ADVERTISEMENT

ವಿಯೆಟ್ನಾಂಗೆ ಅಮೆರಿಕದ ರೊನಾಲ್ಡ್‌ ರೇಗನ್‌ ನೌಕೆ ಭೇಟಿ

ಎಪಿ
Published 26 ಜೂನ್ 2023, 13:09 IST
Last Updated 26 ಜೂನ್ 2023, 13:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬ್ಯಾಂಕಾಕ್‌: ಆಗ್ನೇಯ ಏಷ್ಯಾದ ಮೇಲೆ ಪ್ರಭಾವ ಬೀರಲು ಅಮೆರಿಕ ಮತ್ತು ಚೀನಾ ಮಧ್ಯೆ ಪೈಪೋಟಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಅಮೆರಿಕದ ಯುದ್ಧ ವಿಮಾನ ವಾಹಕ ನೌಕೆ ಮತ್ತು ಗುರಿ ನಿರ್ದೇಶಿತ ಕ್ಷಿಪಣಿಗಳ ಎರಡು ಹಡಗುಗಳು ಸೋಮವಾರ ವಿಯೆಟ್ನಾಂ ಬಂದರಿಗೆ ಭೇಟಿ ನೀಡಿವೆ.

ಗುರಿ ನಿರ್ದೇಶಿತ ಕ್ಷಿಪಣಿಗಳಿರುವ ಯುಎಸ್‌ಎಸ್‌ ಅಂಟಿಟಮ್‌ ಮತ್ತು ಯುಎಸ್‌ಎಸ್‌ ರಾಬರ್ಟ್‌ ಸ್ಮಾಲ್ಸ್‌ ಹೆಸರಿನ ಹಡಗುಗಳ ಜತೆಗೆ ಯುಎಸ್‌ಎಸ್‌ ರೊನಾಲ್ಡ್‌ ರೇಗನ್‌ ವಿಮಾನ ವಾಹಕ ನೌಕೆಯು ಭಾನುವಾರವೇ, ಚೀನಾದ ನೆರೆಯ ದೇಶ ವಿಯೆಟ್ನಾಂನ ಡಾ ನಂಗ್‌ ಬಂದರಿಗೆ ಆಗಮಿಸಿದ್ದವು. 

‘ಜಗತ್ತಿನ ಮತ್ತು ಅದರಲ್ಲೂ ಈ ಪ್ರದೇಶದ ಶಾಂತಿ, ಸ್ಥಿರತೆ, ಸಹಕಾರ ಮತ್ತು ಅಭಿವೃದ್ಧಿಗಾಗಿ ರೇಗನ್ ನೌಕೆಯು ಬಂದರಿಗೆ ಆಹ್ವಾನದ ಮೇರೆಗೆ ಭೇಟಿ ನೀಡಿದೆ. ಇದು ನಮ್ಮ ಸ್ನೇಹ ಸಂಬಂಧದ ವಿನಿಮಯ’ ಎಂದು ವಿಯೆಟ್ನಾಂ ವಿದೇಶಾಂಗ ಸಚಿವಾಲಯ ಹೇಳಿದೆ. 

ADVERTISEMENT

‘ರೇಗನ್ ನೌಕೆಯಲ್ಲಿ 5 ಸಾವಿರಕ್ಕೂ ಹೆಚ್ಚಿನ ನಾವಿಕರು ಇದ್ದಾರೆ. ಕೆಲವರು ವಿಯೆಟ್ನಾಂ ಅನ್ನು ತಮ್ಮ ಮನೆಯೆಂದೇ ಕರೆಯುತ್ತಾರೆ. ಆದರೆ, ಬಹುತೇಕರಿಗೆ ಇದು ಮೊದಲ ಭೇಟಿಯಾಗಿದೆ. ಜೂನ್‌ 30ರವರೆಗಿನ ಈ ಭೇಟಿಯಲ್ಲಿ ಹಲವು ಸಮುದಾಯಗಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಥಳೀಯ ಅಥ್ಲೀಟ್‌ಗಳೊಂದಿಗೆ ಕ್ರೀಡಾಕೂಟ, ವೃತ್ತಿಪರ ಮತ್ತು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳಲ್ಲಿ ನಾವಿಕರು ಪಾಲ್ಗೊಳ್ಳಲಿದ್ದಾರೆ’ ಎಂದು ರೇಗನ್‌ ನೌಕೆಯ ಕಮಾಂಡಿಂಗ್‌ ಅಧಿಕಾರಿ, ಕ್ಯಾಪ್ಟನ್‌ ಡೆರಿಲೆ ಕಾರ್ಡನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.