ಮಾಸ್ಕೊ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಅಮೆರಿಕದ ಸಶಸ್ತ್ರ ನೇರ ಹಸ್ತಕ್ಷೇಪವು ಜಾಗತಿಕ ಪ್ರಕ್ಷುಬ್ಧತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಹಲವು ದೇಶಗಳು ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಉತ್ಪಾದಿಸಲು ಯೋಚಿಸುತ್ತವೆ ಎಂದು ರಷ್ಯಾದ ಹಿರಿಯ ಸಂಸದರೊಬ್ಬರು ಭಾನುವಾರ ಹೇಳಿದ್ದಾರೆ.
ಇರಾನ್ ಮೇಲೆ ಅಮೆರಿಕ ದಾಳಿಯಿಂದ ಜಾಗತಿಕವಾಗಿ ಸಂಘರ್ಷದ ಉಲ್ಬಣದತ್ತ ಮತ್ತೊಂದು ಮೆಟ್ಟಿಲು ಏರಿದಂತಾಗಿದೆ. ಅಮೆರಿಕದ ಈ ಹಸ್ತಕ್ಷೇಪವು ಬಹಿರಂಗವಾಗಿ ಗುಂಪುಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದು ರಷ್ಯಾದ ಫೆಡರೇಶನ್ ಕೌನ್ಸಿಲ್‌ನ (ಮೇಲ್ಮನೆ) ಅಂತರರಾಷ್ಟ್ರೀಯ ವ್ಯವಹಾರಗಳ ಸಮಿತಿಯ ಉಪಾಧ್ಯಕ್ಷ ಆ್ಯಂಡ್ರೆ ಕ್ಲಿಮೋವ್ ಹೇಳಿದ್ದಾರೆ.
ಹಲವು ದೇಶಗಳು ತಮ್ಮದೇ ಆದ ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಉತ್ಪಾದಿಸಲುಸಲು ಪ್ರಾರಂಭಿಸಬೇಕೇ ಎಂಬ ಬಗ್ಗೆ ಯೋಚಿಸುತ್ತವೆ. ನಂತರ, ಜಗತ್ತನ್ನು ಶಾಂತ ಸ್ಥಿತಿಗೆ ತರಲು ಬೃಹತ್ ಪ್ರಯತ್ನಗಳು ಬೇಕಾಗುತ್ತವೆ ಎಂದು ಅವರು ಸರ್ಕಾರಿ ಸುದ್ದಿ ಸಂಸ್ಥೆ ಟಾಸ್‌ಗೆ ತಿಳಿಸಿದ್ದಾರೆ.
ಇರಾನ್‌ನ ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕದ ಬಾಂಬ್ ದಾಳಿಗೆ ಕ್ರೆಮ್ಲಿನ್ ಅಥವಾ ರಷ್ಯಾದ ವಿದೇಶಾಂಗ ಸಚಿವಾಲಯ ಇನ್ನೂ ಪ್ರತಿಕ್ರಿಯಿಸಿಲ್ಲ.
ಇರಾನ್‌ನ ಪರಮಾಣು ಯೋಜನೆಯನ್ನು ನಾಶಮಾಡುವ ಗುರಿಯೊಂದಿಗೆ ಭಾನುವಾರ ಬೆಳಗಿನ ಜಾವ ಅಮೆರಿಕವು ಇರಾನ್‌ನ ಫೋರ್ಡೊ, ಇಸ್ಫಹಾನ್ ಮತ್ತು ನಟಾಂಜ್ ಪರಮಾಣು ತಾಣಗಳ ಮೇಲೆ ದಾಳಿ ಮಾಡಿತ್ತು.
ಇರಾನ್ ಪ್ರತೀಕಾರಕ್ಕೆ ಮುಂದಾದರೆ ಹೆಚ್ಚುವರಿ ದಾಳಿಗಳನ್ನು ನಡೆಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.