ADVERTISEMENT

ರಷ್ಯಾ ಜತೆ ಭಾರತ ಉತ್ತಮ ಸಂಬಂಧ: ಅಮೆರಿಕದ ಆಡ್ಮಿರಲ್‌ ಜಾನ್‌

ಎಸ್‌–400 ಕ್ಷಿಪಣಿ ಖರೀದಿ ಪ್ರಸ್ತಾವ: ನಿರ್ಬಂಧ ಹೇರುವುದು ಉತ್ತಮ ಮಾರ್ಗವಲ್ಲ

ಪಿಟಿಐ
Published 25 ಮಾರ್ಚ್ 2021, 8:04 IST
Last Updated 25 ಮಾರ್ಚ್ 2021, 8:04 IST
ಆಡ್ಮಿರಲ್‌ ಜಾನ್‌ ಅಕ್ವಿಲಿನೊ
ಆಡ್ಮಿರಲ್‌ ಜಾನ್‌ ಅಕ್ವಿಲಿನೊ   

ವಾಷಿಂಗ್ಟನ್‌: ಮಿಲಿಟರಿ ಸಾಮಗ್ರಿಗಳು ಮತ್ತು ಭದ್ರತಾ ಸಹಕಾರದ ವಿಷಯದಲ್ಲಿ ರಷ್ಯಾ ಜತೆ ಭಾರತ ಸುದೀರ್ಘ ಅವಧಿಯಿಂದಲೂ ಉತ್ತಮ ಸಂಬಂಧ ಹೊಂದಿದೆ ಎನ್ನುವುದನ್ನು ಅರಿತುಕೊಳ್ಳಬೇಕಾಗಿದೆ ಎಂದು ಅಮೆರಿಕದ ಆಡ್ಮಿರಲ್‌ ಜಾನ್‌ ಅಕ್ವಿಲಿನೊ ತಿಳಿಸಿದ್ದಾರೆ.

ರಷ್ಯಾದಿಂದ ಮಹತ್ವದ ರಕ್ಷಣಾ ಸಾಮಗ್ರಿಗಳನ್ನು ಖರೀದಿಸದಂತೆ ಭಾರತದ ಮೇಲೆ ಒತ್ತಡ ಹೇರಬಹುದೇ ವಿನಾ ನಿರ್ಬಂಧಗಳನ್ನು ಹೇರುವ ಮಾರ್ಗ ಅನುಸರಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ಇಂಡೊ–ಪೆಸಿಫಿಕ್‌ ಕಮಾಂಡ್‌ನ (ಇಂಡೊಪಾಕೊಮ್‌) ಕಮಾಂಡರ್‌ ಹುದ್ದೆಗೆ ನೇಮಕಗೊಳ್ಳುವ ಮುನ್ನ ಸೆನೆಟರ್‌ಗಳ ಜತೆ ನಡೆದ ಸಂದರ್ಶನದಲ್ಲಿ ಜಾನ್ವ ಅಕ್ವಿಲಿನೊ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ADVERTISEMENT

‘ಎಸ್‌–400 ಕ್ಷಿಪಣಿಗಳನ್ನು ಖರೀದಿಸಿದರೆ ಭಾರತದ ಮೇಲೆ ನಾವು ನಿರ್ಬಂಧ ವಿಧಿಸಬೇಕೆ’ ಎಂದು ಸೆನೆಟರ್‌ ಜೆಯಾನ್ನೆ ಶಹೀನ್‌ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನೀತಿ ನಿರೂಪಕರು ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಆದರೆ, ಪರ್ಯಾಯ ಪರಿಹಾರ ಕಂಡುಕೊಳ್ಳುವ ಬಗ್ಗೆ ಆಲೋಚಿಸುವುದು ಉತ್ತಮ. ಭಾರತದ ಜತೆ ನಾವು ಯಾವ ರೀತಿಯ ಸಂಬಂಧಗಳನ್ನು ಹೊಂದಿದ್ದೇವೆ ಎನ್ನುವುದನ್ನು ನಿರ್ಬಂಧ ವಿಧಿಸುವ ಮುನ್ನ ಯೋಚಿಸಬೇಕು’ ಎಂದು ಹೇಳಿದ್ದಾರೆ.

‘ಭಾರತದ ಜತೆಯೂ ಅಮೆರಿಕ ಹಲವಾರು ಕ್ಷೇತ್ರಗಳಲ್ಲಿ ಸಹಭಾಗಿತ್ವ ಹೊಂದಿದೆ. ಹೀಗಾಗಿ, ಈ ಹುದ್ದೆಗೆ ನನ್ನನ್ನು ನೇಮಿಸಿದರೆ ಅಮೆರಿಕದ ರಕ್ಷಣಾ ಸಾಮಗ್ರಿಗಳನ್ನು ಖರೀದಿಸುವ ಪ್ರಸ್ತಾವನ್ನು ಪರಿಗಣಿಸಬೇಕು ಎಂದು ಭಾರತಕ್ಕೆ ಕೋರುತ್ತೇನೆ. ಇದೇ ಅತ್ಯುತ್ತಮ ಪರಿಹಾರ’ ಎಂದು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.