ನ ಬೆಲೆಯು ಡಾಲರ್‌ ಮತ್ತು ಯೂರೊ ಎದುರು ಕುಸಿದಿದೆ. ಹಾಗಾಗಿ, ಬಡ್ಡಿದರವನ್ನು ದುಪ್ಪಟ್ಟಿಗಿಂತಲೂ ಹೆಚ್ಚಿಸಿ ರಷ್ಯಾದ ಕೇಂದ್ರೀಯ ಬ್ಯಾಂಕ್‌ ಆದೇಶ ಹೊರಡಿಸಿದೆ. ಈಗ ಅಲ್ಲಿ ಬಡ್ಡಿ ದರವು ಶೇ 20ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.