ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ವಾಷಿಂಗ್ಟನ್: ಮುಂದಿನ ತಿಂಗಳು ಕೆನಡಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇಕಡ 35ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಅಲ್ಲದೆ ಇತರೆ ಪಾಲುದಾರರ ಮೇಲೂ ಶೇಕಡ 15ರಿಂದ 20ರಷ್ಟು ಸುಂಕು ವಿಧಿಸಲು ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲರಿಗೂ ಆದೇಶ ಪತ್ರವನ್ನು ಕಳುಹಿಸಿಲ್ಲ. ನಾವು ಸುಂಕಗಳನ್ನು ನಿಗದಿಪಡಿಸುತ್ತಿದ್ದೇವೆ ಎಂದು 'ಎನ್‌ಬಿಸಿ ನ್ಯೂಸ್'ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕೆನಡಾದ ಮೇಲೆ ಸುಂಕ ಹೇರಿಕೆ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಆದೇಶ ಪತ್ರ ಪ್ರಕಟಿಸಿರುವ ಟ್ರಂಪ್, ಆಗಸ್ಟ್ 1ರಿಂದಲೇ ನೂತನ ಸುಂಕ ಜಾರಿಯಾಗಲಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ಕೆನಡಾ ಪ್ರತಿ ಸುಂಕ ವಿಧಿಸಿದರೆ ಅದಕ್ಕೆ ತಕ್ಕಂತೆ ಸುಂಕ ಏರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಇತ್ತೀಚೆಗಷ್ಟೇ ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ 14 ರಾಷ್ಟ್ರಗಳ ಮೇಲೆ ಸಂಕು ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದರು. ಈ ಮೊದಲು ವಿವಿಧ ದೇಶಗಳ ಮೇಲೆ ಪ್ರತಿಸುಂಕ ವಿಧಿಸುವುದನ್ನು ಅಮಾನತಿನಲ್ಲಿ ಇರಿಸಿದ ಕ್ರಮವನ್ನು ಆಗಸ್ಟ್ 1ರವರೆಗೆ ವಿಸ್ತರಿಸಲಾಗಿತ್ತು. ಅದಾದ ಬಳಿಕ ಒಂದರ ಮೇಲೆ ಒಂದರಂತೆ ವಿವಿಧ ದೇಶಗಳ ಮೇಲಿನ ಸುಂಕ ಹೇರಿಕೆ ಸಂಬಂಧ ಆದೇಶ ಪತ್ರಗಳನ್ನು ಬಿಡುಗಡೆಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.