ADVERTISEMENT

ನ್ಯೂಯಾರ್ಕ್‌ನಲ್ಲಿ ಭೂಕಂಪ: UN ಭದ್ರತಾ ಸಮಿತಿ ಸಭೆ ಕೆಲಕಾಲ ಸ್ಥಗಿತ

ಪಿಟಿಐ
Published 5 ಏಪ್ರಿಲ್ 2024, 16:24 IST
Last Updated 5 ಏಪ್ರಿಲ್ 2024, 16:24 IST
<div class="paragraphs"><p>ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪ ಕುರಿತ ಎಚ್ಚರಿಕೆಯ ಸಂದೇಶ&nbsp;</p></div>

ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪ ಕುರಿತ ಎಚ್ಚರಿಕೆಯ ಸಂದೇಶ 

   

ರಾಯಿಟರ್ಸ್ ಚಿತ್ರ

ನ್ಯೂಯಾರ್ಕ್‌: ರಿಕ್ಟರ್ ಮಾಪನದಲ್ಲಿ 4.7 ತೀವ್ರತೆಯ ಭೂಕಂಪವು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಶುಕ್ರವಾರ ಸಂಭವಿಸಿದ್ದು, ಇದೇ ಅವಧಿಯಲ್ಲಿ ನಡೆಯುತ್ತಿದ್ದ ವಿಶ್ವ ಸಂಸ್ಥೆಯ ಭದ್ರತಾ ಕೌನ್ಸಿಲ್ ಸಭೆಯು ಕೆಲಕಾಲ ಸ್ಥಗಿತಗೊಂಡಿತು.

ADVERTISEMENT

ಇಸ್ರೇಲ್ ಮತ್ತು ಪ್ಯಾಲೆಸ್ಟೀನ್‌ ನಡುವಿನ ಗಾಜಾ ಪಟ್ಟಿಯಲ್ಲಿನ ಸಂಘರ್ಷ ಕುರಿತ ಚರ್ಚೆಗೆ ವಿಶ್ವಸಂಸ್ಥೆಯ ಪ್ರತಿನಿಧಿಗಳು ಭದ್ರತಾ ಸಮಿತಿ ಆವರಣದಲ್ಲಿ ಸೇರಿದ್ದರು.

ಗಾಜಾ ಪಟ್ಟಿಯಲ್ಲಿ ಮಹಿಳೆಯರು ಹಾಗೂ ಮಕ್ಕಳು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಅಮೆರಿಕದ ಸೇವ್‌ ದಿ ಚಿಲ್ಡ್ರನ್‌ ಸಂಸ್ಥೆಯ ಅಧ್ಯಕ್ಷೆ ಹಾಗೂ ಸಿಇಒ ಜಾಂಟಿ ಸೊರಿಪ್ಟೊ ವಿವರಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಭೂಕಂಪ ಸಂಭವಿಸಿದೆ. ಕಂಪನದ ಅನುಭವವಾಗುತ್ತಿದ್ದಂತೆ ಎಲ್ಲರೂ ಪರಸ್ಪರ ಮುಖ ನೋಡಿಕೊಂಡರು. ಕ್ಷಣಕಾಲ ಅಲ್ಲಿ ಮೌನ ಆವರಿಸಿತು.

‘ಅದು ಭೂಕಂಪದ ಅನುಭವವೇ...?’ ಎಂದು ಜಾಂಟಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವ ಸಂಸ್ಥೆಯ ಪ್ಯಾಲೆಸ್ಟೀನ್‌ ಪ್ರತಿನಿಧಿ ರಿಯಾದ್ ಮನ್ಸೂರ್ ಅವರು ‘ಹೌದು. ನೀವು ನೆಲವನ್ನೇ ಅದರುವಂತೆ ಮಾಡಿಬಿಟ್ಟಿರಿ’ ಎಂದು ಕಿರುನಗೆ ಬೀರಿದರು.

ಅಮೆರಿಕದ ಭೂಗರ್ಭ ವಿಜ್ಞಾನ ವಿಭಾಗವು 4.7 ತೀವ್ರತೆಯ ಭೂಕಂಪ ಎಂದು ಹೇಳಿದೆ. ಜತೆಗೆ ಇದು ನ್ಯೂಜರ್ಸಿಯ ವೈಟ್‌ಹೌಸ್ ಸ್ಟೇಷನ್‌ನಿಂದ ಉತ್ತರಕ್ಕೆ ಏಳು ಕಿ.ಮೀ. ದೂರದಲ್ಲಿ ಇದು ಸಂಭವಿಸಿದೆ. ನ್ಯೂಯಾರ್ಕ್ ನಗರ ಸಹಿತ ಸುತ್ತಮುತ್ತಲಿನ ಪ್ರದೇಶದಲ್ಲಿ ಇದರ ಅನುಭವವಾಗಿದೆ ಎಂದಿದೆ.

‘ಬೆಳಿಗ್ಗೆ 10.30ಕ್ಕೆ ಸಂಭವಿಸಿದ ಭೂಕಂಪದಿಂದ ಯಾವುದೇ ದೊಡ್ಡ ಅನಾಹುತಗಳು, ಜೀವ ಹಾನಿ ಸಂಭವಿಸಿಲ್ಲ. ಇದರ ಮಾಹಿತಿಯನ್ನು ನ್ಯೂಯಾರ್ಕ್‌ ಜನರಿಗೆ ನಿರಂತರವಾಗಿ ನೀಡಲಾಗುವುದು’ ಎಂದು ಗವರ್ನರ್ ಕ್ಯಾಥಿ ಹೊಚುಲ್‌ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.