ಚೀನಾ– ಅಮೆರಿಕ ಧ್ವಜ
ರಾಯಿಟರ್ಸ್ ಚಿತ್ರ
ಜಿನೆವಾ: ಆಮದು ವಸ್ತುಗಳ ಮೇಲೆ ಹೇರಿದ್ದ ಭಾರಿ ಪ್ರಮಾಣದ ಪ್ರತಿಸುಂಕವನ್ನು 90 ದಿನಗಳವರೆಗೆ ತಗ್ಗಿಸುವ ಒಪ್ಪಂದವನ್ನು ಅಮೆರಿಕ ಹಾಗೂ ಚೀನಾ ಮಾಡಿಕೊಂಡಿವೆ. ಇದರಿಂದಾಗಿ ‘ಸುಂಕ ಸಮರ’ಕ್ಕೆ ತಾತ್ಕಾಲಿಕವಾಗಿ ತೆರೆಬಿದ್ದಿದೆ.
ವಿಶ್ವಸಂಸ್ಥೆಯ ಸ್ವಿಡ್ಜರ್ಲೆಂಡ್‌ನ ರಾಯಭಾರಿಯ ಅಧಿಕೃತ ನಿವಾಸದಲ್ಲಿ ಎರಡು ದಿನಗಳವರೆಗೆ ಮಾತುಕತೆ ನಡೆಸಿದ ಎರಡೂ ದೇಶಗಳು, ಪರಸ್ಪರರ ಮೇಲೆ ವಿಧಿಸಿದ್ದ ಭಾರಿ ಪ್ರತಿಸುಂಕವನ್ನು ನಾಟಕೀಯವೆಂಬಂತೆ ತೀವ್ರ ಪ್ರಮಾಣದಲ್ಲಿ ತಗ್ಗಿಸಿವೆ. ಈ ಬಗ್ಗೆ ಭಾನುವಾರ ಎರಡೂ ದೇಶಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.
‘ಚೀನಾದ ಉಪಾಧ್ಯಕ್ಷ ಹಿ ಲಿಫೆಂಗ್ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಪ್ರತಿನಿಧಿ ಲಿ ಚೆಂಗ್‌ಗಾಂಗ್ ಅವರೊಂದಿಗೆ ನಡೆಸಿದ ಮಾತುಕತೆಯು ಅನುಕೂಲಕರವಾಗಿತ್ತು’ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದರು. ಈ ಮಾಹಿತಿ ಹೊರಬೀಳುತ್ತಿದ್ದಂತೆಯೇ ಜಗತ್ತಿನ ಷೇರು ಮಾರುಕಟ್ಟೆಯಲ್ಲಿ ಚೇತರಿಕೆಯಾಗಿದೆ.
‘ಮಾತುಕತೆಯು ಎರಡೂ ದೇಶಗಳ ಹಿತದೃಷ್ಟಿಯಿಂದ ಕೂಡಿತ್ತು. ಜೊತೆಗೆ ಜಗತ್ತಿನ ಹಿತವೂ ಇತ್ತು. ಏಕಪಕ್ಷೀಯವಾಗಿ ಸುಂಕ ಏರಿಸುವ ತಪ್ಪು ಪ್ರವೃತ್ತಿಯನ್ನು ಸರಿಪಡಿಸಿಕೊಳ್ಳುವಲ್ಲಿ ಇನ್ನು ಮುಂದೆಯೂ ಅಮೆರಿಕವು ಚೀನಾದೊಂದಿಗೆ ಹೀಗೆಯೇ ಕೆಲಸ ಮಾಡುತ್ತದೆ ಎಂದು ಭಾವಿಸುತ್ತೇವೆ’ ಎಂದು ಚೀನಾ ಹೇಳಿದೆ.
ಅಮೆರಿಕದ ಪ್ರತಿಸುಂಕವೇ ಅಧಿಕ ಏಕೆ?:
ಫೆಂಟನೆಲ್ ಅನ್ನು ತಯಾರಿಸಲು ಬೇಕಾದ ರಾಸಾಯನಿಕವನ್ನು ಚೀನಾವು ರಫ್ತು ಮಾಡುತ್ತದೆ ಎಂಬುದು ಅಮೆರಿಕದ ಆರೋಪ. ಇದೇ ಕಾರಣಕ್ಕೆ, ಅಮೆರಿಕವು ಚೀನಾದ ಮೇಲೆ ಶೇ 20ರಷ್ಟು ಅಧಿಕ ಸುಂಕವನ್ನು ವಿಧಿಸುತ್ತದೆ. ‘ನಾವು ಫೆಂಟನೆಲ್ ವಿಚಾರವಾಗಿಯೂ ಮಾತುಕತೆ ನಡೆಸುತ್ತೇವೆ. ಈ ಬಗ್ಗೆಯೂ ಉತ್ತಮ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದು ಅಮೆರಿಕ ಹೇಳಿದೆ.
90 ದಿನಗಳ ಬಳಿಕ ಮುಂದೇನು?
ಅಮೆರಿಕದ ಪ್ರತಿಸುಂಕ ನೀತಿಯ ವಿರುದ್ಧವಾಗಿ ಏ.2ರಿಂದ ತೆಗೆದುಕೊಂಡ ಎಲ್ಲ ಕ್ರಮಗಳನ್ನು ಹಿಂಪಡೆಯುವುದಾಗಿ ಚೀನಾ ಹೇಳಿದೆ.
‘ಇಂಥ ಅಧಿಕ ಸುಂಕಗಳಿಂದ ನಾವೇನು ಸಾಧಿಸಿದ್ದೇವೆ... ನಿರ್ಬಂಧಗಳನ್ನಷ್ಟೆ. ನಮ್ಮ ಎರಡೂ ದೇಶಗಳಿಗೂ ಇದು ಬೇಡ. ನಮಗೆ ವ್ಯಾಪಾರ ಬೇಕು. ಒಂದು ಸಮತೋಲಿತ ವ್ಯಾಪಾರ ಬೇಕು’ ಎಂದು ಅಮೆರಿಕ ಹೇಳಿದೆ. ‘ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಮಾತುಕತೆ ನಡೆಸಲಿದ್ದೇವೆ’ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಎಲ್ಲ ಹೇಳಿಕೆಗಳ ಮಧ್ಯೆಯೂ 90 ದಿನಗಳ ಬಳಿಕ ಮುಂದೇನು ಎನ್ನುವ ಕುತೂಹಲ ಹಾಗೆಯೇ ಉಳಿದಿದೆ. ಎರಡೂ ದೇಶಗಳು ಪರಸ್ಪರರ ಮೇಲೆ ಅನುಸರಿಸುತ್ತಿರುವ ಜಟಿಲ ಸುಂಕ ನೀತಿ ಮತ್ತು ವ್ಯಾಪಾರಗಳ ಮೇಲೆ ಹೇರುತ್ತಿರುವ ದಂಡಗಳ ಮೇಲೆ ಈ ಒಪ್ಪಂದವು ಯಾವ ಪರಿಣಾಮ ಬೀರಲಿದೆ ಎಂಬುದು ಖಚಿತವಾಗಿಲ್ಲ. ತಮ್ಮ ಮಧ್ಯೆ ಹಲವು ವರ್ಷಗಳಿಂದ ಇರುವ ಸಮಸ್ಯೆಗಳಿಗೆ ಎರಡೂ ದೇಶಗಳು 90 ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲಿವೆಯೇ ಎಂಬುದರ ಮೇಲೆ ಎಲ್ಲವೂ ನಿಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.