ADVERTISEMENT

ಅಮೆರಿಕದ ಮಾಜಿ ಅಧ್ಯಕ್ಷ 82 ವರ್ಷದ ಜೋ ಬೈಡನ್‌ಗೆ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆ

ರಾಯಿಟರ್ಸ್
Published 19 ಮೇ 2025, 4:04 IST
Last Updated 19 ಮೇ 2025, 4:04 IST
ಜೋ ಬೈಡನ್‌
ಜೋ ಬೈಡನ್‌   

ನ್ಯೂಯಾರ್ಕ್: ಅಮೆರಿಕದ ಮಾಜಿ ಅಧ್ಯಕ್ಷ 82 ವರ್ಷದ ಜೋ ಬೈಡನ್ ಅವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.

ಇತ್ತೀಚೆಗೆ ಮೂತ್ರದ ಉರಿಯಿಂದ ತಪಾಸಣೆಗೆ ಒಳಗಾದ ಜೋ ಬೈಡನ್ ಅವರಿಗೆ ಜನನೇಂದ್ರೀಯಕ್ಕೆ ಸಂಬಂಧಿಸಿದ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆಯಾಯಿತು. ಇದೀಗ ಅದು ನಾಲ್ಕನೇ ಹಂತದಲ್ಲಿದೆ. ಮೂಳೆಗಳಿಗೂ ಹರಡುವ ಸ್ಥಿತಿಯಲ್ಲಿದೆ ಎಂದು ಬೈಡನ್ ವೈದ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಮಾರಕ ರೋಗಕ್ಕೆ ಸಾಧ್ಯವಿರುವ ಚಿಕಿತ್ಸೆಗಳ ಬಗ್ಗೆ ಬೈಡನ್ ಹಾಗೂ ಅವರ ಕುಟುಂಬದವರ ಜೊತೆ ಚರ್ಚಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಬೈಡನ್ ಅವರಿಗೆ ತಗುಲಿರುವ ಪ್ರಾಸ್ಟೇಟ್ ಕ್ಯಾನ್ಸರ್ ಗಂಭೀರವಾಗಿದೆ. ಮೂಳೆಗಳಿಗೆ ಹರಡಿದೆ. ಚಿಕಿತ್ಸೆಗಳಿದ್ದರೂ ಪರಿಣಾಮಕಾರಿ ಚಿಕಿತ್ಸೆ ಇಲ್ಲ. ಅದಾಗ್ಯೂ ಇತ್ತೀಚೆಗೆ ಈ ಕ್ಯಾನ್ಸರ್‌ಗೆ ತುತ್ತಾಗುತ್ತಿರುವವರು ಸ್ವಲ್ಪ ವರ್ಷ ಬದುಕುಳಿಯುವ ಸಾಧ್ಯತೆ ಪ್ರಮಾಣ ಹೆಚ್ಚಾಗಿದೆ. ಹೆಚ್ಚೆಂದರೆ ಐದರಿಂದ ಹತ್ತು ವರ್ಷ ಬದುಕಿಸಬಹುದು ಎಂದು ಬೈಡನ್ ಅವರ ತಪಾಸಣೆ ನಡೆಸಿದ ಡ್ಯೂಕ್ ಯುನಿವರ್ಸಿಟಿಯ ವೈದ್ಯ ಡಾ. ಜುಡ್ ಮೌಲ್ ಹೇಳಿದ್ದಾರೆ.

ಹೆಚ್ಚಾಗಿ ಬೈಡನ್‌ರಷ್ಟು ವಯಸ್ಸಾದವರಲ್ಲಿ ಈ ಕ್ಯಾನ್ಸರ್ ಕಂಡು ಬರುತ್ತದೆ ಎಂದು ಪ್ರಾಸ್ಟೇಟ್ ಕ್ಯಾನ್ಸರ್ ತಜ್ಞರೂ ಆಗಿರುವ ಮೌಲ್ ಹೇಳಿದ್ದಾರೆ.

ಅಮೆರಿಕದ ಇತಿಹಾಸದಲ್ಲಿ ಜೋ ಬೈಡನ್ ಅವರು ವಯಸ್ಸಿನಲ್ಲಿ ಅತ್ಯಂತ ಹಿರಿಯ ಅಧ್ಯಕ್ಷನಾಗಿ ನಿರ್ಗಮಿಸಿದ್ದಾರೆ. ಅವರು ಅಮೆರಿಕದ 46 ನೇ ಅಧ್ಯಕ್ಷರಾಗಿ 2021ರಿಂದ 2025ರವರೆಗೆ ಆಡಳಿತ ನಡೆಸಿದ್ದರು. ತಮ್ಮ ವಯಸ್ಸು ಹಾಗೂ ಆರೋಗ್ಯದ ಕಾರಣಗಳಿಂದ ಬೈಡನ್ ಅವರು ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲಿಲ್ಲ. ವಯಸ್ಸು ಹಾಗೂ ಆರೋಗ್ಯದ ಬಗ್ಗೆ ವ್ಯಾಪಕ ಟೀಕೆಗಳನ್ನೂ ಅವರು ಎದುರಿಸಿದ್ದರು. ಆದರೆ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಅವರು ತಾವು ಫಿಟ್ ಆಗಿದ್ದೆನೆಂದು ತೋರಿಸಿಕೊಳ್ಳುತ್ತಿದ್ದರು.

ಸದ್ಯ ಡೆಲ್‌ವೇರ್‌ನಲ್ಲಿ ನೆಲೆಸಿರುವ ಜೋ ಬೈಡನ್ ಇತ್ತೀಚೆಗೆ ವಾಷಿಂಗ್ಟನ್‌ನಲ್ಲಿ ನಡೆದಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು.

‘ಹಲವು ಮಂದಿಗೆ ಕಾಣಿಸಿಕೊಂಡಂತೆ ನನಗೂ ಕ್ಯಾನ್ಸರ್ ಕಾಣಿಸಿಕೊಂಡಿದೆ. ನಾನು ಹಾಗೂ ಪತ್ನಿ ಜಿಲ್‌ ಕಷ್ಟದ ಸಂದರ್ಭದಲ್ಲಿ ಮತ್ತಷ್ಟು ಗಟ್ಟಿಯಾಗುತ್ತೇವೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದಗಳು’ ಎಂದು ಪತ್ನಿ ಜಿಲ್‌ ಜತೆಗೆ ಭಾವಚಿತ್ರ ಹಾಕಿಕೊಂಡು ಬೈಡನ್‌ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. 

‘ಬೈಡನ್‌ಗೆ ಕ್ಯಾನ್ಸರ್‌ ಇರುವುದು ತಿಳಿದು ನನಗೆ ಹಾಗೂ ಪತ್ನಿ ಮೆಲಾನಿಯಾಗೆ ತೀವ್ರ ಬೇಸರವಾಗಿದೆ. ಆದಷ್ಟು ಬೇಗ ಕಾಯಿಲೆಯಿಂದ ಗುಣಮುಖರಾಗಲಿ’ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಾಮಾಜಿಕ ಜಾಲತಾಣ ‘ಟ್ರೂಥ್‌’ನಲ್ಲಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.