ADVERTISEMENT

ಫೋಟೊ ಜರ್ನಲಿಸ್ಟ್‌ ಡ್ಯಾನಿಷ್‌ ಸಿದ್ಧಿಕಿ ಸಾವಿಗೆ ಅಮೆರಿಕ ಸಂತಾಪ

ಪಿಟಿಐ
Published 17 ಜುಲೈ 2021, 6:52 IST
Last Updated 17 ಜುಲೈ 2021, 6:52 IST
ಡ್ಯಾನಿಷ್‌ ಸಿದ್ಧಿಕಿ
ಡ್ಯಾನಿಷ್‌ ಸಿದ್ಧಿಕಿ   

ವಾಷಿಂಗ್ಟನ್‌: ಅಫ್ಗನ್‌ ಸೇನೆ ಮತ್ತು ತಾಲಿಬಾನಿಗಳ ನಡುವೆ ಸಂಘರ್ಷ ನಡೆಯುತ್ತಿರುವ ಪ್ರದೇಶಗಳ ಸ್ಥಿತಿಗತಿ ಕುರಿತು ವರದಿ ಮಾಡಲು ತೆರಳಿದ್ದ ಭಾರತೀಯ ಮೂಲದ ಫೋಟೊ ಜರ್ನಲಿಸ್ಟ್‌ ಡ್ಯಾನಿಷ್‌ ಸಿದ್ಧಿಕಿ ಹತ್ಯೆಗೀಡಾಗಿದ್ದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಆಡಳಿತ ಸಂತಾಪ ಸೂಚಿಸಿದೆ. ಅಲ್ಲಿನ ಕೆಲ ಸಂಸದರು ಕಂಬನಿ ಮಿಡಿದಿದ್ದಾರೆ.

ಅಫ್ಗಾನಿಸ್ತಾನದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ತಾಲಿಬಾನ್‌ ಮತ್ತು ಅಫ್ಗನ್‌ ಸೇನೆಯ ನಡುವಿನ ಕದನದ ದೃಶ್ಯವನ್ನು ಸೆರೆಹಿಡಿಯಲು ಅವರು ತೆರಳಿದ್ದರು. ಶುಕ್ರವಾರ ಅವರ ಹತ್ಯೆ ನಡೆದಿತ್ತು. 2018ರಲ್ಲಿ ಡ್ಯಾನಿಷ್‌ ಅವರು ಪುಲಿಟ್ಜರ್‌ ಪ್ರಶಸ್ತಿಗೆ ಭಾಜನರಾಗಿದ್ದರು.

‘ಅಫ್ಗಾನಿಸ್ತಾನದ ಘರ್ಷಣೆಯನ್ನು ವರದಿ ಮಾಡುತ್ತಿದ್ದ ಸಂದರ್ಭದಲ್ಲಿ ರಾಯಿಟರ್ಸ್‌ ಫೋಟೊ ಜರ್ನಲಿಸ್ಟ್‌ ಹತ್ಯೆಗೀಡಾಗಿದ್ದಾರೆ. ಈ ವಿಷಯ ತಿಳಿದು ನಮಗೆ ಬಹಳ ನೋವು ಉಂಟಾಗಿದೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರೆ ಜಲೀನಾ ಪೋರ್ಟರ್‌ ವರದಿಗಾರರಿಗೆ ತಿಳಿಸಿದರು.

ADVERTISEMENT

‘ಸಿದ್ಧಿಕಿ ಅವರು ತುರ್ತು ಸಂದರ್ಭಗಳಲ್ಲಿ ಅತ್ಯಂತ ಸವಾಲುಭರಿತ ಸುದ್ದಿಗಳನ್ನು ವರದಿ ಮಾಡುತ್ತಿದ್ದರು. ಉತ್ತಮ ಛಾಯಚಿತ್ರಗಳ ಮೂಲಕ ಮಾನವನ ಭಾವನೆಗಳನ್ನು ಸೆರೆಹಿಡಿಯುತ್ತಿದ್ದರು. ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟಿನ ಬಗ್ಗೆ ಅವರ ಅದ್ಬುತ ವರದಿಗೆ ಪುಲಿಟ್ಜರ್‌ ಪ್ರಶಸ್ತಿ ಸಿಕ್ಕಿತ್ತು’ ಎಂದು ಅವರು ಹೇಳಿದರು.

‘ಸಿದ್ಧಿಕಿ ಅವರ ಸಾವು ಕೇವಲ ರಾಯಿಟರ್ಸ್‌ ಸುದ್ದಿ ಸಂಸ್ಥೆ, ಮಾಧ್ಯಮದವರಿಗೆ ಮಾತ್ರವಲ್ಲದೇ ವಿಶ್ವಕ್ಕೆ ಬಹುದೊಡ್ಡ ನಷ್ಟ. ಅಫ್ಗಾನಿಸ್ತಾನದಲ್ಲಿ ಹಲವಾರು ಪತ್ರಕರ್ತರನ್ನು ಕೊಲ್ಲಲಾಗಿದೆ. ಅಫ್ಗಾನಿಸ್ತಾನದಲ್ಲಿ ಹಿಂಸೆಯನ್ನು ಅಂತ್ಯಗೊಳಿಸಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ಅಮೆರಿಕದ ಸಂಸದ ಜಿಮ್‌ ರಿಶ್ಚ್‌, ಸಿಪಿಜೆಯ ಏಷ್ಯಾ ಸಂಯೋಜಕ ಸ್ಟೀಫನ್ ಬಟ್ಲರ್‌ ಅವರು ಕಂಬನಿ ಮಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.