ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಪಿಟಿಐ ಚಿತ್ರ
ವಾಷಿಂಗ್ಟನ್: ಬ್ರೆಜಿಲ್‌ನಿಂದ ಆಮದಾಗುವ ವಸ್ತುಗಳ ಮೇಲೆ ಶೇ 50ರಷ್ಟು ಸುಂಕ ಘೋಷಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆತ್ಮೀಯ ಸ್ನೇಹಿತ ಮತ್ತು ಬ್ರೆಜಿಲ್ ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬೊಲ್ಸೊನಾರ ಅವರು ನ್ಯಾಯಾಂಗ ವಿಚಾರಣೆ ಎದುರಿಸುತ್ತಿದ್ದಾರೆ.
‘ಆಗಸ್ಟ್ 1ರಿಂದಲೇ ಶೇ 50ರಷ್ಟು ಸುಂಕ ಜಾರಿಯಾಗಲಿದೆ. ಬ್ರೆಜಿಲ್‌ನ ಅನ್ಯಾಯದ ವ್ಯಾಪಾರ ನೀತಿ ಬಗ್ಗೆಯೂ ತನಿಖೆ ಆರಂಭಿಸಿದ್ದು, ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮ್ಸ್ ಗ್ರೀರ್ ಅವರಿಗೆ ನಿರ್ದೇಶನ ನೀಡಲಾಗಿದೆ’ ಎಂದು ಟ್ರಂಪ್ ಪತ್ರದಲ್ಲಿ ತಿಳಿಸಿದ್ದಾರೆ.
ಚೀನಾ ನಂತರ ಅಮೆರಿಕ ಬ್ರೆಜಿಲ್‌ನ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಸುಂಕ ಘೋಷಣೆಯಾಗುತ್ತಿದ್ದಂತೆ ಬ್ರೆಜಿಲ್‌ನ ಕರೆನ್ಸಿ ಮೌಲ್ಯದಲ್ಲಿ ಶೇ 2ರಷ್ಟು ಕುಸಿತ ಕಂಡಿದೆ ಎಂದು ವರದಿಯಾಗಿದೆ.
ಟ್ರಂಪ್ ವಿರುದ್ಧ ಲುಲ ಬಹಿರಂಗ ಟೀಕೆ
ಇತ್ತೀಚೆಗೆ ಟ್ರಂಪ್ ಸುಂಕ ನೀತಿಯನ್ನು ಬಹಿರಂಗವಾಗಿ ಖಂಡಿಸಿದ್ದ ಬ್ರೆಜಿಲ್ ಅಧ್ಯಕ್ಷ ಲುಯಿಸ್ ಇನಾಸಿಯೊ ಲುಲ ಡ ಸಿಲ್ವ, ಜಗತ್ತಿಗೆ ಚಕ್ರವರ್ತಿಯ ಅಗತ್ಯವಿಲ್ಲ ಎಂದು ಹೇಳಿದ್ದರು.
‘ನಮ್ಮದು ಸಾರ್ವಭೌಮ ರಾಷ್ಟವಾಗಿದೆ. ಅವರು(ಅಮೆರಿಕ) ಸುಂಕ ವಿಧಿಸಿದರೆ ಅದಕ್ಕೆ ಅನುಗುಣವಾಗಿ ಇತರ ದೇಶಗಳೂ ಸುಂಕ ವಿಧಿಸುವ ಹಕ್ಕನ್ನು ಹೊಂದಿವೆ’ ಎಂದು ಪ್ರತಿಪಾದಿಸಿದ್ದರು.
ಬ್ರಿಕ್ಸ್‌ನ ಅಮೆರಿಕ ವಿರೋಧಿ ನೀತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ರಾಷ್ಟ್ರಗಳಿಗೆ ಹೆಚ್ಚುವರಿಯಾಗಿ ಶೇ 10ರಷ್ಟು ಸುಂಕ ವಿಧಿಸುವ ಟ್ರಂಪ್ ಆಡಳಿತದ ನಿರ್ಧಾರವನ್ನು ಲುಲ ಕಟುವಾಗಿ ಟೀಕಿಸಿದ್ದರು.
ಬೊಲ್ಸೊನಾರೊ ವಿಚಾರಣೆ ಕೈಬಿಡಿ: ಟ್ರಂಪ್
ನ್ಯಾಯಾಂಗ ವಿಚಾರಣೆ ಎದುರಿಸುತ್ತಿರುವ ಬೊಲ್ಸೊನಾರೊ ಪರ ದನಿ ಎತ್ತಿರುವ ಟ್ರಂಪ್, ಬೋಲ್ಸನಾರೊ ವಿರುದ್ಧದ ತನಿಖೆಯನ್ನು ಕೈಬಿಡುವಂತೆ ಹೇಳಿದ್ದಾರೆ.
ಆರೋಪಕ್ಕೆ ಸಂಬಂಧಪಟ್ಟಂತೆ ಜೂನ್‌ನಲ್ಲಿ ಬೊಲ್ಸೊನಾರೊ ವಿಚಾರಣೆ ನಡೆದಿದ್ದು, ಇತರ 26 ಜನರ ವಿಚಾರಣೆ ನಡೆಯಬೇಕಿದೆ. ಸೆಪ್ಟೆಂಬರ್ ವೇಳೆ ತೀರ್ಪು ಹೊರಬರುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ.
ಏತನ್ಮಧ್ಯೆ, ಬೊಲ್ಸೊನಾರೊ ಅವರನ್ನು 2030 ರವರೆಗೆ ಚುನಾವಣಾ ಪ್ರಕ್ರಿಯೆಯಿಂದ ಹೊರಗಿಟ್ಟು ಬ್ರೆಜಿಲ್ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಬಲಪಂಥೀಯ ಪ್ರತಿಪಾದಕ ಬೊಲ್ಸೊನಾರೊ ಸೋತಿದ್ದರು. ಎಡಪಂಥೀಯ ಒಲವಿರುವ ಲುಯಿಸ್ ಇನಾಸಿಯೊ ಲುಲ ಡ ಸಿಲ್ವ ಗೆಲುವು ಸಾಧಿಸಿದ್ದರು. ಆದರೆ, ಸೋಲನ್ನು ಒಪ್ಪಿಕೊಳ್ಳದ ಬೊಲ್ಸೊನಾರೊ ಬೆಂಬಲಿಗರು ಬ್ರೆಜಿಲ್‌ನ ಸಂಸತ್ತು, ಸುಪ್ರೀಂ ಕೋರ್ಟ್ ಮತ್ತು ಅಧ್ಯಕ್ಷರ ಅರಮನೆಗೆ ನುಗ್ಗಿ ದಾಂದಲೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.