ADVERTISEMENT

ಉಕ್ರೇನ್‌ ದಾಳಿ: ಇಂಧನ ಪೈಪ್‌ಲೈನ್‌ ನಾಶ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 14:06 IST
Last Updated 1 ನವೆಂಬರ್ 2025, 14:06 IST
   

ಕೀವ್: ರಷ್ಯಾ ಸೇನೆಗೆ ಇಂಧನ ಸರಬರಾಜು ಮಾಡುವ ಪ್ರಮುಖ ಪೈಪ್‌ಲೈನ್‌ ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಉಕ್ರೇನ್‌ ಸೇನೆಯ ಗುಪ್ತಚರ ವಿಭಾಗ ಶನಿವಾರ ತಿಳಿಸಿದೆ.

ಉಕ್ರೇನ್‌ನ ಇಂಧನ ಮೂಲಸೌಕರ್ಯದ ಮೇಲೆ ರಷ್ಯಾ ಸೇನೆಯು ಭಾರಿ ಪ್ರಮಾಣದಲ್ಲಿ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿರುವುದರ ಮಧ್ಯೆಯೇ ಈ ಬೆಳವಣಿಗೆ ನಡೆದಿದೆ.

ಸುಮಾರು 400 ಕಿ.ಮೀ ಉದ್ದದ ಈ ಪೈಪ್‌ಲೈನ್‌ ಮಾಸ್ಕೊ ವಲಯದಲ್ಲಿ ಹಾದು ಹೋಗುತ್ತದೆ. ಮಾಸ್ಕೊ, ರ್‍ಯಾಝನ್, ನಿಝ್ನಿ ಮತ್ತು ನೊವೊಗೊರೊಡ್‌ನಲ್ಲಿರುವ ತೈಲ ಸಂಸ್ಕರಣ ಘಟಕಗಳಿಂದ ರಷ್ಯಾ ಸೇನೆಗೆ ಪೆಟ್ರೋಲ್‌, ಡೀಸೆಲ್‌ ಮತ್ತು ವಿಮಾನ ಇಂಧನವನ್ನು ಈ ಪೈಪ್‌ಲೈನ್‌ ಮೂಲಕ ಸರಬರಾಜು ಮಾಡಲಾಗುತ್ತದೆ.

ADVERTISEMENT

ಇಂಧನ ಮೂಲಸೌಕರ್ಯ ಗುರಿಯಾಗಿಸಿ ರಮೆನ್‌ಸ್ಕಿ ಜಿಲ್ಲೆಯ ಬಳಿ ನಡೆಸಿದ ದಾಳಿಯಲ್ಲಿ ಎಲ್ಲ ಮೂರೂ ಪೈಪ್‌ಲೈನ್‌ಗಳು ನಾಶವಾಗಿವೆ. ಈ ಕಾರ್ಯಾಚರಣೆಯು ರಷ್ಯಾ ಸೇನೆಗೆ ‘ಬಲವಾದ ಹೊಡೆತ’ ನೀಡಿದೆ ಎಂದು ಉಕ್ರೇನ್‌ ಹೇಳಿದೆ. 

ಡ್ರೋನ್‌ ದಾಳಿ: ಉಕ್ರೇನ್‌ನ ವಿವಿಧ ನಗರಗಳನ್ನು ಗುರಿಯಾಗಿಸಿ ರಷ್ಯಾ ಸೇನೆ ಶುಕ್ರವಾರ ರಾತ್ರಿಯಿಡೀ ಡ್ರೋನ್‌ ದಾಳಿ ನಡೆಸಿದೆ. ‘ರಷ್ಯಾ ಕಡೆಯಿಂದ 223 ಡ್ರೋನ್‌ಗಳು ಹಾರಿ ಬಂದಿದ್ದು, ಅವುಗಳಲ್ಲಿ 206 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ’ ಎಂದು ಉಕ್ರೇನ್‌ ಸೇನೆಯ ಮೂಲಗಳು ತಿಳಿಸಿವೆ.

ದಕ್ಷಿಣ ಉಕ್ರೇನ್‌ನ ಮೈಕಲೊವ್‌ ವಲಯದ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಒಬ್ಬ ನಾಗರಿಕ ಮೃತಪಟ್ಟು, 15 ಮಂದಿ ಗಾಯಗೊಂಡಿದ್ದಾರೆ. ರಷ್ಯಾ ಸೇನೆ ಇಸ್ಕಂದರ್‌ ಕ್ಷಿಪಣಿ ಬಳಸಿ ದಾಳಿ ನಡೆಸಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.