ADVERTISEMENT

ಕದನ ವಿರಾಮ: ರಷ್ಯಾ, ಉಕ್ರೇನ್‌ ಜತೆ ಅಮೆರಿಕ ಮಾತುಕತೆ

ಕದನ ವಿರಾಮ: ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2025, 13:15 IST
Last Updated 25 ಮಾರ್ಚ್ 2025, 13:15 IST
ರಿಯಾದ್‌
ರಿಯಾದ್‌   

ದುಬೈ: ಪ್ರಸ್ತಾವಿತ ಭಾಗಶಃ ಕದನ ವಿರಾಮ ಕುರಿತು ರಷ್ಯಾ ಮತ್ತು ಉಕ್ರೇನ್‌ ಪ್ರತಿನಿಧಿಗಳ ತಂಡದೊಂದಿಗೆ ಅಮೆರಿಕದ ಸಂಧಾನಕಾರರು ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಸೋಮವಾರ ಪ್ರತ್ಯೇಕ ಮಾತುಕತೆ ನಡೆಸಿದರು.

ಉಕ್ರೇನ್‌ ಮತ್ತು ರಷ್ಯಾ ನಡುವೆ ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗಾಣಿಸಲು ಅಮೆರಿಕ ಈ ಮೂಲಕ ಪ್ರಯತ್ನ ಮುಂದುವರಿಸಿದೆ.

ಕಳೆದ ವಾರ ರಷ್ಯಾ ಮತ್ತು ಉಕ್ರೇನ್ ತಾತ್ವಿಕವಾಗಿ ಒಪ್ಪಿಕೊಂಡಿದ್ದ 30 ದಿನಗಳ ಕದನ ವಿರಾಮ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಎರಡೂ ಕಡೆಯವರು ಪರಸ್ಪರರ ವಿರುದ್ಧ ಡ್ರೋನ್‌ ಮತ್ತು ಕ್ಷಿಪಣಿ ದಾಳಿಗಳನ್ನು ಮುಂದುವರಿಸಿದ್ದಾರೆ.

ADVERTISEMENT

ವಾಣಿಜ್ಯ ಸಾಗಣೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಕಪ್ಪು ಸಮುದ್ರದಲ್ಲಿನ ದಾಳಿಗಳನ್ನು ನಿಲ್ಲಿಸುವ ಕುರಿತು ಸೋಮವಾರ ಮಾತುಕತೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಸಂಧಾನಕಾರರನ್ನು ಉಕ್ರೇನ್‌ ಪ್ರತಿನಿಧಿಗಳು ಮತ್ತೆ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಉಕ್ರೇನ್‌ ಅಧ್ಯಕ್ಷ  ವೊಲೊಡಿಮಿರ್ ಝೆಲೆನ್‌ಸ್ಕಿ ಮಾಹಿತಿ ನೀಡಿದ್ದಾರೆ.

ಮಾತುಕತೆಯ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ ರಷ್ಯಾ, ಈ ಮಾತುಕತೆಯ ಫಲಿತಾಂಶಗಳನ್ನು ರಷ್ಯಾ ಮತ್ತು ಅಮೆರಿಕ ಅಧ್ಯಯನ ನಡೆಸಲಿವೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.

ಪ್ರಸ್ತಾವಿತ ಕದನ ವಿರಾಮ ಒಪ್ಪಂದದ ವ್ಯಾಪ್ತಿಯಲ್ಲಿ ಇಂಧನ ಮತ್ತು ಮೂಲಸೌಕರ್ಯ ಬರಲಿದೆ ಎಂದು ಶ್ವೇತಭವನ ಹೇಳಿದೆ. ಆದರೆ, ಒಪ್ಪಂದವು ಈ ನಿಟ್ಟಿನಲ್ಲಿ ಸಂಕುಚಿತವಾಗಿ ಉಲ್ಲೇಖ ಮಾಡುತ್ತದೆ ಎಂದು ರಷ್ಯಾ ಅಭಿಪ್ರಾಯಪಟ್ಟಿದೆ. ಮತ್ತೊಂದೆಡೆ ರೈಲ್ವೆ, ಬಂದರುಗಳಂತಹ ಮೂಲಸೌಕರ್ಯಗಳ ರಕ್ಷಣೆಯನ್ನು ಉಕ್ರೇನ್‌ ಬಯಸುತ್ತದೆ ಎಂದು ಅದರ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

ದಾಳಿ ಮುಂದುವರಿಕೆ: ಒಂದೆಡೆ ಕದನ ವಿರಾಮ ಕುರಿತು ಮಾತುಕತೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ರಷ್ಯಾ ಮತ್ತು ಉಕ್ರೇನ್‌ ದೇಶಗಳು ಗಡಿಯುದ್ದಕ್ಕೂ ದಾಳಿ ಮುಂದುವರಿಸಿವೆ. ದಕ್ಷಿಣ ರಷ್ಯಾದ ತೈಲ ಸಂಸ್ಕರಣಾ ಘಟಕದ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ ನಡೆಸಿದೆ ಎಂದು ರಷ್ಯಾ ಆರೋಪಿಸಿದೆ. ಆದರೆ ಈ ಆರೋಪವನ್ನು ಉಕ್ರೇನ್‌ ತಳ್ಳಿಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.