ADVERTISEMENT

ಶಸ್ತ್ರಾಸ್ತ್ರ ಖರೀದಿ: ಇರಾನ್‌ ಮೇಲಿನ ನಿರ್ಬಂಧ ಅಂತ್ಯ

ಏಜೆನ್ಸೀಸ್
Published 18 ಅಕ್ಟೋಬರ್ 2020, 14:26 IST
Last Updated 18 ಅಕ್ಟೋಬರ್ 2020, 14:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಟೆಹರಾನ್‌:ಯುದ್ಧವಿಮಾನಗಳು, ಟ್ಯಾಂಕರ್‌ಗಳನ್ನು ಸೇರಿದಂತೆ ಇತರ ದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸದಂತೆ ಹತ್ತು ವರ್ಷಗಳ ಅವಧಿಗೆ ಇರಾನ್‌ ಮೇಲೆ ವಿಶ್ವಸಂಸ್ಥೆ ಹೇರಿದ್ದ ನಿರ್ಬಂಧ ಭಾನುವಾರ ಕೊನೆಗೊಂಡಿತು.

ಅಣ್ವಸ್ತ್ರಗಳನ್ನು ಸಿದ್ಧಪಡಿಸುವುದಕ್ಕೆ ಅಮೆರಿಕ ಸೇರಿದಂತೆ ವಿಶ್ವದ ಅನೇಕ ದೇಶಗಳಿಂದ ವಿರೋಧ ವ್ಯಕ್ತವಾಗಿದ್ದರೂ, ಇರಾನ್‌ ತನ್ನ ಈ ಕಾರ್ಯಕ್ರಮವನ್ನು ಮುಂದುವರಿಸಿತ್ತು. ಹೀಗಾಗಿ ಈ ನಿರ್ಬಂಧ ಹೇರಲಾಗಿತ್ತು.

ಅದರಲ್ಲೂ, ಅಮೆರಿಕ ಹೇರಿದ್ದ ಆರ್ಥಿಕ ದಿಗ್ಬಂಧನದಿಂದಾಗಿ ಇರಾನ್‌ ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿಯಾಯಿತು. ಇನ್ನೊಂದೆಡೆ, ಅಮೆರಿಕದಿಂದ ಇಂಥದೇ ಆರ್ಥಿಕ ಪ್ರಹಾರ ಎದುರಿಸುವ ಭೀತಿಯಿಂದ ಹಲವಾರು ದೇಶಗಳು ಈಗಲೂ ಇರಾನ್‌ಗೆ ಶಸ್ತ್ರಾಸ್ತ್ರ ಪೂರೈಸುವ ಸಂಬಂಧ ಒಪ್ಪಂದ ಮಾಡಿಕೊಳ್ಳಲು ಹಿಂಜರಿಯುತ್ತಿವೆ ಎಂದು ಮೂಲಗಳು ಹೇಳಿವೆ.

ADVERTISEMENT

‘ಇರಾನ್‌ನ ರಕ್ಷಣಾ ವ್ಯವಹಾರಗಳು ಈಗ ಮತ್ತೆ ಸಾಮಾನ್ಯ ಸ್ಥಿತಿಗೆ ಬಂದಂತಾಗಿದೆ. ಇದು ಈ ಭಾಗದ ಭದ್ರತೆ, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಬಹುಪಕ್ಷೀಯ ಪ್ರಯತ್ನಕ್ಕೆ ಸಂದ ಜಯ’ ಎಂದು ಇರಾನ್‌ನ ವಿದೇಶಾಂಗ ಸಚಿವ ಮೊಹಮ್ಮದ್‌ ಜಾವದ್‌ ಜರೀಫ್‌ ಟ್ವೀಟ್‌ ಮಾಡಿದ್ದಾರೆ.

ಈ ನಿರ್ಬಂಧ ಕೊನೆಗೊಳ್ಳುತ್ತಿರುವಂತೆಯೇ ರಷ್ಯಾದಿಂದ ಎಸ್‌ಯು–30 ಯುದ್ಧವಿಮಾನಗಳು, ಯಾಕ್‌–130 ತರಬೇತಿ ಯುದ್ಧವಿಮಾನಗಳು ಹಾಗೂ ಟಿ–90 ಟ್ಯಾಂಕ್‌ಗಳನ್ನು ಇರಾನ್‌ ಖರೀದಿಸುವ ಸಾಧ್ಯತೆ ಇದೆ ಎಂದು ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆ (ಡಿಐಎ) ಕಳೆದ ವರ್ಷವೇ ಅಂದಾಜಿಸಿತ್ತು.

ಯುದ್ಧವಿಮಾನ ಪ್ರತಿರೋಧಿಸುವ ಕ್ಷಿಪಣಿ ವ್ಯವಸ್ಥೆ ಎಸ್‌–400 ಅನ್ನು ಸಹ ಖರೀದಿಸಬಹುದು. ಚೀನಾ ಕೂಡ ಕೆಲವು ಶಸ್ತ್ರಾಸ್ತ್ರಗಳನ್ನು ಇರಾನ್‌ಗೆ ಮಾರಾಟ ಮಾಡಬಹುದು ಎಂದೂ ಡಿಐಎ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.