ADVERTISEMENT

ನೀವು 1 ಕೋಟಿ ಜನರ ಜೀವ ಉಳಿಸಿದ್ದೀರಿ ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ: ಟ್ರಂಪ್

ಏಜೆನ್ಸೀಸ್
Published 17 ಜನವರಿ 2026, 2:35 IST
Last Updated 17 ಜನವರಿ 2026, 2:35 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

ವಾಷಿಂಗ್ಟನ್: ‘ನೀವು, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದರಿಂದ ಕನಿಷ್ಠ 1 ಕೋಟಿ ಜನರ ಜೀವ ಉಳಿಯಿತು ಎಂದು ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್ ಅವರು ನನಗೆ ಧನ್ಯವಾದ ಅರ್ಪಿಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಿಲ್ಲಿಸಿದ್ದು ನಾನೇ’ ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ADVERTISEMENT

‘ಕಳೆದೊಂದು ವರ್ಷದಲ್ಲಿ ನಾವು ಎಂಟು ಶಾಂತಿ ಒಪ್ಪಂದಗಳನ್ನು ಮಾಡಿದ್ದೇವೆ. ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸಿದ್ದೇವೆ... ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದೇವೆ... ಎರಡು ಪರಮಾಣು ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನ ಹೋರಾಡುವುದನ್ನು ಯಶಸ್ವಿಯಾಗಿ ತಡೆದಿದ್ದೇವೆ. ಹಾಗೆಯೇ ಟ್ರಂಪ್ ಅವರು ಕನಿಷ್ಠ 1 ಕೋಟಿ ಜನರ ಜೀವ ಉಳಿಸಿದ್ದಾರೆ. ಅವರದ್ದು ಅದ್ಭುತ ನಾಯಕತ್ವ ಎಂದು ಪಾಕಿಸ್ತಾನಿ ಪ್ರಧಾನಿ ಹೇಳಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷ ಮೇ 10ರ ನಂತರ ಟ್ರಂಪ್‌ ಅವರು, ಭಾರತ–ಪಾಕ್ ಸಮರ ನಿಲ್ಲಿಸಿದ್ದು ನಾನೇ ಎಂದು 80ಕ್ಕೂ ಹೆಚ್ಚು ಬಾರಿ ಹೇಳಿಕೊಂಡಿದ್ದಾರೆ. ಜತೆಗೆ, ನೊಬೆಲ್ ಶಾಂತಿ ಪ್ರಶಸ್ತಿಗೆ ತಮ್ಮ ಪ್ರತಿಪಾದನೆ ಮಂಡಿಸುವಾಗ ನನ್ನ ಒತ್ತಡವೇ ಭಾರತ ಮತ್ತು ಪಾಕ್‌ ಯುದ್ಧ ಕೊನೆಗೊಳ್ಳುವುದಕ್ಕೆ ಕಾರಣವಾಯಿತು ಎಂದಿದ್ದಾರೆ. ಆದರೆ, ಮೂರನೇ ವ್ಯಕ್ತಿಯ ಮಧ್ಯಪ್ರವೇಶವನ್ನು ಭಾರತ ನಿರಾಕರಿಸುತ್ತಾ ಬಂದಿದೆ.

ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರು ತಮಗೆ ದೊರಕಿದ್ದ ನೊಬೆಲ್ ಶಾಂತಿ ಪುರಸ್ಕಾರವನ್ನು ಗುರುವಾರ ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಅವರಿಗೆ ಸಮರ್ಪಿಸಿದ್ದಾರೆ.

'ವೆನೆಜುವೆಲಾದ ಸ್ವಾತಂತ್ರ್ಯಕ್ಕಾಗಿ ಗಟ್ಟಿ ನಿರ್ಧಾರವನ್ನು ಕೈಗೊಂಡ ಟ್ರಂಪ್ ಅವರಿಗೆ ಅಲ್ಲಿನ ನಾಗರಿಕರ ಪರವಾಗಿ ನಾನು ಗೌರವ ಸಲ್ಲಿಸಿದ್ದೇನೆ. ಟ್ರಂಪ್ ಅವರ ಧೈರ್ಯವನ್ನು ವೆನೆಜುವೆಲಾದ ನಾಗರಿಕರು ಎಂದಿಗೂ ಮರೆಯುವುದಿಲ್ಲ’ ಎಂದು ಮಾರಿಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದರು.

ಈ ಬಗ್ಗೆ ‘ಟ್ರುತ್‌ ಸೋಷಿಯಲ್‌’ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್, ‘ಮಾರಿಯಾ ಒಬ್ಬ ಅದ್ಭುತ ಮಹಿಳೆ. ನಾನು ಮಾಡಿರುವ ಕೆಲಸವನ್ನು ಗುರುತಿಸಿ ಮಾರಿಯಾ ಅವರು ನೊಬೆಲ್ ಶಾಂತಿ ಪುರಸ್ಕಾರವನ್ನು ನನಗೆ ನೀಡಿದ್ದಾರೆ. ಇದು ಪರಸ್ಪರ ಗೌರವದ ಪ್ರತೀಕವಾಗಿದೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.