ADVERTISEMENT

ಗಾಜಾದಲ್ಲಿ ‘ಸುರಕ್ಷಿತ ವಲಯ’ ಸ್ಥಾಪಿಸಲು ಸಾಧ್ಯವಿಲ್ಲ: ವಿಶ್ವಸಂಸ್ಥೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 15:28 IST
Last Updated 5 ಡಿಸೆಂಬರ್ 2023, 15:28 IST
<div class="paragraphs"><p>ವಿಶ್ವಸಂಸ್ಥೆ</p></div>

ವಿಶ್ವಸಂಸ್ಥೆ

   

ಜಿನೇವಾ: ಇಸ್ರೇಲ್‌ ಪಡೆಗಳು ಬಾಂಬ್‌ ದಾಳಿ ತೀವ್ರಗೊಳಿಸಿರುವ ಕಾರಣ ಗಾಜಾ ಪಟ್ಟಿಯೊಳಗೆ ನಾಗರಿಕರಿಗೆ ‘ಸುರಕ್ಷಿತ ವಲಯ’ ಸ್ಥಾಪಿಸಲು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದೆ.

ಉತ್ತರ ಗಾಜಾವನ್ನು ಗುರಿಯಾಗಿಸಿ ಇಸ್ರೇಲ್‌ ವಾಯುದಾಳಿ ತೀವ್ರಗೊಳಿಸಿದೆ.  ಇದೇ ವೇಳೆ ಪ್ಯಾಲೆಸ್ಟೀನ್‌ನ ನಾಗರಿಕರು ದಕ್ಷಿಣ ಗಾಜಾ ತೊರೆದು ಬೇರೆ ಕಡೆ ತೆರಳುವಂತೆಯೂ ಕರಪತ್ರಗಳನ್ನು ಹಂಚಿದೆ ಎಂದು ವಿಶ್ವಸಂಸ್ಥೆ‌ಯ ಅಂಗಸಂಸ್ಥೆ ಯುನಿಸೆಫ್‌ನ ವಕ್ತಾರ ಜೇಮ್ಸ್‌ ಎಲ್ಡರ್‌ ಹೇಳಿದ್ದಾರೆ.

ADVERTISEMENT

‘ಇಸ್ರೇಲ್‌ ಸ್ಥಾಪಿಸಿರುವ ಸ್ವಘೋಷಿತ ಸುರಕ್ಷಿತ ವಲಯಗಳು ಅವೈಜ್ಞಾನಿಕವಾಗಿವೆ. ಇವು ಸುರಕ್ಷಿತವಲ್ಲ ಮತ್ತು ಇವುಗಳನ್ನು ಮಾನವೀಯ ನೆಲೆಯಲ್ಲಿ ಸ್ಥಾಪಿಸಿಲ್ಲ’ ಎಂದಿದ್ದಾರೆ.

ದಕ್ಷಿಣ ಗಾಜಾಪಟ್ಟಿಯಲ್ಲಿಯೂ ಹಮಾಸ್‌ ಬಂಡುಕೋರರ ವಿರುದ್ಧ ಇಸ್ರೇಲ್‌ ಪಡೆಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವುದನ್ನು ಉಲ್ಲೇಖಿಸಿ ಜೇಮ್ಸ್‌ ಅವರು ಈ ಹೇಳಿಕೆ ನೀಡಿದ್ದಾರೆ.

‘ಸುರಕ್ಷಿತ ವಲಯ ಎಂದರೆ ಅಲ್ಲಿ ನಾಗರಿಕರಿಗೆ ಆಹಾರ, ನೀರು, ಔಷಧಗಳು ಮತ್ತು ಆಶ್ರಯ ಸಿಗಬೇಕು’ ಎಂದೂ ತಿಳಿಸಿದ್ದಾರೆ. ಜೇಮ್ಸ್‌ ಅವರು ಕಳೆದ ವಾರ ಗಾಜಾಕ್ಕೆ ಭೇಟಿ ನೀಡಿದ್ದರು.

ಖಾನ್‌ ಯೂನಿಸ್‌ ಮೇಲೆ ತೀವ್ರ ದಾಳಿ: ಗಾಜಾದ ಎರಡನೇ ಅತಿ ದೊಡ್ಡ ನಗರವಾದ ಖಾನ್‌ ಯೂನಿಸ್‌ ಮೇಲೆ ಇಸ್ರೇಲ್‌ ಪಡೆಗಳು ಬಾಂಬ್‌ ದಾಳಿಯನ್ನು ತೀವ್ರಗೊಳಿಸಿವೆ.

ದಾಳಿಯಲ್ಲಿ ಗಾಯಗೊಂಡಿರುವ ನಾಗರಿಕರನ್ನು ಖಾನ್‌ ಯೂನಿಸ್‌ನ ನಾಸರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ರೆಡ್‌ ಕ್ರಾಸ್‌ ಎಲ್ಲಿ?, ವಿಶ್ವಸಂಸ್ಥೆ ಎಲ್ಲಿ?... ನನ್ನ ಮಕ್ಕಳು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ’ ಎಂದು ಮಹಿಳೆಯೊಬ್ಬರು ತುರ್ತು ನಿರ್ವಹಣಾ ಇಲಾಖೆಯ ಕಚೇರಿಯ ಮುಂಭಾಗದಲ್ಲಿ ಮೊರೆ ಇಡುತ್ತಿದ್ದುದು ಮಂಗಳವಾರ ಕಂಡುಬಂತು ಎಂದು ಹೇಳಿವೆ.

ಖಾನ್‌ ಯೂನಿಸ್‌ ನಗರದ ಹೊರಗೆ ಇಸ್ರೇಲ್‌ ಪಡೆಗಳ ಟ್ಯಾಂಕ್‌ಗಳು ಭಾರಿ ಸಂಖ್ಯೆಯಲ್ಲಿ ನೆರೆದಿರುವುದು ಉಪಗ್ರಹ ಚಿತ್ರಗಳಲ್ಲಿ ದಾಖಲಾಗಿದೆ ಎಂದೂ ವಿವರಿಸಿವೆ. ಯುದ್ಧ ಆರಂಭವಾಗುವುದಕ್ಕೂ ಮೊದಲು ಈ ನಗರದಲ್ಲಿ ನಾಲ್ಕು ಲಕ್ಷ ಜನರು ವಾಸಿಸುತ್ತಿದ್ದರು.

ಹಮಾಸ್‌ ಬಂಡುಕೋರರು ವಸತಿ ಪ್ರದೇಶಗಳಲ್ಲಿ ನಾಗರಿ‌ಕರನ್ನು ಮಾನವ ಗುರಾಣಿಯಂತೆ ಬಳಸಿಕೊಳ್ಳುತ್ತಿದ್ದಾರೆ. ಸುರಂಗ ಮತ್ತು ಬಂಕರ್‌ಗಳಲ್ಲಿ ಆಶ್ರಯ ಪಡೆದಿರುವ ಬಂಡುಕೋರರು ರಾಕೆಟ್‌ ಲಾಂಚರ್‌, ಸ್ನೈಪರ್‌ ರೈಪಲ್‌ಗಳ ಮೂಲಕ ದಾಳಿ ನಡೆಸುತ್ತಿದ್ದಾರೆ ಎಂದು ಇಸ್ರೇಲ್‌ ಸೇನೆಯ ಮೂಲಗಳು ತಿಳಿಸಿವೆ.

15,900ಕ್ಕೂ ಹೆಚ್ಚು ಪ್ಯಾಲೆ‌ಸ್ಟೀನಿಯರ ಸಾವು

ರಾಮಲ್ಲಾ (ರಾಯಿಟರ್ಸ್‌): ಇಸ್ರೇಲ್‌ ಮತ್ತು ಹಮಾಸ್‌ ಬಂಡುಕೋರರ ನಡುವಿನ ಯುದ್ಧದಲ್ಲಿ ಅಕ್ಟೋಬರ್‌ 7ರಿಂದ ಇದುವರೆಗೆ 15900ಕ್ಕೂ ಹೆಚ್ಚು ಮಂದಿ ಪ್ಯಾಲೆ‌ಸ್ಟೀನಿಯರು  ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್‌ನ ಆರೋಗ್ಯ ಸಚಿವೆ ಮೈ ಅಲ್‌ ಕೈಲಾ ಅವರು ಮಂಗಳವಾರ ಹೇಳಿದ್ದಾರೆ.

ಮೃತರಲ್ಲಿ 250 ಮಂದಿ ಆರೋಗ್ಯ ಕಾರ್ಯಕರ್ತರೂ ಸೇರಿದ್ದಾರೆ ಎಂದು‌ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.