ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ‘ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದಕ್ಕಾಗಿ ಭಾರತದ ಉತ್ಪನ್ನಗಳ ಮೇಲೆ ಶೇ 50ರಷ್ಟು ಸುಂಕ ಹೇರಿದ ಪರಿಣಾಮ ಮಾಸ್ಕೊ ಮಾತುಕತೆಗೆ ಮುಂದಾಗಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆ ಇಂದು (ಶುಕ್ರವಾರ) ಅಲಸ್ಕಾದಲ್ಲಿ ನಡೆಯಲಿರುವ ಉನ್ನತ ಮಟ್ಟದ ಮಾತುಕತೆಗೂ ಮುನ್ನ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಫಾಕ್ಸ್ ನ್ಯೂಸ್‌ಗೆ ಸಂದರ್ಶನ ನೀಡಿರುವ ಅವರು, ‘ಪ್ರತಿಯೊಂದು ಕ್ರಮವೂ ಪರಿಣಾಮ ಬೀರುತ್ತದೆ. ರಷ್ಯಾದಿಂದ ತೈಲ ಖರೀದಿಸುತ್ತಿರುವ ನಿಮ್ಮ ಮೇಲೆ ಸುಂಕ ಹೇರುತ್ತೇವೆ ಎಂದು ಭಾರತಕ್ಕೆ ಮೊದಲೇ ಎಚ್ಚರಿಕೆ ನೀಡಲಾಗಿತತು. ರಷ್ಯಾದೊಂದಿಗಿನ ತೈಲ ವ್ಯವಹಾರದಿಂದ ಭಾರತವನ್ನು ಹೊರಗಿಡುವುದು ಅತಿ ಮುಖ್ಯವಾಗಿದೆ’ ಎಂದಿದ್ದಾರೆ.
‘ಸುಂಕ ಹೇರಿದ ನಂತರ ರಷ್ಯಾ ಕರೆ ಮಾಡಿ, ಭೇಟಿಗೆ ಅವಕಾಶ ಕೇಳಿತು. ಸಭೆ ಎಂದರೇನು ಎಂಬುದನ್ನು ಹೋಗಿ ನೋಡುತ್ತೇವೆ. 2ನೇ ಅತಿ ದೊಡ್ಡ ಗ್ರಾಹಕರನ್ನು (ಭಾರತ) ಕಳೆದುಕೊಳ್ಳುತ್ತಿರುವಾಗ, ಮೊದಲೇ ಅತಿ ದೊಡ್ಡ ಗ್ರಾಹಕರನ್ನೂ (ಚೀನಾ) ನೀವು (ರಷ್ಯಾ) ಕಳೆದುಕೊಳ್ಳುತ್ತೀರಿ. ಆದರೆ ಆ ಮೊದಲನೆಯವರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.
ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವುದಿಲ್ಲ ಎಂದು ಭಾರತವು ಗುರುವಾರ ಸ್ಪಷ್ಟಪಡಿಸಿತ್ತು. ಭಾರತದ ಉತ್ಪನ್ನಗಳಿಗೆ ಮೊದಲು ಶೇ 25ರಷ್ಟು ಸುಂಕ ಹೇರಿದ್ದ ಅಮೆರಿಕ, ರಷ್ಯಾದಿಂದ ತೈಲ ಖರೀದಿ ನಿಲ್ಲಿಸದ ಕಾರಣ ಹೆಚ್ಚುವರಿ ಶೇ 25ರಷ್ಟು ಸುಂಕ ಹೇರಿತ್ತು. ಇವು ಆ. 27ರಿಂದ ಅನುಷ್ಠಾನಗೊಳ್ಳಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.