ADVERTISEMENT

ಟ್ರಂಪ್‌, ಬೈಡನ್‌ ಬೆಂಬಲಿಗರು ಮುಖಾಮುಖಿ; ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

ಪಿಟಿಐ
Published 15 ನವೆಂಬರ್ 2020, 10:41 IST
Last Updated 15 ನವೆಂಬರ್ 2020, 10:41 IST
ವಾಷಿಂಗ್ಟನ್‌ ಡಿಸಿಯಲ್ಲಿ ಎರಡು ಬಣಗಳ ಪ್ರತಿಭಟನಕಾರರು ಹೊಡೆದಾಡುತ್ತಿರುವುದು – ಎಎಫ್‌‍ಪಿ ಚಿತ್ರ
ವಾಷಿಂಗ್ಟನ್‌ ಡಿಸಿಯಲ್ಲಿ ಎರಡು ಬಣಗಳ ಪ್ರತಿಭಟನಕಾರರು ಹೊಡೆದಾಡುತ್ತಿರುವುದು – ಎಎಫ್‌‍ಪಿ ಚಿತ್ರ   

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಾದವನ್ನು ಬೆಂಬಲಿಸಿ ಅವರ ಬೆಂಬಲಿಗರು ಶನಿವಾರ ಹಲವೆಡೆ ರ‍್ಯಾಲಿ ನಡೆಸಿದ್ದು, ಈ ವೇಳೆ ಹಿಂಸಾಚಾರ ಭುಗಿಲೆದ್ದಿದೆ.

ಒಂದೆಡೆ ಟ್ರಂಪ್‌ ಬೆಂಬಲಿಗರು ಚುನಾವಣಾ ಫಲಿತಾಂಶದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದಡೆ ಜೋ ಬೈಡನ್ ಗೆಲುವನ್ನು ಸಂಭ್ರಮಿಸಿ ಅವರ ಬೆಂಬಲಿಗರು ರ‍್ಯಾಲಿ ನಡೆಸಿದರು. ಆದರೆ ಶ್ವೇತಭವನದಿಂದ ಸ್ವಲ್ಪ ದೂರದಲ್ಲಿ ಎರಡು ಬಣಗಳು ಮುಖಾಮುಖಿಯಾಗಿದ್ದು, ಶಾಂತಿಯುತ ರ‍್ಯಾಲಿಯು ಹಿಂಸಾಚಾರಕ್ಕೆ ತಿರುಗಿತು.

ಈ ವೇಳೆ ‘ಬ್ಲ್ಯಾಕ್‌ ಲೈಫ್‌ ಮ್ಯಾಟರ್‌’ ಪ್ರತಿಭಟನಕಾರೊಬ್ಬರು ಚಾಕು ಇರಿತಗೊಳಗಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಪೊಲೀಸ್‌ ಅಧಿಕಾರಿಗಳಿಗೂ ಗಾಯಗಳಾಗಿವೆ ಎಂದು ವರದಿಯೊಂದು ಹೇಳಿದೆ.

ADVERTISEMENT

ಟ್ರಂಪ್‌ ವಿರೋಧಿ ಪ್ರತಿಭನಕಾರರು ಟ್ರಂಪ್‌ ಬೆಂಬಲಿಗರ ಮೇಲೆ ಮೊಟ್ಟೆ ಎಸೆದಿದ್ದಾರೆ. ಬ್ಯಾನರ್‌,ಟೋಪಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಫಾಕ್ಸ್‌ ನ್ಯೂಸ್‌ ವರದಿ ಮಾಡಿದೆ.

ಈ ಗಲಭೆಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ವಿಡಿಯೊದಲ್ಲಿ ಎರಡು ಬಣದ ಬೆಂಬಲಿಗರು ಪರಸ್ಪರ ಹೊಡೆದಾಡುತ್ತಿರುವುದು ಕಂಡುಬಂದಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಟ್ರಂಪ್‌,‘ ನ್ಯೂಸ್‌ ಚಾನೆಲ್‌ಗಳು ಜೋ ಬೈಡನ್‌ ಬೆಂಬಲಿಗರು ನಡೆಸಿದ ರ‍್ಯಾಲಿಯನ್ನು ಪ್ರಸಾರ ಮಾಡುತ್ತಿಲ್ಲ. ಕೇವಲ ನನ್ನ ಬೆಂಬಲಿಗರ ಪೋಟೊಗಳನ್ನು ತೋರಿಸುತ್ತಿದ್ದಾರೆ. ನಮ್ಮನ್ನು ಮಾಧ್ಯಮದವರೂ ಕೂಡ ತಡೆಯುತ್ತಿದ್ದಾರೆ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.