
ಸೌರ ಫಲಕ
(ಸಾಂದರ್ಭಿಕ ಚಿತ್ರ)
ನವದೆಹಲಿ/ಬೆಂಗಳೂರು: ಭಾರತದ ಕೆಲವು ಸೌರ ಉತ್ಪನ್ನಗಳ ಮೇಲಿನ ಸುಂಕವನ್ನು ಅಮೆರಿಕವು
ಹೆಚ್ಚಿಸಿರುವುದರ ಪರಿಣಾಮವು ತಮ್ಮ ಮೇಲೆ ಸೀಮಿತವಾಗಿ ಇರಲಿದೆ ಎಂದು ಸೌರಫಲಕ ತಯಾರಿಕಾ ವಲಯದ ಪ್ರಮುಖ ಕಂಪನಿಗಳಾದ ವಿಕ್ರಮ್ ಸೋಲಾರ್, ವಾರೀಸ್ ಎನರ್ಜೀಸ್, ಪ್ರೀಮಿಯರ್ ಎನರ್ಜೀಸ್ ಹೇಳಿವೆ.
ಆದರೆ ಪರಿಣಾಮವು ಗಂಭೀರವಾಗಿ ಇರಬಹುದು ಎಂದು ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮೆರಿಕವು ವಿಧಿಸಿರುವ ಭಾರಿ ಪ್ರಮಾಣದ ಸುಂಕವು ಭಾರತದ ಕಂಪನಿಗಳಿಗೆ ತಮ್ಮ ಉತ್ಪನ್ನಗಳನ್ನು ಬೇರೆ ಮಾರುಕಟ್ಟೆಗಳಿಗೂ ರಫ್ತು ಮಾಡಲು ಒಂದು ಅವಕಾಶವಾಗಿ ಒದಗಿಬರಬಹುದು ಎಂದು ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಸಂಸ್ಥೆ ಒಸ್ತಾರಾ ಅಡ್ವೈಸರ್ಸ್‌ನ ಸಿಇಒ ವಸುಧಾ ಮಾಧವನ್ ಹೇಳಿದ್ದಾರೆ.
‘ಅಮೆರಿಕದಲ್ಲಿನ ನಮ್ಮ ವಹಿವಾಟುಗಳು ಭಾರತದಿಂದ ಸೌರಫಲಕ ತರಿಸಿಕೊಳ್ಳುವುದನ್ನು ಅವಲಂಬಿಸಿಲ್ಲ. ಆ ಮಾರುಕಟ್ಟೆಗೆ ನಾವು ಬೇರೆ ಬೇರೆ ಕಡೆಗಳಿಂದ ತರಿಸಿಕೊಳ್ಳುವ ವ್ಯವಸ್ಥೆಯನ್ನು ಈಗಾಗಲೇ ಹೊಂದಿದ್ದೇವೆ. ಹೀಗಾಗಿ ನಮ್ಮ ಮೇಲೆ ಹಣಕಾಸಿನ ದೃಷ್ಟಿಯಿಂದ ಆಗುವ ಪರಿಣಾಮ ಸೀಮಿತವಾಗಿರಲಿದೆ’ ಎಂದು ವಿಕ್ರಮ್ ಸೋಲಾರ್ ಕಂಪನಿಯ ಸಿಎಂಡಿ ಗ್ಯಾನೇಶ್ ಚೌಧರಿ ಹೇಳಿದ್ದಾರೆ.
‘ಈ ಹಂತದಲ್ಲಿ ಅಮೆರಿಕದಲ್ಲಿ ಆಗಬೇಕಿರುವ ಕೆಲಸಗಳನ್ನು ಮಾಡಲು ಯಾವುದೇ ಸಮಸ್ಯೆ ಇಲ್ಲ’ ಎಂದು ವಾರೀ ಸ್ ಎನರ್ಜೀಸ್ ಕಂಪನಿಯ ಹಣಕಾಸು ವಿಭಾಗದ ಸಮೂಹ ಮುಖ್ಯಸ್ಥ ಅಭಿಷೇಕ್ ಪಾರೀಖ್ ಹೇಳಿದ್ದಾರೆ.
ಅಮೆರಿಕದ ಹೊಸ ಸುಂಕದಿಂದಾಗಿ ತಮ್ಮ ವಹಿವಾಟಿಗೆ ಕೂಡ ಯಾವುದೇ ಧಕ್ಕೆ ಇಲ್ಲ ಎಂದು ಪ್ರೀಮಿಯರ್ ಎನರ್ಜೀಸ್‌ನ ಹಿರಿಯ ಅಧಿಕಾರಿ ವಿನಯ್ ರುಸ್ತಾಗಿ ಹೇಳಿದ್ದಾರೆ.
ಭಾರತದ ಸೌರ ಉತ್ಪನ್ನಗಳ ಮೇಲೆ ವಿಧಿಸಲಾಗಿರುವ ಹೆಚ್ಚುವರಿ ಸುಂಕವು ಅವುಗಳ ರಫ್ತು ಪ್ರಮಾಣ ಕಡಿಮೆ ಮಾಡಿ, ಅವು ಭಾರತದ ಮಾರುಕಟ್ಟೆಯಲ್ಲೇ ಉಳಿಯುವಂತೆ ಮಾಡಬಹುದು. ಇದರಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ದರ ಪೈಪೋಟಿ ಹೆಚ್ಚಬಹುದು ಎಂದು ದತ್ತಾ ಪವರ್ ಇನ್ಫ್ರಾ ಪ್ರೈ.ಲಿ. ಕಂಪನಿಯ ಹಿರಿಯ ಉಪಾಧ್ಯಕ್ಷ ತರುಣ್ ಪಧಿ ಹೇಳಿದ್ದಾರೆ.
‘ಶೇ 125ರಷ್ಟು ಸುಂಕ ವಿಧಿಸಿರುವುದು ಭಾರತದ ಸೌರ ಉತ್ಪನ್ನಗಳ ರಫ್ತುದಾರರಿಗೆ ದೊಡ್ಡ ಏಟು. ಈ ಪರಿಯ ಸುಂಕದಿಂದಾಗಿ ಅಮೆರಿಕ ಮಾರುಕಟ್ಟೆಯು ವಾಣಿಜ್ಯ ಚಟುವಟಿಕೆಯ ದೃಷ್ಟಿಯಿಂದ ಅನುಕೂಲಕರ ಅಲ್ಲದ ಸ್ಥಿತಿಗೆ ತಲುಪುತ್ತದೆ’ ಎಂದು ಸರಕು ಸಾಗಣೆ ವಹಿವಾಟಿನಲ್ಲಿ ತೊಡಗಿಸುವ ಜಾಸ್ಪರ್ ಶಿಪ್ಪಿಂಗ್‌ನ ಸಿಇಒ ಪುಷ್ಪಂಕ್ ಕೌಶಿಕ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.