ADVERTISEMENT

ಕೋವಿಡ್‌ ವಿರುದ್ಧ ಹೋರಾಟ: ಭಾರತಕ್ಕೆ ನೆರವು ನೀಡಲು ಅಮೆರಿಕ ಸದಾ ಸಿದ್ಧ

ಪಿಟಿಐ
Published 8 ಮೇ 2021, 1:17 IST
Last Updated 8 ಮೇ 2021, 1:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್: ‘ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತಕ್ಕೆ ಸಹಾಯ ಮಾಡಲು ಅಮೆರಿಕ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ’ ಎಂದು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕೋವಿಡ್‌ ಎರಡನೇ ಅಲೆ ಎದುರಿಸುತ್ತಿರುವ ಭಾರತಕ್ಕೆ ಕಳೆದ ಒಂದು ವಾರದಲ್ಲಿ ಆರು ಯುದ್ಧ ವಿಮಾನಗಳ ಮೂಲಕ ಅಗತ್ಯ ವೈದ್ಯಕೀಯ ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗಿದೆ’ ಎಂದು ಅಮೆರಿಕ ವಿದೇಶಾಂಗ ವ್ಯವಹಾರಗಳ ಇಲಾಖೆಯಲ್ಲಿ ದಕ್ಷಿಣ ಮತ್ತು ಮಧ್ಯ ಏಷ್ಯಾ ವಿದ್ಯಮಾನಗಳ ಉಸ್ತುವಾರಿ ಎರ್ವಿನ್ ಮಾಸಿಂಗಾ ತಿಳಿಸಿದ್ದಾರೆ.

ಕೋವಿಡ್‌ ಲಸಿಕೆ ತಯಾರಿಸಲು ಬೇಕಾದ ಕಚ್ಚಾ ಸಾಮಗ್ರಿಗಳು ಸೇರಿದಂತೆ ಆಮ್ಲಜನಕ ಸಿಲಿಂಡರ್‌ಗಳು, ಎನ್‌95 ಮಾಸ್ಕ್‌ಗಳನ್ನು ಅಮೆರಿಕ ಈಗಾಗಲೇ ರವಾನಿಸಿದೆ. ಭಾರತಕ್ಕೆ ₹740 ಕೋಟಿ ಮೌಲ್ಯದ (100 ದಶಲಕ್ಷ ಡಾಲರ್‌) ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಡುವ ನಿರೀಕ್ಷೆ ಇದೆ ಎಂದು ಎರ್ವಿನ್ ಮಾಸಿಂಗಾ ಹೇಳಿದ್ದಾರೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮಾತುಕತೆ ನಡೆಸಿದ್ದ ವೇಳೆ ಅವರು ನೀಡಿದ್ದ ಭರವಸೆಗಳನ್ನು ಈಡೇರಿಸಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಎಂದಿದ್ದಾರೆ.

ಇತ್ತೀಚೆಗೆ ಕೋವಿಡ್‌ ಸಾಂಕ್ರಾಮಿಕ ಎದುರಿಸುವ ಮಾರ್ಗಗಳು, ಇಂಡೊ–ಪೆಸಿಫಿಕ್ ಪ್ರದೇಶದಲ್ಲಿನ ಪರಿಸ್ಥಿತಿಯಲ್ಲಿ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರ ನೀಡುವ ಕುರಿತು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಜತೆ ಚರ್ಚೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.