US Elections Results LIVE: ಮತ್ತೆ ಅಬ್ಬರಿಸಲು ಸಜ್ಜಾದ ಡೊನಾಲ್ಡ್ ಟ್ರಂಪ್!
ಪ್ರಜಾವಾಣಿ ವೆಬ್ ಡೆಸ್ಕ್
Published 6 ನವೆಂಬರ್ 2024, 12:34 IST
Last Updated 6 ನವೆಂಬರ್ 2024, 12:34 IST
ಡೊನಾಲ್ಡ್ ಟ್ರಂಪ್..
ಜಗತ್ತಿನ ಅತಿದೊಡ್ಡ ಆರ್ಥಿಕತೆ ಮತ್ತು ಪ್ರಬಲ ಮಿಲಿಟರಿ ಶಕ್ತಿ ಎನಿಸಿರುವ ಅಮೆರಿಕದ ಮುಂದಿನ ಅಧ್ಯಕ್ಷರ ಆಯ್ಕೆಗೆ ಮಂಗಳವಾರ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಾಜಿ ಅಧ್ಯಕ್ಷ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಹಾಗೂ ಹಾಲಿ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ನಡುವಣ ಜಿದ್ದಾಜಿದ್ದಿನ ಸ್ಪರ್ಧೆಯಿಂದಾಗಿ ಈ ಬಾರಿಯ ಅಧ್ಯಕ್ಷೀಯ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ. ಮತದಾರರು ಯಾರಿಗೆ ವಿಜಯದ ಮಾಲೆ ಹಾಕಲಿದ್ದಾರೆ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
US Election Results | ಡೊನಾಲ್ಡ್ ಟ್ರಂಪ್ 9, ಹ್ಯಾರಿಸ್ 5 ರಾಜ್ಯದಲ್ಲಿ ಗೆಲುವು
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ.
ಫ್ಲೋರಿಡಾ, ಇಂಡಿಯಾನಾ, ಕೆಂಟುಕಿ ಸೇರಿದಂತೆ 9 ರಾಜ್ಯಗಳಲ್ಲಿ ಅವರು ಗೆಲುವು ಸಾಧಿಸಿದ್ದಾರೆ. ಇತ್ತ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ನ್ಯೂಯಾರ್ಕ್, ವರ್ಮೊಂಟ್ ಸೇರಿದಂತೆ 5 ರಾಜ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ADVERTISEMENT
ಅಧ್ಯಕ್ಷೀಯ ಚುನಾವಣೆ | ಯಾರೇ ಗೆದ್ದರೂ ಭಾರತ–ಅಮೆರಿಕ ಬಾಂಧವ್ಯ ವೃದ್ಧಿ: ಜೈಶಂಕರ್
ಅಧ್ಯಕ್ಷೀಯ ಚುನಾವಣೆ ಕಣದಲ್ಲಿರುವ ಡೊನಾಲ್ಡ್ ಟ್ರಂಪ್ ಹಾಗೂ ಕಮಲಾ ಹ್ಯಾರಿಸ್ ಅವರಲ್ಲಿ ಯಾರಿಗೇ ಜನಾದೇಶ ಸಿಕ್ಕರೂ, ಅಮೆರಿಕದೊಂದಿಗೆ ಭಾರತದ ಬಾಂಧವ್ಯ ವೃದ್ಧಿಯಾಗಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಅಧ್ಯಕ್ಷೀಯ ಚುನಾವಣೆಗೆ ಅಮೆರಿಕದಾದ್ಯಂತ ಮಂಗಳವಾರ ಮತದಾನ ಪ್ರಾರಂಭವಾಗುವ ಕೆಲವು ಗಂಟೆಗಳ ಮೊದಲು ಮಾತನಾಡಿರುವ ಜೈಶಂಕರ್, ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಹಾಗೂ ಅವರಿಗೂ ಮೊದಲು ಇದ್ದ ನಾಲ್ವರ ಅಧಿಕಾರಾವಧಿಯಲ್ಲೂ ವಾಷಿಂಗ್ಟನ್ ಮತ್ತು ದೆಹಲಿಯ ಸಂಬಂಧ ಸ್ಥಿರವಾದ ಪ್ರಗತಿ ಸಾಧಿಸಿದೆ ಎಂದು ಪ್ರತಿಪಾದಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಗೆದ್ದರೆ ಇತಿಹಾಸ
ಮತ ಎಣಿಕೆ ಪ್ರಗತಿಯಲ್ಲಿದ್ದು, ಡೊನಾಲ್ಡ್ ಟ್ರಂಪ್ ಆರಂಭಿಕ ಮುನ್ನಡೆ ಪಡೆದಿದ್ದಾರೆ. ಆದರೆ, ಸಮೀಕ್ಷೆ ಕಮಲಾ ಅವರು ಟ್ರಂಪ್‌ಗಿಂತ ಕೊಂಚ ಮುನ್ನಡೆಯಲ್ಲಿದ್ದಾರೆ ಎಂದು ಹೇಳಿದ್ದವು. ಒಂದೊಮ್ಮೆ ಕಮಲಾ ಹ್ಯಾರಿಸ್ ಗೆದ್ದರೆ ಇತಿಹಾಸ ಸೃಷ್ಟಿಯಾಗಲಿದೆ.
ಅಮೆರಿಕದ ಅಧ್ಯಕ್ಷ ಗಾದಿಗೇರಿದ ಮೊದಲ ಮಹಿಳೆ, ಮೊದಲ ಕಪ್ಪುವರ್ಣೀಯ ಮಹಿಳೆ ಮತ್ತು ದಕ್ಷಿಣ ಏಷ್ಯಾ ಮೂಲದ ಮೊದಲ ವ್ಯಕ್ತಿ ಎನಿಸಲಿದ್ದಾರೆ
ನಿರ್ಣಾಯಕ ರಾಜ್ಯ ಉತ್ತರ ಕರೋಲಿನಾದಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ, ಕಮಲಾ ಹ್ಯಾರಿಸ್ ಎದುರು 230–205ರ ಅಂತರದಿಂದ ಮುನ್ನಡೆಯಲ್ಲಿದ್ದಾರೆ.
ಪ್ರತಿಯೊಬ್ಬರಿಗೂ ಧನ್ಯವಾದ –ಕಮಲಾ
ಈ ಆಭಿಯಾನದ ಸಮಯದಲ್ಲಿ ಶ್ರಮಿಸಿದ ಹಾಗೂ ಸಂತಸವನ್ನು ಮರಳಿ ತಂದ ಪ್ರತಿಯೊಬ್ಬರಿಗೂ ಧನ್ಯವಾದಗಳು.
–ಕಮಲಾ ಹ್ಯಾರಿಸ್
ಏರಿಕೆಯೊಂದಿಗೆ ವಹಿವಾಟು ಆರಂಭಿಸಿದ ಷೇರುಪೇಟೆ
ಏಳು ‘ಬ್ಯಾಟಲ್‌ಗ್ರೌಂಡ್ ರಾಜ್ಯ’ಗಳಲ್ಲಿ ಕಮಲಾಗೆ ಹಿನ್ನಡೆ
'ಬ್ಯಾಟಲ್‌ಗ್ರೌಂಡ್ ರಾಜ್ಯ'ಗಳ ಪೈಕಿ ಉತ್ತರ ಕೆರೊಲಿನಾದಲ್ಲಿ ಟ್ರಂಪ್ ಗೆಲುವು ಸಾಧಿಸಿದ್ದಾರೆ.
ಪೆನ್ಸಿಲ್ವೇನಿಯಾ, ಅರಿಜೋನಾ, ಜಾರ್ಜಿಯಾ, ಮಿಷಿಗನ್, ವಿಸ್ಕಾನ್‌ಸ್ಕಿನ್ ಮತ್ತು ನೆವಾಡದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ರಾಜ್ಯಗಳು ಇಬ್ಬರ ಪಾಲಿಗೂ ನಿರ್ಣಾಯಕವಾಗಲಿವೆ.
ಅಮೆರಿಕದ 50 ರಾಜ್ಯಗಳಲ್ಲಿ ಈ ಏಳು ರಾಜ್ಯಗಳ ಮತದಾರರನ್ನು ಹೊರತುಪಡಿಸಿ ಹೆಚ್ಚಿನ ರಾಜ್ಯಗಳ ಮತದಾರರು ಒಂದೇ ಪಕ್ಷಕ್ಕೆ ಮತ ಹಾಕುತ್ತಾ ಬಂದಿದ್ದಾರೆ.
ಕಮಲಾ ಭಾಷಣ ರದ್ದು
ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಮುನ್ನಡೆಯ ಅಂತರ ಏರಿಕೆಯಾಗುತ್ತಿದ್ದಂತೆ ಕಮಲಾ ಹ್ಯಾರಿಸ್ ಅವರು ಚುನಾವಣೆಯನ್ನುದ್ದೇಶಿಸಿ ಮಾಡಬೇಕಿದ್ದ ಭಾಷಣವನ್ನು ರದ್ದುಪಡಿಸಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾಲಯದ ಅಲ್ಮಾ ಮಥರ್‌ನಲ್ಲಿ ಕಮಲಾ ಭಾಷಣ ನಿಗದಿಯಾಗಿತ್ತು.
ಬೆಂಬಲಿಗರನ್ನುದ್ದೇಶಿಸಿ ಟ್ರಂಪ್ ಮಾತು
ಒಂದೆಡೆ ಕಮಲಾ ಅವರು ತಮ್ಮ ಭಾಷಣವನ್ನು ರದ್ದುಪಡಿಸಿದ್ದರೆ, ಇತ್ತ ಡೊನಾಲ್ಡ್ ಟ್ರಂಪ್ ಅವರು ತಮ್ಮ ಬೆಂಬಲಿಗರನ್ನುದ್ದೇಶಿಸಿ ಫ್ಲೋರಿಡಾದಲ್ಲಿ ಮಾತನಾಡಲು ಸಜ್ಜಾಗಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಅವರು 247–210 ಅಂತರದ ಮುನ್ನಡೆಯಲ್ಲಿದ್ದಾರೆ. ಸರ್ಕಾರ ರಚನೆಗೆ 270 ಸ್ಥಾನಗಳು ಬೇಕು.
ಟ್ರಂಪ್‌ಗೆ ಮುನ್ನಡೆ; ಹೀಗಿತ್ತು ಮಸ್ಕ್ ಪ್ರತಿಕ್ರಿಯೆ
ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮುನ್ನಡೆ ಸಾಧಿಸಿದ್ದು, ‘ಗೇಮ್, ಸೆಟ್ ಅಂಡ್ ಮ್ಯಾಚ್’ ಎಂದು ಉದ್ಯಮಿ ಇಲಾನ್ ಮಸ್ಕ್ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
'ಶೀಘ್ರದಲ್ಲೇ ಮುಕ್ತಿ'
ಟ್ರಂಪ್‌ಗೆ ಆರಂಭಿಕ ಮುನ್ನಡೆ ದೊರೆಯುತ್ತಿದ್ದಂತೆ 'ಗೇಮ್, ಸೆಟ್ ಅಂಡ್ ಮ್ಯಾಚ್' ಎಂದು ಟ್ವೀಟ್ ಮಾಡಿದ್ದ ಉದ್ಯಮಿ ಎಲಾನ್ ಮಸ್ಕ್, ಇದೀಗ, 'ಅಮೆರಿಕವು ನಿರ್ಮಾಣ ಮಾಡುವವರಿಂದ ಕೂಡಿದ ರಾಷ್ಟ್ರ. ಶೀಘ್ರದಲ್ಲೇ, ನೀವು ನಿರ್ಮಾಣದಲ್ಲಿ ತೊಡಗಿಕೊಳ್ಳಲು ಮುಕ್ತರಾಗುತ್ತೀರಿ' ಎಂದು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಅವರು ಅಭಿನಂದಿಸಿದ್ದಾರೆ. ಟ್ರಂಪ್ ಗೆಲುವಿಗೆ ಅಭಿನಂದಿಸಿ ಪೋಸ್ಟ್ ಹಂಚಿಕೊಂಡಿರುವ ಮೋದಿ, ಅಧ್ಯಕ್ಷೀಯ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಸ್ನೇಹಿತ ಟ್ರಂಪ್ ಅವರಿಗೆ ಅಭಿನಂದನೆಗಳು. ನಮ್ಮ ಜನರಿಗಾಗಿ, ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಸದೃಢತೆಗಾಗಿ ಒಟ್ಟಾಗಿ ಕೆಲಸ ಮಾಡೋಣ. ಭಾರತ ಮತ್ತು ಅಮೆರಿಕ ನಡುವಿನ ಜಾಗತಿಕ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಎದುರು ನೋಡುತ್ತಿರುವುದಾಗಿ ಮೋದಿ ಹೇಳಿದ್ದಾರೆ.
ಎರಡನೇ ಬಾರಿಗೆ ಯುಎಸ್ ಅಧ್ಯಕ್ಷರಾಗುತ್ತಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಅನೇಕ ಜಾಗತಿಕ ನಾಯಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಡೊನಾಲ್ಡ್ ಟ್ರಂಪ್ ಗೆಲ್ಲುತ್ತಿದ್ದಂತೆಯೇ ಅಮೆರಿಕದ ಕಾಲೆಳದಿರುವ ರಷ್ಯಾ, ಇನ್ನಾದರೂ ಅಮೆರಿಕ ತನ್ನ ಪ್ರಜಾಪ್ರಭುತ್ವವನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದೆ. ಈ ಕುರಿತು ರಷ್ಯಾದ ವಿದೇಶಾಂಗ ಇಲಾಖೆ ಪೋಸ್ಟ್ ಮಾಡಿದೆ.
ಡೊನಾಲ್ಡ್ ಟ್ರಂಪ್ ಮತ್ತೆ ಅಧ್ಯಕ್ಷ ಹುದ್ದೆಗೇರುತ್ತಿದ್ದಂತೆ ಭಾರತದ ಷೇರು ಮಾರುಕಟ್ಟೆ ಮತ್ತೆ ಪುಟಿದೆದ್ದಿದೆ. ಸೆನ್ಸೆಕ್ಷ್ 900 ಅಂಕಗಳ ಜಿಗಿತ ಕಂಡರೆ ನಿಫ್ಟಿ 24,450 ಗಡಿ ದಾಟಿದೆ.
ಡೊನಾಲ್ಡ್ ಟ್ರಂಪ್ ಅವರು ಎರಡೂ ಬಾರಿಯೂ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಮಗೆ ಎದುರಾದ ಮಹಿಳೆಗೆ ಸೋಲಿನ ರುಚಿ ತೋರಿಸಿದ್ದಾರೆ. ಈ ಸಾರಿ ಕಮಲಾ ಟ್ರಂಪ್ ಎದುರು ಗೆಲ್ಲುವಲ್ಲಿ ವಿಫಲವಾದರೆ, 2017 ರಲ್ಲಿ ಹಿಲರಿ ಕ್ಲಿಂಟನ್ ಅವರು ಟ್ರಂಪ್ ಎದುರು ಸೋತು ಸುಣ್ಣವಾಗಿದ್ದರು.
ಸಾಕಷ್ಟು ವಿರೋಧದ ನಡುವೆಯೂ ಎರಡನೇ ಬಾರಿ ಗೆದ್ದಿರುವ ಟ್ರಂಪ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ
ಟ್ರಂಪ್‌ಗೆ ಅಭಿನಂದಿಸಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ‘ಮೈತ್ರಿ, ಮೌಲ್ಯಗಳ ಜತೆಗೆ ಐತಿಹಾಸಿಕ ಸ್ನೇಹ ಹೊಂದಿರುವ ಇಟಲಿ ಮತ್ತು ಅಮೆರಿಕ ಸೋದರ ರಾಷ್ಟ್ರಗಳಾಗಿವೆ. ಈ ಕಾರ್ಯತಂತ್ರದ ಬಂಧವನ್ನು ಇನ್ನಷ್ಟು ಬಲಪಡಿಸಲಿದ್ದೇವೆ ಎನ್ನುವ ನಂಬಿಕೆಯಿದೆ ಎಂದು ಹೇಳಿದ್ದಾರೆ.
‘ಮಹದುದ್ದೇಶಕ್ಕಾಗಿಯೇ ದೇವರು ನನ್ನನ್ನು ಬದುಕುಳಿಸಿದ್ದಾರೆ. ಅಮೆರಿಕದ ಪಾಲಿಗೆ ಸುವರ್ಣ ಯುಗದ ಆರಂಭಕ್ಕಾಗಿ ಈ ಬಹುಮತ ಲಭಿಸಿದೆ’ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವಿನ ಸಮೀಪ ತಲುಪಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ. ಪೂರ್ಣ ಸುದ್ದಿ ಓದಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ
ಟ್ರಂಪ್ ಗೆಲುವಿಗೆ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವಾಲಯ, ‘ಪರಸ್ಪರ ಗೌರವ, ಶಾಂತಿಯುತ ಸಹಬಾಳ್ವೆ ಮತ್ತು ಗೆಲವಿನ ಸಹಕಾರದೊಂದಿಗೆ ಚೀನಾ ಅಮೆರಿಕದೊಂದಿಗೆ ಕೆಲಸ ಮಾಡಲಿದೆ’ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಭಾರತ ಮೂಲದ ಅಮೆರಿಕ ಪ್ರಭಾವಿ ರಾಜಕಾರಣಿ ರಿಪಬ್ಲಿಕನ್ ಪಕ್ಷದ ವಿವೇಕ್ ರಾಮಸ್ವಾಮಿ ಅವರಿಂದ ಸಂಭ್ರಮಾಚರಣೆ
ಡೊನಾಲ್ಡ್ ಟ್ರಂಪ್ ಗೆಲುವು ಘೋಷಿಸುತ್ತಿದ್ದಂತೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಿವಿಧ ರೀತಿಯ ಮೀಮ್ಸ್‌ಗಳು ಹರಿದಾಡಿವೆ. ಫಲಿತಾಂಶದ ಬಗ್ಗೆ ಹಾಸ್ಯಮಯವಾದ, ವಿಡಂಬನಾತ್ಮಕ ಪೋಸ್ಟ್‌ಗಳನ್ನು ಬಳಕೆದಾರರು ಹಂಚಿಕೊಂಡಿದ್ದಾರೆ.
ಅಧಿಕೃತವಾಗಿ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರು ಗೆಲುವು ಸಾಧಿಸಿದ್ದಾರೆ. ಅಮೆರಿಕದಾದ್ಯಂತ ಅವರ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿದೆ. ಅನೇಕ ಜಾಗತಿಕ ನಾಯಕರು ಟ್ರಂಪ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜನವರಿ 20ರಂದು ಅಮೆರಿಕದ 47 ನೇ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ ಮತ್ತೆ ನಾಲ್ಕು ವರ್ಷ ಡೊನಾಲ್ಡ್ ಅವರು ಜಗತ್ತಿನಲ್ಲಿ ಸದ್ದು ಮಾಡಲಿದ್ದಾರೆ. ಅವರು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದುವ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗಿದೆ.