ADVERTISEMENT

ಭಾರತದ ಜೊತೆಗೆ ಸುಮಧುರ ಬಾಂಧವ್ಯ: ಇಸ್ರೇಲ್‌ ಹೊಸ ಪ್ರಧಾನಿ ಬೆನೆಟ್‌

ಪಿಟಿಐ
Published 14 ಜೂನ್ 2021, 12:09 IST
Last Updated 14 ಜೂನ್ 2021, 12:09 IST
ಭಾನುವಾರ ಇಸ್ರೇಲ್‌ನ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಫ್ತಾಲಿ ಬೆನೆಟ್‌ ಅವರು ನೂತನ ವಿದೇಶಾಂಗ ಸಚಿವ ಯಾಯಿರ್ ಲ್ಯಾಪಿಡ್‌ ಅವರ ಜೊತೆಗೆ ಚರ್ಚೆಯಲ್ಲಿ ತೊಡಗಿರುವುದು.
ಭಾನುವಾರ ಇಸ್ರೇಲ್‌ನ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಫ್ತಾಲಿ ಬೆನೆಟ್‌ ಅವರು ನೂತನ ವಿದೇಶಾಂಗ ಸಚಿವ ಯಾಯಿರ್ ಲ್ಯಾಪಿಡ್‌ ಅವರ ಜೊತೆಗೆ ಚರ್ಚೆಯಲ್ಲಿ ತೊಡಗಿರುವುದು.   

ಜೆರುಸಲೇಮ್‌: ಭಾರತ ಮತ್ತು ಇಸ್ರೇಲ್‌ ನಡುವೆ ‘ವಿಭಿನ್ನ ಮತ್ತು ಸುಮಧುರ ಬಾಂಧವ್ಯ’ ಹೊಂದಲು ಪ್ರಧಾನಿ ನರೇಂದ್ರ ಮೋದಿ ಜೊತೆಗೂಡಿ ಕಾರ್ಯನಿರ್ವಹಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಇಸ್ರೇಲ್‌ನ ನೂತನ ಪ್ರಧಾನಿ ನಫ್ತಾಲಿ ಬೆನೆಟ್‌ ಅವರು ಹೇಳಿದ್ದಾರೆ.

ಯಮಿನ್‌ ಪಕ್ಷದ ಮುಖ್ಯಸ್ಥ, 49 ವರ್ಷದ ಬೆನೆಟ್‌ ಭಾನುವಾರ ಇಸ್ರೇಲ್‌ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇವರಿಗೆ ಅಭಿನಂದಿಸಿ ಪ್ರಧಾನಿ ಮೋದಿ ಮಾಡಿದ್ದ ಟ್ವೀಟ್‌ಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಉಭಯ ದೇಶಗಳ ರಾಜತಾಂತ್ರಿಕ ಒಪ್ಪಂದಕ್ಕೆ ಮುಂದಿನ ವರ್ಷ 30 ವರ್ಷಗಳಾಗಲಿವೆ. ಈ ಸಂಭ್ರಮದ ಹೊತ್ತಿನಲ್ಲಿ ಉಭಯ ದೇಶಗಳ ನಡುವಣ ಸಹಭಾಗಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಭಿನಂದನಾ ಟ್ವೀಟ್‌ನಲ್ಲಿ ತಿಳಿಸಿದ್ದರು.

ADVERTISEMENT

ಇಸ್ರೇಲ್‌ನ ಸಂಸತ್ತು ದೇಶದ 13ನೇ ಪ್ರಧಾನಿಯಾಗಿ ತಮ್ಮ ಆಯ್ಕೆಯನ್ನು ಅನುಮೋದಿಸಿದ ಬಳಿಕ ಬೆನೆಟ್‌ ಪ್ರಮಾಣವಚನ ಸ್ವೀಕರಿಸಿದ್ದರು. ವಿದೇಶಾಂಗ ಸಚಿವರಾಗಿ ಯಾಯಿರ್‌ ಲ್ಯಾಪಿಡ್‌ ಅಧಿಕಾರ ಸ್ವೀಕರಿಸಿದ್ದಾರೆ.

ಭಾರತ ಜೊತೆಗಿನ ಬಾಂಧವ್ಯ ವೃದ್ಧಿಗೆ ಇಸ್ರೇಲ್‌ನ ನೂತನ ಸರ್ಕಾರ ಆದ್ಯತೆ ನೀಡಲಿದೆ ಎಂದು ಲ್ಯಾಪಿಡ್‌ ಅವರು ಹೇಳಿದ್ದಾರೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರ ಅಭಿನಂದನಾ ಟ್ವೀಟ್‌ಗೆ ಪ್ರತಿಕ್ರಿಯಿಸಿ, ’ಬಾಂಧವ್ಯ ವೃದ್ಧಿಗೆ ಪೂರಕವಾಗಿ ಶೀಘ್ರ ಇಸ್ರೇಲ್‌ಗೆ ಆಹ್ವಾನಿಸಲು ಬಯಸುತ್ತೇವೆ‘ ಎಂದಿದ್ದಾರೆ.

ಇಸ್ರೇಲ್‌ನಲ್ಲಿ ನೂತನ ಒಕ್ಕೂಟ ಸರ್ಕಾರ ರಚನೆಗೆ ಆಗಿರುವ ಒಪ್ಪಂದಂತೆ ಸದ್ಯ ವಿದೇಶಾಂಗ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಲ್ಯಾಪಿಡ್‌ ಅವರು, 2023ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಇಸ್ರೇಲ್‌ನ ಪ್ರಧಾನಿಯಾಗಿ 12 ವರ್ಷ ಆಡಳಿತದಲ್ಲಿದ್ದು, ಭಾನುವಾರ ಅಧಿಕಾರದಿಂದ ನಿರ್ಗಮಿಸಿದ ಬೆಂಜಮಿನ್‌ ನೇತನ್ಯಾಹು ಅವರಿಗೂ, ಉಭಯ ದೇಶಗಳ ಬಾಂಧವ್ಯ ನಿಟ್ಟಿನಲ್ಲಿ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.

ಇಸ್ರೇಲ್‌ನಲ್ಲಿ ಇದೇ ಮೊದಲ ಬಾರಿಗೆ ಭಿನ್ನ ಚಿಂತನೆಗಳನ್ನು ಹೊಂದಿರುವ ಎಂಟು ಪಕ್ಷಗಳನ್ನು ಒಳಗೊಂಡ ಒಕ್ಕೂಟದ ಸರ್ಕಾರ ಅಧಿಕಾರಕ್ಕೆ ಬಂದಿದೆ. 120 ಸದಸ್ಯ ಬಲದ ಸಂಸತ್ತಿನಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯದ ಕಾರಣ ರಾಜಕೀಯ ಅನಿಶ್ಚಿತತೆ ಎದುರಾಗಿತ್ತು. ಎರಡು ವರ್ಷಗಳ ಅವಧಿಯಲ್ಲಿ ನಾಲ್ಕು ಬಾರಿ ಸಾರ್ವತ್ರಿಕ ಚುನಾವಣೆ ನಡೆದರೂ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆದಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.