ADVERTISEMENT

ಚೀನಾ ಕ್ರಮಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು: ಅಮೆರಿಕ ಎಚ್ಚರಿಕೆ

ಹಾಂಗ್‌ಕಾಂಗ್‌ ಮೇಲೆ ರಾಷ್ಟ್ರೀಯ ಭದ್ರತಾ ಕಾನೂನು ಹೇರಿಕೆ

ಪಿಟಿಐ
Published 1 ಜುಲೈ 2020, 8:20 IST
Last Updated 1 ಜುಲೈ 2020, 8:20 IST
ಹಾಂಗ್‌ಕಾಂಗ್‌ನ  ಮೇಲೆ ಚೀನಾ ಹೇರಲು ಮುಂದಾಗಿರುವ ರಾಷ್ಟ್ರೀಯ ಭದ್ರತಾ ಕಾನೂನನ್ನು ವಿರೋಧಿಸಿ ಅಲ್ಲಿನ ಜನರು ಪ್ರತಿಭಟನೆ ನಡೆಸಿದರು. ಜುಲೈ 1, ಬ್ರಿಟನ್‌ ಆಡಳಿತದಿಂದ ಹಾಂಗ್‌ಕಾಂಗ್‌ ಚೀನಾಗೆ ಹಸ್ತಾಂತರಗೊಂಡ ದಿನವಾಗಿದೆ –ರಾಯಿಟರ್ಸ್‌ ಚಿತ್ರ
ಹಾಂಗ್‌ಕಾಂಗ್‌ನ  ಮೇಲೆ ಚೀನಾ ಹೇರಲು ಮುಂದಾಗಿರುವ ರಾಷ್ಟ್ರೀಯ ಭದ್ರತಾ ಕಾನೂನನ್ನು ವಿರೋಧಿಸಿ ಅಲ್ಲಿನ ಜನರು ಪ್ರತಿಭಟನೆ ನಡೆಸಿದರು. ಜುಲೈ 1, ಬ್ರಿಟನ್‌ ಆಡಳಿತದಿಂದ ಹಾಂಗ್‌ಕಾಂಗ್‌ ಚೀನಾಗೆ ಹಸ್ತಾಂತರಗೊಂಡ ದಿನವಾಗಿದೆ –ರಾಯಿಟರ್ಸ್‌ ಚಿತ್ರ   

ವಾಷಿಂಗ್ಟನ್‌: ಹಾಂಗ್‌ಕಾಂಗ್‌ನಲ್ಲಿ ರಾಷ್ಟ್ರೀಯ ಭದ್ರತಾ ಕಾನೂನನ್ನು ಜಾರಿ ಮಾಡಿರುವುದಕ್ಕೆ ಚೀನಾ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ಅಮೆರಿಕವು, ‘ಇದು ಆ ಪ್ರದೇಶದ ಜನರಿಗೆ ಅತ್ಯಂತ ದುಃಖದ ದಿನವಾಗಿದೆ. ಚೀನಾದ ಕ್ರಮಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು’ ಎಂದಿದೆ.

ಹಾಂಗ್‌ಕಾಂಗ್‌ಗಾಗಿ ರೂಪಿಸಿರುವ ಹೊಸ ರಾಷ್ಟ್ರೀಯ ಭದ್ರತಾ ಕಾನೂನಿಗೆ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಮಂಗಳವಾರ ಸಹಿ ಮಾಡಿದ್ದಾರೆ. ಸರ್ಕಾರದ ಜತೆಗೆ ಭಿನ್ನಾಭಿಪ್ರಾಯ ಹೊಂದಿ, ಪ್ರತಿಭಟನೆ ನಡೆಸುವವರ ಮೇಲೆ ದೇಶದ್ರೋಹದ ಆರೋಪ ಹೊರಿಸಿ, ಬಂಧಿಸಲು ಸಾಧ್ಯವಾಗುವಂತೆ ಈ ಕಾನೂನನ್ನು ರೂಪಿಸಲಾಗಿದೆ. ಈ ಕಾನೂನಿಗೆ ಜಾಗತಿಕ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದ್ದರೂ ಚೀನಾ ಅದನ್ನು ಲೆಕ್ಕಿಸದೆ ಜಾರಿ ಮಾಡಿದೆ.

ಚೀನಾದ ಈ ಕ್ರಮವನ್ನು ಖಂಡಿಸಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ, ‘ಕಠಿಣ ಕಾನೂನನ್ನು ಹೇರುವ ಚೀನಾದ ಕಮ್ಯುನಿಸ್ಟ್‌ ಪಕ್ಷದ (ಸಿಸಿಪಿ) ತೀರ್ಮಾನವು ಆ ಪ್ರದೇಶದ ಜನರ ಸ್ವಾಯತ್ತತೆಯನ್ನು ನಾಶಪಡಿಸುವಂಥದ್ದಾಗಿದೆ. ಚೀನೀಯರು ಏನೇನು ಮಾಡಬಲ್ಲರು ಎಂಬುದನ್ನು ವಿಶ್ವದ ಅತ್ಯಂತ ಯಶಸ್ವಿ ಆರ್ಥಿಕತೆ ಮತ್ತು ಚೈತನ್ಯಶೀಲ ಸಮಾಜಗಳಲ್ಲಿ ಒಂದೆನಿಸಿರುವ ಹಾಂಗ್‌ಕಾಂಗ್‌, ಜಗತ್ತಿಗೆ ತಿಳಿಸಿಕೊಟ್ಟಿದೆ. ಕಠಿಣ ಕಾನೂನಿನಿಂದ ಚೀನಾದ ಈ ಸಾಧನೆಯೂ ನಾಶವಾಗಲಿದೆ’ ಎಂದಿದ್ದಾರೆ.

ADVERTISEMENT

‘ಹಾಂಗ್‌ಕಾಂಗ್‌ನಲ್ಲಿ ಬ್ರಿಟಿಷ್‌ ಆಡಳಿತ ಅಂತ್ಯಗೊಂಡಾಗ (1997) ರೂಪಿಸಿದ್ದ ಮೂಲ ಕಾನೂನಿನಲ್ಲಿ, ಪ್ರತಿಭಟಿಸುವ ಹಕ್ಕು, ವಾಕ್ ಸ್ವಾತಂತ್ರ್ಯ, ನ್ಯಾಯಾಂಗದ ಸ್ವಾತಂತ್ರ್ಯ ಹಾಗೂ ನಾಗರಿಕ ಸ್ವಾತಂತ್ರ್ಯಗಳನ್ನು ಪ್ರತಿಪಾದಿಸಲಾಗಿತ್ತು. ಆದರೆ ವ್ಯಾಮೋಹ ಮತ್ತು ತನ್ನದೇ ಜನರ ಮೇಲಿನ ಚೀನಾದ ಅಪನಂಬಿಕೆಯು ಆ ದೇಶದ ಬುನಾದಿಯನ್ನೇ ಅಲುಗಾಡಿಸಿದೆ. ಸ್ವಾತಂತ್ರ್ಯ ಬಯಸುವ ಹಾಂಗ್‌ಕಾಂಗ್‌ನ ಜನರಿಗೆ ಅಮೆರಿಕದ ಬೆಂಬಲ ಮುಂದುವರಿಯಲಿದೆ. ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಚೀನಾದ ಆಕ್ರಮಣಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದೆ’ ಎಂದು ಅವರು ಹೇಳಿದ್ದಾರೆ.

‘ಹಾಂಗ್‌ಕಾಂಗ್‌ನ ಜನರಿಗೆ 50 ವರ್ಷ ಸ್ವಾತಂತ್ರ್ಯವನ್ನು ಕೊಡುವುದಾಗಿ ಸಿಸಿಪಿ ಭರವಸೆ ನೀಡಿತ್ತು. ಆದರೆ 23 ವರ್ಷಗಳಲ್ಲಿ ಅದನ್ನು ಕೊನೆಗೊಳಿಸುತ್ತಿದೆ. ವಿಶ್ವ ವಾಣಿಜ್ಯ ಸಂಸ್ಥೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳ ಜತೆ ಮಾಡಿಕೊಂಡಿದ್ದ ಒಪ್ಪಂದವನ್ನೂ ಕಳೆದ ಕೆಲವು ವರ್ಷಗಳಿಂದ ಚೀನಾ ಉಲ್ಲಂಘಿಸುತ್ತಿದೆ. ಇಂಥ ನಡೆಯನ್ನು ನಿರ್ಲಕ್ಷಿಸಲಾಗದು. ಸರ್ವಾಧಿಕಾರಿ ನಡೆಯಿಂದ ಹಾಂಗ್‌ಕಾಂಗ್‌ ಅನ್ನು ಚೀನಾ ನುಂಗುತ್ತಿದ್ದರೂ ಸುಮ್ಮನೆ ಕುಳಿತಿರಲು ಅಮೆರಿಕಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

‘ಕಳೆದ ವಾರ ನಾವು ಚೀನಾದ ಕೆಲವು ಅಧಿಕಾರಿಗಳಿಗೆ ವೀಸಾ ನಿರ್ಬಂಧ ವಿಧಿಸಿದ್ದೆವು. ಈಗ ಅಧ್ಯಕ್ಷ ಟ್ರಂಪ್‌ ಅವರ ಸೂಚನೆಯ ಮೇರೆಗೆ ರಕ್ಷಣೆ ಹಾಗೂ ಉಭಯ ಬಳಕೆಯ ತಂತ್ರಜ್ಞಾನ ರಫ್ತಿನ ಮೇಲೆ ನಿಷೇಧ ಹೇರುತ್ತಿದ್ದೇವೆ. ಹಾಂಗ್‌ಕಾಂಗ್‌ ಅನ್ನು ಪ್ರತ್ಯೇಕ ಮತ್ತು ವಿಶೇಷವಾಗಿ ಪರಿಗಣಿಸಲು ಸಾಧ್ಯವಾಗುವಂಥ ನೀತಿಯನ್ನು ಶೀಘ್ರದಲ್ಲೇ ರೂಪಿಸಲಾಗುವುದು’ ಎಂದು ಪಾಂಪಿಯೊ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.