ADVERTISEMENT

ಭಾರತದ ಔಷಧಿ ಕಂಪನಿಯ ಸಿರಪ್ ಸೇವಿಸಿ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವು: ಆರೋಪ

ಐಎಎನ್ಎಸ್
Published 29 ಡಿಸೆಂಬರ್ 2022, 9:58 IST
Last Updated 29 ಡಿಸೆಂಬರ್ 2022, 9:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಭಾರತದ ಔಷಧೀಯ ಸಂಸ್ಥೆ ‘ಮರಿಯನ್ ಬಯೋಟೆಕ್’ ತಯಾರಿಸಿದ ಕೆಮ್ಮಿನ ಸಿರಪ್ ಸೇವನೆಯಿಂದ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸರ್ಕಾರ ಆರೋಪಿಸಿದೆ.

‘ತೀವ್ರವಾದ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದ 21 ಮಕ್ಕಳ ಪೈಕಿ 18 ಮಕ್ಕಳು ‘ಮರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್’ ತಯಾರಿಸಿದ ‘ಡಾಕ್ -1 ಮ್ಯಾಕ್ಸ್’ ಸಿರಪ್ ತೆಗೆದುಕೊಂಡ ಪರಿಣಾಮವಾಗಿ ಸಾವಿಗೀಡಾಗಿದ್ದಾರೆ’ ಎಂದು ಉಜ್ಬೇಕಿಸ್ತಾನ ಆರೋಗ್ಯ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ಮೃತ ಮಕ್ಕಳು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗುವುದಕ್ಕೂ ಮೊದಲು ‘ಡಾಕ್ -1 ಮ್ಯಾಕ್ಸ್’ ಔಷಧಿಯನ್ನು 2-7 ದಿನಗಳವರೆಗೆ, ದಿನಕ್ಕೆ 3-4 ಬಾರಿ, 2.5-5 ಮಿಲಿಯಂತೆ ತೆಗೆದುಕೊಂಡಿದ್ದರು. ಆದರೆ, ಇದು ಮಕ್ಕಳಿಗೆ ನಿಗದಿ ಪಡಿಸಲಾಗಿರುವ ಔಷಧದ ಪ್ರಮಾಣಕ್ಕೂ ಹೆಚ್ಚು’ ಎಂದು ಸರ್ಕಾರ ಹೇಳಿದೆ.

ADVERTISEMENT

ದುರಂತಕ್ಕೆ ಕಾರಣವಾಗಿರಬಹುದಾದ ಎರಡು ಪ್ರಮುಖ ಅಂಶಗಳನ್ನು ಉಜ್ಬೇಕಿಸ್ತಾನ ಆರೋಗ್ಯ ಸಚಿವಾಲಯ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಔಷಧದ ಅಗತ್ಯವೇ ಇಲ್ಲದ ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಔಷಧ ನೀಡಿರುವುದು. ಮತ್ತು, ಸಿರಪ್‌ನಲ್ಲಿ ಪತ್ತೆಯಾಗಿರುವ ಎಥಿಲೀನ್ ಗ್ಲೈಕೋಲ್‌ನ ಎಂಬ ವಿಷಕಾರಿ ರಾಸಾಯನಿಕ. ಆಫ್ರಿಕಾ ರಾಷ್ಟ್ರ ಗಾಂಬಿಯಾದಲ್ಲಿ ನಡೆದಿದ್ದ ದುರಂತದಲ್ಲಿಯೂ ಈ ರಾಸಾಯನಿಕ ಪತ್ತೆಯಾಗಿತ್ತು.

‘ವೈದ್ಯರ ಸೂಚನೆ ಇಲ್ಲದೆ ಮಕ್ಕಳಿಗೆ ‘ಡಾಕ್ -1 ಮ್ಯಾಕ್ಸ್’ ನೀಡಲಾಗಿದೆ. ಈ ಔಷಧಿಯ ಮುಖ್ಯ ಧಾತು ಪ್ಯಾರಾಸಿಟಮಾಲ್‌. ಆದರೆ, ಶೀತಕ್ಕೆ ಪರಿಹಾರವಾಗಿ ಸಿರಪ್ಪನ್ನು ಪೋಷಕರು ಸ್ವಂತ ವಿವೇಚನೆ ಅಥವಾ ಔಷಧ ಮಾರಾಟಗಾರರ ಶಿಫಾರಸಿನ ಮೇರೆಗೆ ತಪ್ಪಾಗಿ ನೀಡಿದ್ದಾರೆ. ಹೀಗಾಗಿ ಮಕ್ಕಳ ಪರಿಸ್ಥಿತಿ ಹದಗೆಟ್ಟಿದೆ’ ಎಂದು ಉಜ್ಬೆಕ್ ಸರ್ಕಾರ ಹೇಳಿದೆ.

‘ಡಾಕ್-1 ಮ್ಯಾಕ್ಸ್ ಸಿರಪ್‌ ಎಥಿಲೀನ್ ಗ್ಲೈಕೋಲ್ ಅನ್ನೂ ಒಳಗೊಂಡಿದೆ. ಈ ವಸ್ತುವು ವಿಷಕಾರಿ. ಇದು ರೋಗಿಯ ಆರೋಗ್ಯದಲ್ಲಿ ಗಂಭೀರ ಬದಲಾವಣೆಗಳನ್ನು ಉಂಟುಮಾಡಬಲ್ಲದು. ಉದಾಹರಣೆಗೆ ವಾಂತಿ, ಮೂರ್ಛೆ, ಸೆಳೆತ, ಹೃದಯ ರಕ್ತನಾಳದ ಸಮಸ್ಯೆಗಳು ಮತ್ತು ಮೂತ್ರಪಿಂಡ ವೈಫಲ್ಯದಂಥ ಸಮಸ್ಯೆಗಳು ಎದುರಾಗಬಹುದು’ ಎಂದು ಉಜ್ಬೇಕಿಸ್ತಾನ್ ಅಧಿಕಾರಿಗಳು ಹೇಳಿದರು.

ಗ್ಯಾಂಬಿಯಾದಲ್ಲಿ 70 ಮಕ್ಕಳ ಸಾವಿಗೆ ಕಾರಣವಾಗಿದ್ದ ನಾಲ್ಕು ವಿಧದ ಕೆಮ್ಮಿನ ಸಿರಪ್‌ (ಹರಿಯಾಣದ ಮೈಡೆನ್‌ ಫಾರ್ಮಾಸ್ಯುಟಿಕಲ್ಸ್‌ ತಯಾರಿಸಿದ ಸಿರಪ್‌)ಗಳಲ್ಲಿ ಎಥಿಲೀನ್‌ ಗ್ಲೈಕಾಲ್ ಮತ್ತು ಡೈಥಿಲೀನ್ ಗ್ಲೈಕೋಲ್ ಇತ್ತು ಎಂದು ವಿಶ್ವ ಆರೋಗ್ಯ ಇಲಾಖೆ ಅಕ್ಟೋಬರ್‌ನಲ್ಲಿ ತಿಳಿಸಿತ್ತು. ಇದೇ ಅಂಶಗಳು ಮಕ್ಕಳ ಸಾವಿಗೆ ಕಾರಣ ಎಂದೂ ಡಬ್ಲ್ಯುಎಚ್‌ಒ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.