ADVERTISEMENT

ರಷ್ಯಾದಿಂದ ತೈಲ ಆಮದು ನಿಷೇಧಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ರಾಯಿಟರ್ಸ್
Published 9 ಮಾರ್ಚ್ 2022, 5:25 IST
Last Updated 9 ಮಾರ್ಚ್ 2022, 5:25 IST
ಪತ್ನಿ ಜೊತೆ ಜೋ ಬೈಡನ್: ಪಿಟಿಯ ಚಿತ್ರ
ಪತ್ನಿ ಜೊತೆ ಜೋ ಬೈಡನ್: ಪಿಟಿಯ ಚಿತ್ರ   

ವಾಷಿಂಗ್ಟನ್: ವಿಶ್ವ ಸಮುದಾಯದ ಎಚ್ಚರಿಕೆ ನಡುವೆಯೂ ಉಕ್ರೇನ್ ಮೇಲೆ ದಾಳಿ ಮುಂದುವರಿಸಿರುವ ರಷ್ಯಾದಿಂದ ತೈಲ ಮತ್ತು ಇತರ ಇಂಧನ ಆಮದಿನ ಮೇಲೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿಷೇಧ ಹೇರಿದ್ದಾರೆ. ಈ ಮೂಲಕ ರಷ್ಯಾ ವಿರುದ್ಧ ಮತ್ತೊಂದು ಕಠಿಣ ನಿರ್ಧಾರ ಪ್ರಕಟಿಸಿದ್ದಾರೆ.

‘ನಾವುರಷ್ಯಾದ ತೈಲ ಮತ್ತು ಅನಿಲ ಆಮದುಗಳನ್ನು ನಿಷೇಧಿಸುತ್ತಿದ್ದೇವೆ. ಅಮೆರಿಕದ ಬಂದರುಗಳಲ್ಲಿ ರಷ್ಯಾದ ತೈಲವು ಇನ್ನು ಮುಂದೆ ಸ್ವೀಕರಿಸುದಿಲ್ಲ. ಈ ಮೂಲಕ ಅಮೆರಿಕದ ಜನರು ಪುಟಿನ್ ಅವರ ಯುದ್ಧ ಯಂತ್ರಕ್ಕೆ ಮತ್ತೊಂದು ಪ್ರಬಲ ಹೊಡೆತವನ್ನು ನೀಡುತ್ತಾರೆ’ಎಂದು ಅವರು ಹೇಳಿದರು.

‘ರಷ್ಯಾ ಭೀಕರ ದಾಳಿಯನ್ನು ಮುಂದುವರಿಸಬಹುದು. ಆದರೆ, ಉಕ್ರೇನ್‌ನಲ್ಲಿ ಎಂದಿಗೂ ಪುಟಿನ್ ಅವರಿಗೆ ವಿಜಯ ಸಿಗುವುದಿಲ್ಲ. ಉಕ್ರೇನ್‌ನ ನಗರಗಳನ್ನು ಪುಟಿನ್ ವಶಪಡಿಸಿಕೊಳ್ಳಬಹುದು. ಆದರೆ, ಅವರು ಎಂದಿಗೂ ದೇಶವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ’ಎಂದು ಬೈಡನ್ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಆಕ್ರಮಣದ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ದೇಶಗಳು ವಿಧಿಸಲಾಗಿರುವ ನಿರ್ಬಂಧಗಳು ಈಗಾಗಲೇ ರಷ್ಯಾವನ್ನು ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಹಣಕಾಸು ಮಾರುಕಟ್ಟೆಗಳಿಂದ ದೂರ ಇಟ್ಟಿವೆ. ತೈಲ ಮತ್ತು ನೈಸರ್ಗಿಕ ಅನಿಲದ ವಿಶ್ವದ ಅತಿದೊಡ್ಡ ರಫ್ತುದಾರ ರಷ್ಯಾಗೆ ಈವರೆಗೆ ತೈಲ ಮತ್ತು ಇತರ ಇಂಧನ ರಫ್ತುಗಳಿಗೆ ಅಂತರರಾಷ್ಟ್ರೀಯ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿತ್ತು.

ಅಮೆರಿಕವು ರಷ್ಯಾ ತೈಲದ ಪ್ರಮುಖ ಖರೀದಿದಾರ ದೇಶವಲ್ಲ, ಆದರೆ, ರಷ್ಯಾ ತೈಲದ ಮೇಲೆ ಹೆಚ್ಚು ಅವಲಂಬಿತವಾಗಿರುವ ಯುರೋಪಿನ ಮಿತ್ರರಾಷ್ಟ್ರಗಳೊಂದಿಗೆ ನಿಷೇಧ ಹೇರುವ ಕುರಿತು ಬೈಡನ್ ಮಾತುಕತೆ ನಡೆಸುತ್ತಿದ್ದಾರೆ.

2022ರ ಅಂತ್ಯದ ವೇಳೆಗೆ ರಷ್ಯಾದ ತೈಲ ಮತ್ತು ತೈಲೋತ್ಪನ್ನಗಳ ಆಮದನ್ನು ಹಂತ ಹಂತವಾಗಿ ನಿಲ್ಲಿಸುವುದಾಗಿ ಬ್ರಿಟನ್, ಬೈಡನ್ ಅವರ ಹೇಳಿಕೆಗೂ ಸ್ವಲ್ಪ ಸಮಯದ ಮುನ್ನ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.