ಪಿಯೂಷ್ ಗೋಯಲ್
(ಪಿಟಿಐ ಚಿತ್ರ)
ನವದೆಹಲಿ: ಅಮೆರಿಕದೊಂದಿಗಿನ ಬಹುನಿರೀಕ್ಷಿತ ವ್ಯಾಪಾರ ಒಪ್ಪಂದ ಮಾತುಕತೆಯಲ್ಲಿ ಗಮನಾರ್ಹ ಪ್ರಗತಿ ಕಂಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಭಾರತಕ್ಕೆ ವಿಶೇಷ ಆದ್ಯತೆ ಸಿಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಬ್ರಿಟನ್ ಭೇಟಿಯ ಸಂದರ್ಭದಲ್ಲಿ ಲಂಡನ್‌ನಲ್ಲಿ ಈ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೋಯಲ್, ಅಮೆರಿಕದ ಗಡುವಿನ ಹೊರತಾಗಿಯೂ ಸದ್ಯದಲ್ಲೇ ವ್ಯಾಪಾರ ಒಪ್ಪಂದ ಏರ್ಪಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಮೆರಿಕದೊಂದಿಗೆ ನಾವು ಅದ್ಭುತ ಪ್ರಗತಿ ಸಾಧಿಸಿದ್ದೇವೆ. ಅಲ್ಲದೆ ಶೀಘ್ರದಲ್ಲೇ ಒಪ್ಪಂದ ಅಂತಿಮಗೊಳಿಸುವ ನಿರೀಕ್ಷೆಯಲ್ಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಭಿನ್ನಾಭಿಪ್ರಾಯದ ಕುರಿತು ಕೇಳಿದಾಗ, ಆ ಬಗೆಗಿನ ಚರ್ಚೆಗಳು ಮಾತುಕತೆ ಕೊಠಡಿಯಲ್ಲೇ ನಡೆಯಲಿವೆ ಎಂದಷ್ಟೇ ತಿಳಿಸಿದ್ದಾರೆ.
ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇ 26ರಷ್ಟು ತೆರಿಗೆ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡಿದ್ದರು. ಆದರೆ ಮಾತುಕತೆ ನಡೆಯುವುದಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ತೆರಿಗೆ ವಿಧಿಸುವುದನ್ನು ಆಗಸ್ಟ್ 1ರವರೆಗೆ ಮುಂದೂಡಿದ್ದರು.
ಆದರೆ ಕೃಷಿ ಹಾಗೂ ಹೈನುಗಾರಿಕೆ ಉತ್ಪನ್ನಗಳಿಗೆ ವಿಧಿಸುವ ತೆರಿಗೆಯ ವಿಚಾರದಲ್ಲಿ ಮಾತುಕತೆ ಪೂರ್ಣಗೊಳ್ಳದ ಪರಿಣಾಮ ಹಿನ್ನೆಡೆಯಾಗಿದೆ. ಒಂದು ವೇಳೆ ಮಾತುಕತೆ ಪೂರ್ಣಗೊಂಡು ಮಧ್ಯಂತರ ಒಪ್ಪಂದ ಏರ್ಪಡದೆ ಇದ್ದರೆ ಆಗಸ್ಟ್ 1ರ ನಂತರ ತೆರಿಗೆ ಕ್ರಮಗಳು ಜಾರಿಗೆ ಬರುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.