ADVERTISEMENT

ನಮ್ಮ ದೇಶದಲ್ಲಿ ಖಮೇನಿ ಅವರನ್ನು ಶ್ರೇಷ್ಠ ನಾಯಕ ಎನ್ನುತ್ತೇವೆ: ಪುಟಿನ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 15:54 IST
Last Updated 1 ಮಾರ್ಚ್ 2026, 15:54 IST
ಅಯತೊಲ್ಲಾ ಅಲಿ ಖಮೇನಿ
ಅಯತೊಲ್ಲಾ ಅಲಿ ಖಮೇನಿ   

ಮಾಸ್ಕೊ: ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹಾಗೂ ಅವರ ಕುಟುಂಬಸ್ಥರ ಹತ್ಯೆಯ ಮೂಲಕ ಮಾನವೀಯ ಮೌಲ್ಯಗಳು ಹಾಗೂ ಅಂತರರಾಷ್ಟ್ರೀಯ ಕಾನೂನುಗಳನ್ನು ಕಗ್ಗೊಲೆ ಮಾಡಲಾಗಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ. 

ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್‌ ಅವರಿಗೆ ಬರೆದ ಪತ್ರದಲ್ಲಿ ಪುಟಿನ್‌ ಈ ರೀತಿ ಸಂತಾಪ ಸೂಚಿಸಿದ್ದಾರೆಂದು ಕ್ರೆಮ್ಲಿನ್‌ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

‘ರಷ್ಯಾ–ಇರಾನ್‌ ನಡುವಿನ ಸ್ನೇಹ ಸಂಬಂಧವನ್ನು ವೃದ್ಧಿಸುವಲ್ಲಿ ಹಾಗೂ ಉಭಯ ರಾಷ್ಟ್ರಗಳ ನಡುವೆ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯನ್ನು ಸಾಕಾರಗೊಳಿಸುವಲ್ಲಿ ಖಮೇನಿ ಬಹುಮುಖ್ಯ ಪಾತ್ರ ವಹಿಸಿದ್ದರು. ಅವರನ್ನು ನಮ್ಮ ದೇಶದಲ್ಲಿ ಶ್ರೇಷ್ಠ ನಾಯಕ ಎಂದೇ ಸ್ಮರಿಸಲಾಗುವುದು’ ಎಂದೂ ಪುಟಿನ್‌ ಹೇಳಿದ್ದಾರೆ.

ADVERTISEMENT

ಸಿರಿಯಾ, ವೆನೆಜುವೆಲಾದಲ್ಲಿ ಆಡಳಿತ ಪತನದ ಬೆನ್ನಲ್ಲೇ ಇದೀಗ ರಷ್ಯಾದ ಮತ್ತೊಂದು ಮೈತ್ರಿ ರಾಷ್ಟ್ರವಾದ ಇರಾನ್‌ನಲ್ಲಿಯೂ ಬಿಕ್ಕಟ್ಟು ಸೃಷ್ಟಿಯಾಗಿರುವುದು ಮಾಸ್ಕೋಗೆ ಮತ್ತಷ್ಟು ಸವಾಲುಗಳನ್ನು ಒಡ್ಡಬಹುದು ಎಂದೂ ವಿಶ್ಲೇಷಿಸಲಾಗಿದೆ. 

ಸಂತಾಪ ಬಿಟ್ಟು ಬೇರೇನೂ ಇಲ್ಲ

ಖಮೇನಿ ಹತ್ಯೆ ಖಂಡಿಸಿ ಸಂತಾಪ ಸೂಚಿಸಿದ್ದನ್ನು ಬಿಟ್ಟರೆ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಇರಾನ್‌ಗೆ ಬೆಂಬಲವಾಗಿ ಯಾವುದೇ ಕ್ರಮವನ್ನೂ ಪುಟಿನ್‌ ಘೋಷಿಸಿಲ್ಲ ಎಂದು ಕೆಲವು ಇರಾನಿಯನ್ನರು ಅಭಿಪ್ರಾಯಪಟ್ಟಿದ್ದಾರೆ.

ಉಕ್ರೇನ್‌ ಮೇಲಿನ ಯುದ್ಧಕ್ಕಾಗಿ ಇರಾನ್‌ನಿಂದಲೇ ಶಸ್ತ್ರಾಸ್ತ್ರಗಳನ್ನು ರಷ್ಯಾ ಖರೀದಿಸಿತ್ತು. ಜತೆಗೆ ಕಳೆದವರ್ಷವಷ್ಟೇ 20 ವರ್ಷಗಳ ಅವಧಿಯ ಕಾರ್ಯತಂತ್ರ ಪಾಲುದಾರಿಕೆಗೆ ಸಂಬಂಧಿಸಿದ ಒಪ್ಪಂದವನ್ನೂ ಉಭಯ ರಾಷ್ಟ್ರಗಳು ಮಾಡಿಕೊಂಡಿದ್ದವು. ಆದಾಗ್ಯೂ, ರಷ್ಯಾ ಯಾವುದೇ ಪರಿಹಾರ ಕ್ರಮಕ್ಕೆ ಮುಂದಾಗಿಲ್ಲ ಎನ್ನಲಾಗಿದೆ.

ಇತ್ತ ಪ್ರಸಕ್ತ ಪರಿಸ್ಥಿತಿಯ ಕಾರಣ ಕೊಲ್ಲಿ ರಾಷ್ಟ್ರಗಳಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾದರೆ ರಷ್ಯಾದ ತೈಲಕ್ಕೆ ಬೇಡಿಕೆ ಸೃಷ್ಟಿಯಾಗುವ ಮೂಲಕ ಆರ್ಥಿಕತೆ ಬಲಗೊಳಿಸಲು ಈ ಸಂದರ್ಭ ಸಾಕಾರವಾಗುತ್ತದೆ ಎಂದೂ ತಜ್ಞರು ವಿಶ್ಲೇಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.