ADVERTISEMENT

ಕೋವಿಡ್‌ ಲಸಿಕೆ: ಈ ವರ್ಷದಲ್ಲೇ ಹರ್ಡ್ ಇಮ್ಯುನಿಟಿ ಸಾಧ್ಯವಿಲ್ಲ: ಸೌಮ್ಯಾ

ಪಿಟಿಐ
Published 12 ಜನವರಿ 2021, 6:37 IST
Last Updated 12 ಜನವರಿ 2021, 6:37 IST
ಸೌಮ್ಯಾ ಸ್ವಾಮಿನಾಥನ್
ಸೌಮ್ಯಾ ಸ್ವಾಮಿನಾಥನ್   

ಜಿನೀವಾ: ‘ಕೋವಿಡ್‌ 19‘ ತಡೆಗಾಗಿ ವಿಶ್ವದ ಹಲವು ರಾಷ್ಟ್ರಗಳು ಲಸಿಕೆ ನೀಡುವ ಪ್ರಕ್ರಿಯೆ ಆರಂಭಿಸಿದರೂ, ಈ ವರ್ಷದಲ್ಲೇ ಸಮುದಾಯದಲ್ಲಿ ರೋಗನಿರೋಧಕ ಶಕ್ತಿ (ಹರ್ಡ್‌ ಇಮ್ಯುನಿಟಿ) ಹೆಚ್ಚಾಗುವ ಸಾಧ್ಯತೆ ಕಡಿಮೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಎಚ್ಚರಿಸಿದ್ದಾರೆ.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇತ್ತೀಚೆಗೆ ಬ್ರಿಟನ್, ಅಮೆರಿಕ, ಫ್ರಾನ್ಸ್, ಕೆನಡಾ, ಜರ್ಮನಿ, ಇಸ್ರೇಲ್, ನೆದರ್ಲ್ಯಾಂಡ್‌ ಸೇರಿಸಂತೆ ವಿವಿಧ ರಾಷ್ಟ್ರಗಳು ತಮ್ಮ ಲಕ್ಷಾಂತರ ನಾಗರಿಕರಿಗೆ ಕೊರೊನಾ ವಿರುದ್ಧದ ಲಸಿಕೆ ನೀಡಲು ಪ್ರಾರಂಭಿಸಿವೆ. ಈ ಲಸಿಕೆ ದುರ್ಬಲರನ್ನು ರಕ್ಷಿಸಲು ಆರಂಭಿಸಿದರೂ, 2021ರ ಅವಧಿಯಲ್ಲಿ ವಿಶ್ವದಾದ್ಯಂತ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಾಧ್ಯವಿಲ್ಲ‘ ಎಂದು ಸ್ಪಷ್ಟಪಡಿಸಿದರು.

‘ವಿಶ್ವದ ಒಂದೆರಡು ಭಾಗಗಳಲ್ಲಿ ಹರ್ಡ್‌ ಇಮ್ಯುನಿಟಿ ಸಾಧ್ಯವಾದರೂ, ವಿಶ್ವದಾದ್ಯಂತವಿರುವ ಎಲ್ಲರನ್ನೂ ಒಂದೇ ವರ್ಷದಲ್ಲಿ ರಕ್ಷಿಸಲು ಸಾಧ್ಯವಾಗುವುದಿಲ್ಲ‘ ಎಂದು ತಿಳಿಸಿದರು.

ADVERTISEMENT

ಹೀಗಾಗಿ ನಿರ್ಣಾಯಕ ಹಂತದಲ್ಲಿರುವ ರಾಷ್ಟ್ರಗಳು, ತಮ್ಮ ದೇಶದ ಜನರ ಭವಿಷ್ಯದ ದೃಷ್ಟಿಯಿಂದ, ಲಸಿಕೆಯ ಜತೆಗೆ, ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸೌಮ್ಯಾ ಸಲಹೆ ನೀಡಿದರು.

ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕರ ಸಲಹೆಗಾರ ಡಾ.ಬ್ರೂಸ್ ಐಲ್ವರ್ಡ್‌, ‘ಈ ತಿಂಗಳ ಅಂತ್ಯದಲ್ಲಿ ಅಥವಾ ಫೆಬ್ರುವರಿ ಆಂಭದಲ್ಲಿ ವಿಶ್ವದ ಕೆಲವು ಬಡ ರಾಷ್ಟ್ರಗಳಲ್ಲಿ ಕೊರೊನಾ ವಿರುದ್ಧದ ಲಸಿಕೆ ಹಾಕುವ ಅಭಿಯಾನ ಆರಂಭವಾಗಬಹುದೆಂದುವಿಶ್ವ ಆರೋಗ್ಯ ಸಂಸ್ಥೆ ಆಶಿಸಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.