ADVERTISEMENT

ಕುರ್ಸ್‌ಕ್ ಪ್ರದೇಶದಲ್ಲಿನ ಅಣು ಸ್ಥಾವರದ ಮೇಲೆ ಉಕ್ರೇನ್‌ ದಾಳಿ: ರಷ್ಯಾ ಆರೋಪ

ಏಜೆನ್ಸೀಸ್
Published 24 ಆಗಸ್ಟ್ 2025, 14:30 IST
Last Updated 24 ಆಗಸ್ಟ್ 2025, 14:30 IST
   

ಮಾಸ್ಕೊ: ಉಕ್ರೇನ್‌ ಪಡೆಗಳು ಡ್ರೋನ್‌ ಬಳಸಿ ನಡೆಸಿದ ದಾಳಿಯಿಂದ ದೇಶದ ಪಶ್ಚಿಮ ಭಾಗದ ಕುರ್ಸ್‌ಕ್ ಪ್ರದೇಶದಲ್ಲಿನ ಅಣು ವಿದ್ಯುತ್‌ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ರಷ್ಯಾ ಭಾನುವಾರ ಆರೋಪಿಸಿದೆ.

ತನ್ನ 34ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಸಂದರ್ಭದಲ್ಲೇ ರಾತ್ರೋರಾತ್ರಿ ಉಕ್ರೇನ್‌ ಈ ದಾಳಿಗಳನ್ನು ನಡೆಸಿದ್ದು, ಹಲವು ವಿದ್ಯುತ್‌ ಉತ್ಪಾದನೆ ಮತ್ತು ಇಂಧನ ಘಟಕಗಳನ್ನು ಗುರಿಯಾಗಿಸಿತ್ತು ಎಂದು ರಷ್ಯಾ ಅಧಿಕಾರಿಗಳು ಹೇಳಿದ್ದಾರೆ. ರಷ್ಯಾದ ಈ ಆರೋಪಗಳ ಕುರಿತು ಉಕ್ರೇನ್‌ ಪ್ರತಿಕ್ರಿಯಿಸಿಲ್ಲ.

ಅಣು ವಿದ್ಯುತ್‌ ಸ್ಥಾವರದಲ್ಲಿ ಕಂಡುಬಂದ ಬೆಂಕಿಯನ್ನು ತಕ್ಷಣವೇ ನಂದಿಸಲಾಯಿತು. ಈ ದಾಳಿಯಲ್ಲಿ ಯಾರಿಗೂ ಗಾಯಗಳಾದ ವರದಿಗಳಿಲ್ಲ ಎಂದು ಸಾಮಾಜಿಕ ಮಾಧ್ಯಮ ಟೆಲಿಗ್ರಾಮ್‌ನ ತನ್ನ ಖಾತೆಯಲ್ಲಿ ಸ್ಥಾವರದ ಸಂವಹನ ವಿಭಾಗ ತಿಳಿಸಿದೆ.

ADVERTISEMENT

‘ರಷ್ಯಾದ ಅಣು ಸ್ಥಾವರದಲ್ಲಿನ ಟ್ರಾನ್ಸ್‌ಫಾರ್ಮರ್‌ವೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದ ಬಗ್ಗೆ ಮಾಧ್ಯಮಗಳ ವರದಿ ಗಮನಿಸಿದ್ದೇನೆ. ಸ್ವತಂತ್ರವಾಗಿ ಇದನ್ನು ದೃಢಪಡಿಸುವ ಮಾಹಿತಿ ಲಭ್ಯವಾಗಿಲ್ಲ. ಆದರೆ, ಸದಾಕಾಲವೂ ಪ್ರತಿಯೊಂದು ಅಣು ಸ್ಥಾವರವನ್ನು ರಕ್ಷಿಸುವುದು ಅಗತ್ಯ’ ಎಂದು ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ (ಐಎಇಎ) ಪ್ರಧಾನ ನಿರ್ದೇಶಕ ರಫೇಲ್‌ ಮಾರಿಯಾನೊ ಗ್ರಾಸಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.