ADVERTISEMENT

ಹವಾಮಾನ ಒಪ್ಪಂದ ಸೇರಿ 66 ಅಂತರರಾಷ್ಟ್ರೀಯ ಒಡಂಬಡಿಕೆಗಳಿಂದ ಹೊರನಡೆದ ಅಮೆರಿಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜನವರಿ 2026, 2:52 IST
Last Updated 8 ಜನವರಿ 2026, 2:52 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

ವಾಷಿಂಗ್ಟನ್: ಪ್ರಮುಖ ಹವಾಮಾನ ಒಪ್ಪಂದ, ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣ ಪ್ರಚಾರ ಮಾಡುವ ಸಂಸ್ಥೆ ಸೇರಿ ವಿಶ್ವಸಂಸ್ಥೆ ಹಾಗೂ ಅಂತರಾಷ್ಟ್ರೀಯ ಹಲವು ಸಂಘಟನೆ/ ಒಪ್ಪಂದಗಳಿಂದ ಹೊರ ನಡೆಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಅವುಗಳು ಕಾರ್ಯನಿರ್ವಹಿಸುವುದರಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಶ್ವೇತಭವನದ ವೆಬ್‌ಸೈಟ್ ಮಾಹಿತಿ ನೀಡಿದೆ.

ADVERTISEMENT

ವಿಶ್ವಸಂಸ್ಥೆಯ 31 ಹಾಗೂ ಇತರೆ 35 ಸೇರಿ ಒಟ್ಟು 66 ಸಂಘಟನೆಗಳಿಂದ ಅಮೆರಿಕ ಹೊರಬರಲಿದೆ.

ಹಿರಿಯ ಆಡಳಿತ ಅಧಿಕಾರಿಗಳಿಗೆ ಸಲ್ಲಿಸಿದ ಟ್ರಂಪ್ ಜ್ಞಾಪಕ ಪತ್ರದಲ್ಲಿ ಪಟ್ಟಿ ಮಾಡಿರುವ 35 ವಿಶ್ವಸಂಸ್ಥೆಯೇತರ ಗುಂಪುಗಳು ಮತ್ತು 31 ವಿಶ್ವಸಂಸ್ಥೆಯ ಘಟಕಗಳಲ್ಲಿ ಹವಾಮಾನ ಬದಲಾವಣೆಯ ಕುರಿತಾದ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶವೂ ಸೇರಿದೆ. ಇದು 2015ರ ಪ್ಯಾರಿಸ್ ಹವಾಮಾನ ಒಪ್ಪಂದದ ಭಾಗವಾಗಿದೆ.

ಕಳೆದ ವರ್ಷ ನಡೆದ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಹವಾಮಾನ ಸಮಾವೇಶಕ್ಕೆ ಅಮೆರಿಕ ಗೈರಾಗಿತ್ತು. ಅಮೆರಿಕ ಗೈರಾಗಿದ್ದು ಮೂರು ದಶಕದಲ್ಲಿ ಅದೇ ಮೊದಲು.

ಮಹಿಳಾ ಸಬಲೀಕರಣಕ್ಕಾಗಿ ಇರುವ ‘ವಿಶ್ವಸಂಸ್ಥೆ–ಮಹಿಳೆ’ ಹಾಗೂ 150ಕ್ಕೂ ಹೆಚ್ಚು ದೇಶಗಳಲ್ಲಿ ಕುಟುಂಬ ಯೋಜನೆ, ತಾಯಿ ಮತ್ತು ಮಗುವಿನ ಆರೋಗ್ಯಕ್ಕಾಗಿ ಕೆಲಸ ಮಾಡುವ ವಿಶ್ವಸಂಸ್ಥೆ ಜನಸಂಖ್ಯೆ ನಿಧಿಯಿಂದ (ಯುಎನ್‌ಎಫ್‌ಪಿಎ) ಹೊರನಡೆದಿದೆ. ಕೆಳೆದ ವರ್ಷ ಇದಕ್ಕೆ ನೀಡುತ್ತಿದ್ದ ದೇಣಿಗೆಯನ್ನು ಅಮೆರಿಕ ಕಡಿತಗೊಳಿಸಿತ್ತು.

ವ್ಯಾಪಾರ ಮತ್ತು ಅಭಿವೃದ್ಧಿ ಕುರಿತ ವಿಶ್ವಸಂಸ್ಥೆಯ ಸಮ್ಮೇಳನ, ಅಂತರರಾಷ್ಟ್ರೀಯ ಇಂಧನ ವೇದಿಕೆ, ವಿಶ್ವಸಂಸ್ಥೆಯ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ನೋಂದಣಿ ಮತ್ತು ವಿಶ್ವಸಂಸ್ಥೆಯ ಶಾಂತಿ ನಿರ್ಮಾಣ ಆಯೋಗದಿಂದಲೂ ಅಮೆರಿಕ ಹೊರಬಲಿದೆ.

ತೀವ್ರಗಾಮಿ ಹವಾಮಾನ ನೀತಿಗಳು, ಜಾಗತಿಕ ಆಡಳಿತ ಮತ್ತು ಅಮೆರಿಕದ ಸಾರ್ವಭೌಮತ್ವ ಹಾಗೂ ಆರ್ಥಿಕ ಬಲಕ್ಕೆ ವಿರುದ್ಧವಾದ ಸೈದ್ಧಾಂತಿಕ ಕಾರ್ಯಕ್ರಮಗಳು ಒಳಗೊಂಡಿರುವುದರಿಂದ ಅವುಗಳಿಂದ ಹೊರನಡೆಯುವುದಾಗಿ ಶ್ವೇತಭವನ ಹೇಳಿದೆ.

ಈ ಕ್ರಮವು ಎಲ್ಲಾ ಅಂತರರಾಷ್ಟ್ರೀಯ ಅಂತರ ಸರ್ಕಾರಿ ಸಂಸ್ಥೆಗಳು, ಸಮಾವೇಶಗಳು ಮತ್ತು ಒಪ್ಪಂದಗಳ ಪರಿಶೀಲನೆಯ ಭಾಗವಾಗಿದೆ ಎಂದು ಅದು ಹೇಳಿದೆ.

(ಮೂಲ: ಶ್ವೇತಭವನ ವೆಬ್‌ಸೈಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.