ಡೊನಾಲ್ಡ್ ಟ್ರಂಪ್
ವಿಶ್ವಸಂಸ್ಥೆ/ವಾಷಿಂಗ್ಟನ್: ‘ವಿಶ್ವಸಂಸ್ಥೆಗೆ ಸೇರಿದ ವಿವಿಧ ಅಂಗಸಂಸ್ಥೆಗಳು, ಭಾರತ–ಫ್ರಾನ್ಸ್ ನೇತೃತ್ವದಲ್ಲಿರುವ ಅಂತರರಾಷ್ಟ್ರೀಯ ಸೌರ ಒಕ್ಕೂಟ ಸೇರಿದಂತೆ 60 ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಅಮೆರಿಕ ಹೊರನಡೆದಿದೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
‘ಈ ಸಂಸ್ಥೆಗಳು ‘ಅನಗತ್ಯ’ವಾಗಿದ್ದು, ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗಿವೆ’ ಎಂದು ಅವರು ಹೇಳಿದ್ದಾರೆ.
‘ದೇಶದ ಹಿತಾಸಕ್ತಿಗೆ ವಿರುದ್ಧವಾದ ಅಂತರರಾಷ್ಟ್ರೀಯ ಸಂಸ್ಥೆಗಳು, ಒಡಂಬಡಿಕೆಗಳು ಹಾಗೂ ಒಪ್ಪಂದಗಳಿಂದ ಅಮೆರಿಕವು ಹಿಂದೆ ಸರಿದಿದೆ’ ಎಂಬ ಜ್ಞಾಪನಾಪತ್ರಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಸಹಿ ಹಾಕಿದ್ದಾರೆ.
ಆದೇಶಕ್ಕೆ ಸಹಿ ಹಾಕಿದ ನಂತರ ಮಾತನಾಡಿದ ಟ್ರಂಪ್, ‘ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು ಹಾಗೂ ವಿಶ್ವಸಂಸ್ಥೆಯೇತರ ಸಂಸ್ಥೆಗಳಲ್ಲಿ ಸದಸ್ಯರಾಗಿ ಉಳಿಯುವುದು ಹಾಗೂ ಬೆಂಬಲ ವ್ಯಕ್ತಪಡಿಸುವುದು ದೇಶದ ಹಿತಾಸಕ್ತಿಗೆ ವಿರುದ್ಧವಾದುದು’ ಎಂದು ತಿಳಿಸಿದ್ದಾರೆ.
‘ವಿಶ್ವಸಂಸ್ಥೆಯ 31 ಸಂಸ್ಥೆಗಳು, ವಿಶ್ವಸಂಸ್ಥೆಯೇತರ 35 ಸಂಸ್ಥೆಗಳು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿ, ಭದ್ರತೆ, ಆರ್ಥಿಕ ಸಮೃದ್ಧಿ ಹಾಗೂ ಸಾರ್ವಭೌಮತೆಗೆ ವಿರುದ್ಧವಾಗಿ ಕೆಲಸ ಮಾಡುತ್ತಿವೆ’ ಎಂದು ಶ್ವೇತಭವನವು ಬಿಡುಗಡೆಗೊಳಿಸಿದ ಮಾಹಿತಿಪತ್ರದಲ್ಲಿ ತಿಳಿಸಿದೆ. ಸಾಧ್ಯವಾದಷ್ಟು ಬೇಗ ಈ ಸಂಸ್ಥೆಗಳಿಂದ ಅಮೆರಿಕವು ಹೊರಬರುವುದಕ್ಕಾಗಿ ದೇಶದ ಎಲ್ಲಾ ಸಂಸ್ಥೆಗಳು ತಕ್ಷಣವೇ ಕ್ರಮ ಕ್ರಮ ಕೈಗೊಳ್ಳಬೇಕು ಎಂದು ಟ್ರಂಪ್ ಅವರು ಕಾರ್ಯಕಾರಿ ಆದೇಶದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಶ್ವಸಂಸ್ಥೆಯ ಎಲ್ಲಾ ಅಂಗಸಂಸ್ಥೆಗಳಿಂದ ಹಿಂದೆ ಸರಿಯುವುದೆಂದರೆ, ಅನುದಾನ ಸ್ಥಗಿತ ಹಾಗೂ ಭಾಗವಹಿಸುವುದನ್ನು ನಿಲ್ಲಿಸಲಾಗುತ್ತದೆ ಎಂದೂ ಅರ್ಥ ಎಂದು ಟ್ರಂಪ್ ತಿಳಿಸಿದ್ದಾರೆ.
ಹಿಂದೆ ಸರಿದ ಪ್ರಮುಖ ಸಂಸ್ಥೆಗಳು: ಜಾಗತಿಕ ತಾಪಮಾನ ನಿಯಂತ್ರಣದ ದಿಸೆಯಲ್ಲಿ ಕೆಲಸ ಮಾಡಲು ಭಾರತ ಹಾಗೂ ಫ್ರಾನ್ಸ್ ಸಹಕಾರದಲ್ಲಿ ಸ್ಥಾಪನೆಯಾಗಿರುವ ‘ಅಂತರರಾಷ್ಟ್ರೀಯ ಸೌರಶಕ್ತಿ ಒಕ್ಕೂಟ’ವು ಅಮೆರಿಕ ಹೊರ ಬರುವ ಸಂಸ್ಥೆಗಳ ಪಟ್ಟಿಯಲ್ಲಿ ಇದೆ. ಇದರಲ್ಲಿ 100 ರಾಷ್ಟ್ರಗಳು ಸದಸ್ಯತ್ವ ಹೊಂದಿದ್ದು, 90 ದೇಶಗಳು ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಲು ಆಸಕ್ತಿ ವ್ಯಕ್ತಪಡಿಸಿವೆ.
ಉಳಿದಂತೆ, ಉಕ್ರೇನ್‌ನಲ್ಲಿರುವ ವಿಜ್ಞಾನ– ತಂತ್ರಜ್ಞಾನ ಕೇಂದ್ರ, ಜಾಗತಿಕ ತಾಪಮಾನ ಬದಲಾವಣೆಯ ಅಂತರರಾಷ್ಟ್ರೀಯ ಸಮಿತಿ, ವಿಶ್ವಸಂಸ್ಥೆಯ ಆರ್ಥಿಕ–ಸಾಮಾಜಿಕ ವ್ಯವಹಾರಗಳ ಸಮಿತಿ, ಆಫ್ರಿಕಾದ ಆರ್ಥಿಕ ಆಯೋಗ, ಶಾಂತಿ ನಿರ್ಮಾಣ ಆಯೋಗ, ಶಾಂತಿ ಸ್ಥಾಪನೆ ನಿಧಿ, ವಿಶ್ವಸಂಸ್ಥೆ ವ್ಯವಹಾರ ಹಾಗೂ ಅಭಿವೃದ್ಧಿ, ವಿಶ್ವಸಂಸ್ಥೆಯ ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣ ಸಮಿತಿ ಪ್ರಮುಖವಾದವು.
‘ಅಮೆರಿಕ ಹಿಂದೆ ಸರಿದಿರುವ ಎಲ್ಲ ಮಾಹಿತಿಯನ್ನು ಪಡೆದು ಪ್ರತಿಕ್ರಿಯೆ ನೀಡಲಾಗುವುದು’ ಎಂದು ವಿಶ್ವಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
66 ಸಂಸ್ಥೆಗಳು ಕಳಪೆ ನಿರ್ವಹಣೆಯೊಂದಿಗೆ ತಮ್ಮದೇ ಕಾರ್ಯಸೂಚಿಗೆ ತಕ್ಕಂತೆ ನಡೆಯುತ್ತಿದ್ದು ಅಮೆರಿಕದ ಸಾರ್ವಭೌಮತೆ ಸ್ವಾತಂತ್ರ್ಯ ಸಮೃದ್ಧಿಗೂ ಬೆದರಿಕೆ ಒಡ್ಡುತ್ತಿವೆ–ಮಾರ್ಕೊ ರುಬಿಯೊ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ
ದೇಶದ ಹಿತಾಸಕ್ತಿಗೆ ಕೆಲಸ ಮಾಡದ ಹಲವು ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಅಮೆರಿಕ ಹೊರಬರುತ್ತದೆ. ನೆರವನ್ನೂ ನೀಡುವುದಿಲ್ಲ–ಮೈಕ್ ವಾಲ್ಟ್ಜ್, ವಿಶ್ವಸಂಸ್ಥೆಯ ಅಮೆರಿಕ ರಾಯಭಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.