ಸನಾದಲ್ಲಿ ನಡೆದ ದಾಳಿಯಿಂದಾಗಿ ಹೊಗೆ ಎದ್ದಿರುವುದು
–ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಯೆಮನ್‌ನಲ್ಲಿರುವ ಇರಾನ್ ಬೆಂಬಲಿತ ಹೂಥಿ ಬಂಡುಕೋರರ ನಿಯಂತ್ರಣದಲ್ಲಿರುವ ಸ್ಥಳಗಳನ್ನು ಗುರಿಯಾಗಿಸಿಕೊಂಡು ಶುಕ್ರವಾರ 15 ದಾಳಿಗಳನ್ನು ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.
ಯುದ್ಧ ವಿಮಾನ ಹಾಗೂ ಹಡಗುಗಳನ್ನು ಬಳಸಿ ದಾಳಿ ನಡೆಸಲಾಗಿದೆ. ಹೂಥಿ ಬಂಡುಕೋರರ ಆಕ್ರಮಣಕಾರಿ ಮಿಲಿಟರಿ ಸಾಮರ್ಥ್ಯಗಳ ಮೇಲೂ ದಾಳಿ ನಡೆಸಲಾಗಿದೆ ಎಂದು CENTCOM ‘ಎಕ್ಸ್’ ಪೋಸ್ಟ್‌ನಲ್ಲಿ ತಿಳಿಸಿದೆ.
ದಾಳಿಯ ಪರಿಣಾಮಗಳ ಬಗ್ಗೆ ಯಾವುದೇ ಮಾಹಿತಿಯನ್ನು ಅಮೆರಿಕ ಬಹಿರಂಗಪಡಿಸಿಲ್ಲ.
ಅಂತರರಾಷ್ಟ್ರೀಯ ಜಲಮಾರ್ಗಗಳ ಸುರಕ್ಷತೆ ಮತ್ತು ನಾವಿಕ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು, ಕೆಂಪು ಸಮುದ್ರವನ್ನು ಸುರಕ್ಷಿತ ಮತ್ತು ಭದ್ರಗೊಳಿಸುವ ಉದ್ದೇಶದಿಂದ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಯೆಮನ್ ರಾಜಧಾನಿ ಸನಾದಲ್ಲಿ 4, ಬಂದರು ನಗರಿ ಹುದೈದಾದ ಮೇಲೆ 7 ಹಾಗೂ ಧಮಾರ್ ಮೇಲೆ ಒಂದು ದಾಳಿ ನಡೆದಿದೆ ಎಂದು ಹೂಥಿ ಬಂಡುಕೋರರಿಗೆ ಸೇರಿದ ಮಸಿರಾ ಟಿ.ವಿ ವರದಿ ಮಾಡಿದೆ.
ಲೆಬನಾನ್‌ನಲ್ಲಿ ಇತ್ತೀಚೆಗೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತನಾದ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಬೆಂಬಲಾರ್ಥವಾಗಿ ಹೂಥಿ ಹಾಗೂ ಅವರ ಬೆಂಬಲಿಗರು ಸನಾದಲ್ಲಿ ವಾರದ ‘ಮಿಲಿಯನ್ ಮ್ಯಾನ್ ಮಾರ್ಚ್’ ಪ್ರತಿಭಟನೆ ನಡೆಸುತ್ತಿದ್ದ ವೇಳೆ ದಾಳಿ ನಡೆದಿದೆ.
ಯೆಮನ್ ಜನರನ್ನು ಭಯಭೀತಗೊಳಿಸಲು ನಡೆಸಿದ ಈ ದಾಳಿಗಳನ್ನು ‘ನಿರಾಶಾದಾಯಕ ಪ್ರಯತ್ನ’ ಎಂದು ಹೂಥಿ ಬಂಡುಕೋರರ ಅಧಿಕಾರಿ ಹಾಷಿಮ್ ಶರಫ್ ಅಲ್ ದೀನ್ ಹೇಳಿದ್ದಾರೆ. ಅಲ್ಲದೇ ಈ ದಾಳಿಗಳಿಂದ ನಮ್ಮನ್ನು ನಿರುತ್ಸಾಹಗೊಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಗಾಜಾಗೆ ಬೆಂಬಲವಾಗಿ ಕೆಂಪು ಸಮುದ್ರದಲ್ಲಿ ಚಲಿಸುವ ಹಡಗುಗಳನ್ನು ಗುರಿಯಾಗಿಸಿಕೊಂಡು ಹೂಥಿ ಬಂಡುಕೋರರು ದಾಳಿ ನಡೆಸುತ್ತಿದ್ದರು.
ತೈಲ ಹಾಗೂ ಇಂಧನ ಸಾಗಣೆಗೆ ಕೆಂಪು ಸಮುದ್ರ ಪ್ರಮುಖ ಜಲಮಾರ್ಗವಾಗಿದೆ. ಇತ್ತೀಚೆಗೆ ಏಡನ್ ಕೊಲ್ಲಿಯಲ್ಲಿ ಇಸ್ರೇಲ್ ನಂಟು ಹೊಂದಿರುವ ಸರಕು ಹಡಗುಗಳನ್ನು ಗುರಿಯಾಗಿಸಿಕೊಂಡು ಹೂಥಿ ಬಂಡುಕೋರರು ದಾಳಿ ನಡೆಸಿದ್ದರು.
(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.