ADVERTISEMENT

ಭಾರತದಲ್ಲಿ ಕೋವಿಡ್ ಪ್ರಕರಣಗಳ ಅಂಕಿ–ಅಂಶ ಆತಂಕಕಾರಿ: ಡಬ್ಲುಎಚ್‌ಒ ಮುಖ್ಯ ವಿಜ್ಞಾನಿ

ಏಜೆನ್ಸೀಸ್
Published 11 ಮೇ 2021, 2:03 IST
Last Updated 11 ಮೇ 2021, 2:03 IST
ಡಬ್ಲ್ಯುಎಚ್‌ಒ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್
ಡಬ್ಲ್ಯುಎಚ್‌ಒ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್    

ಜಿನೀವಾ: ಭಾರತದಲ್ಲಿ ಕೊರೊನಾವೈರಸ್‌ನ ಎರಡನೇ ಅಲೆಯು ತೀವ್ರವಾಗಿದ್ದು, ಸೋಂಕು ಪ್ರಕರಣಗಳು ಮತ್ತು ಸಾವಿನ ಪ್ರಮಾಣ ಏರಿಕೆಯಾಗುತ್ತಿರುವುದು ʼಆತಂಕಕಾರಿಯಾಗಿದೆʼ. ದೇಶದಲ್ಲಿನಿಖರವಾದ ಅಂಕಿ–ಅಂಶಗಳನ್ನು ಅಂದಾಜಿಸಲು ಕಾರ್ಯಪ್ರವೃತ್ತರಾಗಬೇಕು ಎಂದುವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಸೌಮ್ಯಾ,ʼಸದ್ಯ ಪರಿಸ್ಥಿತಿ ತುಂಬಾ ಆತಂಕಕಾರಿಯಾಗಿದೆ. ಭಾರತ ಮತ್ತು ಆಗ್ನೇಯ ದೇಶಗಳಲ್ಲಿ ನಾವು ವರದಿಯಾಗುತ್ತಿರುವ ಪ್ರಕರಣಗಳು, ದೈನಂದಿನ ಸಾವಿನ ಸಂಖ್ಯೆ ತುಂಬಾ ಕಳವಳಕಾರಿಯಾಗಿದೆ. ಹಾಗೆಯೇ ಅದನ್ನುನಾವು ಅರಿತುಕೊಂಡಿದ್ದೇವೆ. ಇಷ್ಟು ಪ್ರಮಾಣದ ಪ್ರಕರಣಗಳನ್ನು ನಾವು ಅಂದಾಜಿಸಿರಲಿಲ್ಲ. ಪ್ರಪಂಚದ ಪ್ರತಿಯೊಂದು ದೇಶವೂಸೋಂಕುಮತ್ತು ಸಾವಿನಪ್ರಕರಣಗಳನ್ನು ನಿಜವಾದ ಸಂಖ್ಯೆಗಿಂತ ಕಡಿಮೆ ಅಂದಾಜಿಸಿದ್ದವು. ಸರ್ಕಾರಗಳು ನಿಖರವಾದ ಸಂಖ್ಯೆಯನ್ನು ವರದಿ ಮಾಡಲು ಅಭ್ಯಾಸಗಳನ್ನು ಹೆಚ್ಚಿಸಬೇಕುʼ ಎಂದು ಹೇಳಿದ್ದಾರೆ.

ʼಇದು (ನಿಖರ ಅಂಕಿ–ಅಂಶದಅಂದಾಜು) ಆಗಲೇಬೇಕು ಮತ್ತು ಆ ಬಗ್ಗೆ ನಾವು ಅರಿವು ಹೊಂದಿರಲೇಬೇಕು. ಏಕೆಂದರೆ, ಉತ್ತಮ ಅಂಕಿ-ಅಂಶ ಮತ್ತು ಉತ್ತಮ ನೀತಿಗಳು ಏನಾಗುತ್ತಿದೆ ಎಂಬುದರತ್ತ ನಿರ್ದೇಶನ ನೀಡಬಹುದು. ನೆನಪಿರಲಿ, ಜನರು ಕೇವಲ ಕೋವಿಡ್‌ನಿಂದಲೇ ಮೃತಪಡುತ್ತಿಲ್ಲ. ಆರೋಗ್ಯಸೇವೆ ಪಡೆದುಕೊಳ್ಳಲಾಗದೆ ಇತರ ಖಾಯಿಲೆಗಳಿಂದಲೂ ಜೀವ ಕಳೆದುಕೊಳ್ಳುತ್ತಿದ್ದಾರೆʼ ಎಂದು ಎಚ್ಚರಿಸಿದ್ದಾರೆ.

ADVERTISEMENT

ರೂಪಾಂತರ ವೈರಸ್‌ನ ಹರಡುವಿಕೆ, ಅದರಿಂದ ಆಗುವ ರೋಗದ ತೀವ್ರತೆ, ಲಸಿಕೆ ಪಡೆದುಕೊಂಡವರಲ್ಲಿನ ಪ್ರತಿಕಾಯ ಪ್ರತಿಕ್ರಿಯೆಗಳ ಬಗ್ಗೆ ಭಾರತದಲ್ಲಿ ಅಧ್ಯಯನ ನಡೆಯುತ್ತಿದೆ. ದೇಶದ ವಿವಿಧ ಪ್ರದೇಶಗಳಲ್ಲಿನ ಸಂಪೂರ್ಣ ಚಿತ್ರಣದ ಮಾಹಿತಿ ಕಲೆಹಾಕಬೇಕಬೇಕೆಂದು ಡಬ್ಲುಎಚ್‌ಒ ವಿಜ್ಞಾನಿಗಳು ಕರೆ ನೀಡಿದ್ದಾರೆ ಎಂದೂ ಹೇಳಿದ್ದಾರೆ.

ದೇಶದಲ್ಲಿ ಪ್ರತಿನಿತ್ಯ ನಾಲ್ಕು ಲಕ್ಷಕ್ಕಿಂತಲೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್‌ಡೌನ್‌ ಜಾರಿಗೊಳಿಸಬೇಕು ಎಂಬ ಒತ್ತಡಗಳು ಕೇಳಿಬರುತ್ತಿವೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಈ ಕ್ರಮ ಕೈಗೊಳ್ಳಲಾಗಿದೆ.

ಕಳೆದ ವರ್ಷ ಭಾರತದಲ್ಲಿಮೊದಲು ಗುರುತಿಸಲ್ಪಟ್ಟ ಕೊರೊನಾವೈರಸ್‌ನ ರೂಪಾಂತರವನ್ನು ಜಾಗತಿಕ ಮಟ್ಟದ ಕಳವಳಕಾರಿ ರೂಪಾಂತರವೆಂದು ವರ್ಗೀಕರಿಸಲಾಗಿತ್ತು. ರೂಪಾಂತರ ವೈರಸ್‌ ಸುಲಭವಾಗಿ ವ್ಯಾಪಕವಾಗಿ ಹರಡಬಲ್ಲದು ಎಂಬುದನ್ನು ಕೆಲವು ಪ್ರಾಥಮಿಕ ಅಧ್ಯಯನಗಳು ಉಲ್ಲೇಖಿಸಿದ್ದವುಎಂದುಡಬ್ಲ್ಯುಎಚ್‌ಒದ ಕೋವಿಡ್-19 ನಿರ್ವಹಣೆ ತಾಂತ್ರಿಕ ವಿಭಾಗದ ಮುಖ್ಯಸ್ಥೆ ಮರಿಯಾ ವಾನ್‌ ಕೆರ್ಖೋವ್‌ ಸೋಮವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.