
ಡೊನಾಲ್ಡ್ ಟ್ರಂಪ್
ಚಿತ್ರ ಕೃಪೆ: ಗೆಟ್ಟಿ
ಬೆಂಗಳೂರು: ಇಸ್ರೇಲ್– ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸಿರುವ ದಾಳಿಯಿಂದ ಇಸ್ರೇಲ್‌ನಲ್ಲಿರುವ ಅಮೆರಿಕ ನಾಗರಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದಕ್ಕೆ ಪುಷ್ಠಿ ನೀಡುವಂತೆ ಇಸ್ರೇಲ್‌ನ ಜೆರುಸಲೇಂನಲ್ಲಿನ ಅಮೆರಿಕ ರಾಯಭಾರ ಕಚೇರಿ ನಡೆದುಕೊಂಡಿದೆ.
ಇಸ್ರೇಲ್‌ನಲ್ಲಿರುವ ನಮ್ಮ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ನಾವು ಸಿದ್ಧ ಎನ್ನುವ ಸ್ಥಿತಿಯಲ್ಲಿಲ್ಲ. ಯಾವುದೇ ರಿಸ್ಕ್ ತೆಗೆದುಕೊಂಡು ಹೋಗಲು ಸಿದ್ದ ಎನ್ನುವರಿಗೆ ಅಗತ್ಯ ಕೆಲ ಸೌಲಭ್ಯಗಳು ಇವೆ ಎಂದಷ್ಟೇ ಹೇಳಬಲ್ಲೆವು ಎಂದು ಕೈಚೆಲ್ಲಿದೆ.
ಅಮೆರಿಕ ರಾಯಭಾರ ಕಚೇರಿ ತನ್ನ ಕೆಲ ನಾಗರಿಕರಿಗೆ ಕಳಿಸಿರುವ ಮೇಲ್‌ಗಳಲ್ಲಿ ಹಾಗೂ ಟ್ವೀಟ್‌ಗಳಲ್ಲಿ ಇದು ಬಹಿರಂಗವಾಗಿದ್ದು ಅಷ್ಟೇ ಅಲ್ಲದೇ ಇಸ್ರೇಲ್‌ನಲ್ಲಿರುವ ತನ್ನ ನಾಗರಿಕರ ಸುರಕ್ಷತೆಗೆ ನಾವು ಯಾವುದೇ ಗ್ಯಾರಂಟಿ ಕೊಡುವುದಿಲ್ಲ ಎನ್ನುವ ಅರ್ಥದಲ್ಲಿ ನಡೆದುಕೊಂಡಿರುವುದು ಯುದ್ಧ ಮುಂದುವರೆಯುವುದನ್ನು ಸೂಚ್ಯವಾಗಿಸಿದೆ.
ಇನ್ನೊಂದೆಡೆ ಇರಾನ್ ಒಳಗೆ ಅಮೆರಿಕದ ಸೇನಾಪಡೆ ಕಳುಹಿಸುವುದನ್ನು ತಳ್ಳಿಹಾಕಲು ಆಗುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಮೂಲಕ ಅವರು ದೊಡ್ಡ ಪ್ರಮಾಣದ ದಾಳಿಯ ಬೆದರಿಕೆ ಹಾಕಿದ್ದಾರೆ.
ಇಲ್ಲಿಯವರೆಗೆ ದಾಳಿಯು ಕ್ಷಿಪಣಿ ಮತ್ತು ವೈಮಾನಿಕ ದಾಳಿಯನ್ನು ಕೇಂದ್ರೀಕರಿಸಿತ್ತು. ಇದೀಗ ಟ್ರಂಪ್ ಅವರು ಸೇನಾ ಪಡೆ ನುಗ್ಗಿಸುವುದನ್ನು ತಳ್ಳಿಹಾಕಲಾಗದು ಎಂದಿರುವುದು, ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸುವ ಸೂಚನೆಯಂತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
‘ಭೂಸೇನೆ ನಿಯೋಜಿಸುವ ಅಗತ್ಯ ಬರುವುದಿಲ್ಲ ಎಂದುಕೊಂಡಿದ್ದೇನೆ. ಆದರೆ ಅಗತ್ಯವಿದ್ದರೆ ಭೂಸೇನೆ ನಿಯೋಜಿಸಲು ನಾನು ಭಯಪಡವುದಿಲ್ಲ ಮತ್ತು ಹಿಂಜರಿಯುವುದೂ ಇಲ್ಲ’ ಎಂದು ಅವರು ‘ನ್ಯೂಯಾರ್ಕ್ ಪೋಸ್ಟ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಇನ್ನೊಂದೆಡೆ, ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ‘ಇರಾನ್ ಮೇಲಿನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ’ ಎಂದು ಹೇಳಿದ್ದಾರೆ. ‘ಇಲ್ಲಿಯವರೆಗೂ ನಾವಿನ್ನೂ ದೊಡ್ಡ ಪ್ರಮಾಣದ ದಾಳಿಯನ್ನು ನಡೆಸಿಯೇ ಇಲ್ಲ. ಆದರೆ ಅದು ಶೀಘ್ರದಲ್ಲಿಯೇ ಸಂಭವಿಸಲಿದೆ’ ಎಂದೂ ವಿವರಿಸಿದ್ದಾರೆ.
ಶ್ವೇತಭವನದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, ‘ನಾವು ಇರಾನ್‌ನ ಕ್ಷಿಪಣಿ ಸಾಮರ್ಥ್ಯ ನಾಶಪಡಿಸುವ ಮತ್ತು ನೌಕಾಪಡೆ ನಿರ್ನಾಮ ಮಾಡುವ ಗುರಿ ಹೊಂದಿದ್ದೇವೆ. ಈಗಾಗಲೇ 10 ನೌಕಾ ಹಡಗುಗಳನ್ನು ಹೊಡೆದು ರುಳಿಸಿದ್ದೇವೆ’ ಎಂದಿದ್ದಾರೆ.
‘ಅಲ್ಲದೆ, ಇರಾನ್ ಅಣ್ವಸ್ತ್ರ ಹೊಂದುವುದನ್ನು ತಡೆಯುವ ಮತ್ತು ಅದು ಗಡಿಯಾಚೆಗಿನ ಭಯೋತ್ಪಾದಕತೆಗೆ ಬೆಂಬಲ ನೀಡುವುದನ್ನು ತಡೆಯುವ ಗುರಿ ಗಳನ್ನೂ ಹೊಂದಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.