ನ್ಯೂಯಾರ್ಕ್: ವಿಶ್ವಸಂಸ್ಥೆಯ (ಯುಎನ್) ಮಾನವೀಯ ನೆರವು ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಅವರಿಗೆ ಕೋವಿಡ್–19 ದೃಢಪಟ್ಟಿದೆ.
'ನನಗೆ ಕೋವಿಡ್ ದೃಢಪಟ್ಟಿದೆ ಎಂದು ತಿಳಿಸಲು ಬೇಸರವಾಗುತ್ತಿದೆ. ಪ್ರಯಾಣವನ್ನು ರದ್ದುಪಡಿಸಿ, ಮನೆಯಲ್ಲಿಯೇ ಪ್ರತ್ಯೇಕವಾಸದಲ್ಲಿ ಉಳಿದಿದ್ದೇನೆ. ಆರೋಗ್ಯ ಮಾರ್ಗಸೂಚಿಯನ್ನು ಅನುಸರಿಸುತ್ತಿದ್ದೇನೆ' ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಹಾಗೆಯೇ, ಈಗಾಗಲೇ ಕೋವಿಡ್ ತಡೆ ಲಸಿಕೆ ಪಡೆದುಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಉಕ್ರೇನ್–ರಷ್ಯಾ ಯುದ್ಧ ಪರಿಸ್ಥಿತಿ ಕುರಿತಂತೆ ಟರ್ಕಿಯಲ್ಲಿ ಈ ವಾರಾಂತ್ಯದಲ್ಲಿ ಸಭೆಗಳು ನಿಗದಿಯಾಗಿವೆ. ಇದರ ಸಲುವಾಗಿ ಟರ್ಕಿ ಪ್ರವಾಸ ಕೈಗೊಳ್ಳುವುದಾಗಿಸೋಮವಾರವಷ್ಟೇ ಗ್ರಿಫಿತ್ಸ್ ಪ್ರಕಟಿಸಿದ್ದರು.
ಮಾಸ್ಕೋ ಮತ್ತು ಕೀವ್ ಜೊತೆಗೆ ಇತ್ತೀಚೆಗೆ ನಡೆಸಿದ ಸಭೆಗಳ ಸಂದರ್ಭದಲ್ಲಿ, ನಿರ್ದಿಷ್ಟ ಮಾನವೀಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ಸೇರಲು ಒಪ್ಪುವಂತೆ ಎರಡೂ ದೇಶಗಳನ್ನು ಒತ್ತಾಯಿಸಿದ್ದರು. ಹಾಗೆಯೇ, ಉಕ್ರೇನ್ ಪರಿಸ್ಥಿತಿ ಕುರಿತು ಟರ್ಕಿಯಲ್ಲಿ ಚರ್ಚಿಸಿದ ಬಳಿಕ, ಮತ್ತೊಂದು ಸುತ್ತಿನ ಮಾತುಕತೆಗಾಗಿ ಮಾಸ್ಕೋಗೆ ಭೇಟಿ ನೀಡುವ ಇಂಗಿತವನ್ನೂ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.